Advertisement

ಮಣ್ಣಿನ ಮಡಕೆ ಕಾಂಪೋಸ್ಟ್‌ : ರಾಮಕೃಷ್ಣ ಮಿಷನ್‌ ಜತೆ ಕೈಜೋಡಿಸಿದ ಮನಪಾ

06:21 AM Feb 09, 2019 | |

ಮಹಾನಗರ: ನಗರದ ರಾಮಕೃಷ್ಣ ಮಿಷನ್‌ ಹಸಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಮಣ್ಣಿನ ಮಡಕೆ ಕಾಂಪೋಸ್ಟ್‌ ಮೂಲಕ ವಿನೂತನ ಪ್ರಯೋಗಕ್ಕೆ , ಇದೀಗ ರಾಮಕೃಷ್ಣ ಮಿಷನ್‌ನ ಜತೆ ಮನಪಾ ಕೈ ಜೋಡಿಸಿದೆ.

Advertisement

ಮಣ್ಣಿನ ಮಡಕೆ ಕಾಂಪೋಸ್ಟ್‌ ಮಾಡುವ ಕುರಿತಾಗಿ ಪಾಲಿಕೆ ಸಿಬಂದಿಗೆ ವಿವಿಧ ಹಂತಗಳಲ್ಲಿ ಮಾಹಿತಿ ಆಯೋಜಿಸುತ್ತಿದೆ. ಅದರೊಂದಿಗೆ ಸಾರ್ವಜನಿಕರಿಗೆ ಮಡಕೆ ವಿತರಣೆಗೆ ಸಿದ್ಧತೆ ನಡೆಸಿದೆ.

ಪಾಲಿಕೆಗೆ ಹಸಿ ಕಸ ನಿರ್ವಹಣೆ ಬಹುಡೊಡ್ಡ ತಲೆನೋವಾಗಿದ್ದು, ಸಾರ್ವಜನಿಕರಲ್ಲಿ ಹಸಿಕಸ, ಒಣಕಸ ಪ್ರತ್ಯೇಕಿಸಲು ಮನವಿ ಮಾಡಿದರೂ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ನಡುವೆ ರಾಮಕೃಷ್ಣ ಮಿಷನ್‌ ಹಸಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡುವುದಕ್ಕೆ ಮಣ್ಣಿನ ಮಡಕೆ ಕಾಂಪೋಸ್ಟನ್ನು ಪ್ರಾಯೋಗಿಕವಾಗಿ ಕೆಲವು ಮನೆಗಳಲ್ಲಿ ಮಾಡಿ ಯಶಸ್ವಿಯಾಗಿತ್ತು. ಇದಕ್ಕಾಗಿ ಸುಮಾರು 1,000 ಮಡಕೆಗಳನ್ನು ನಗರದ ವಿವಿಧ ಭಾಗದ ಜನರಿಗೆ ನೀಡಿದ್ದು, ಉತ್ತಮ ಸ್ಪಂದನೆ ದೊರೆತ ಬಳಿಕ ಪಾಲಿಕೆಯನ್ನು ಸಂಪರ್ಕಿಸಿತ್ತು. ಅದು ಒಲವು ತೋರಿದೆ. ಹೀಗಾಗಿ ಪಾಲಿಕೆ ಸಿಬಂದಿಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಬಂದಿ ಮನೆಯಲ್ಲಿ ಪ್ರಾಯೋಗಿಕವಾಗಿ ಕಾಂಪೋಸ್ಟ್‌ ಮಾಡಿ ಫಲಿತಾಂಶ ಸೂಚಿಸುವಂತೆ ತಿಳಿಸಿದೆ. ಅದರೊಂದಿಗೆ 5,000 ಮನೆಗಳಿಗೆ ಮಡಕೆಯನ್ನು ವಿತರಿಸುವ ಯೋಜನೆ ರೂಪಿಸಿದೆ.

ಪಾಲಿಕೆ ಬಜೆಟ್‌ನಲ್ಲೂ ಪ್ರಸ್ತಾವ
ಮನೆಗಳ ಹಂತದಲ್ಲೇ ಹಸಿ ತ್ಯಾಜ್ಯ ಸಂಸ್ಕರಿಸುವ ಯೋಜನೆಯಡಿ ಮೊದಲ ಹಂತದಲ್ಲಿ 5 ಸಾವಿರ ಮನೆಗಳಲ್ಲಿ ಹಸಿತ್ಯಾಜ್ಯ ಸಂಸ್ಕರಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಉತ್ಪಾದನೆ ಹಂತದಲ್ಲೇ ತ್ಯಾಜ್ಯ ಪ್ರಮಾಣ ಕಡಿತಗೊಳಿಸಲು ನಾಗರಿಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಪಾಲಿಕೆ ಬಜೆಟ್‌ನಲ್ಲಿ ಪ್ರಸ್ತಾವ ಮಾಡಲಾಗಿತ್ತು.

ಮಣ್ಣಿನ ಮಡಕೆ ಕಾಂಪೋಸ್ಟ್‌ ಹೇಗೆ?
ಮಣ್ಣಿನ ಮೂರು ಮಡಕೆಗಳನ್ನು ಕೊಡಲಾಗುತ್ತದೆ. ಅದರ ಕೆಳಗಿನ ಭಾಗದ ಮಡಕೆಯ ಮೇಲೆ ಮೇಲಿಂದ ಮೇಲೆ ಎರಡು ಮಡಕೆಗಳನ್ನು ಇಡಲಾಗುತ್ತದೆ. ಮೇಲಿನ ಎರಡು ಮಡಕೆಯ ಕೆಳಭಾಗದಲ್ಲೂ ಪೇಪರ್‌ ಇಟ್ಟು ಮುಚ್ಚಬೇಕು. ಮೇಲಿನ ಮಡಕೆಯಲ್ಲಿ ನೀರು ರಹಿತ ಹಸಿ ಕಸಗಳನ್ನು ಹಾಕಬೇಕು. ಅದರ ಮೇಲೆ ತೆಂಗಿನ ನಾರು ಹಾಕಬಹುದು ಅಥವಾ ಮಡಕೆಯೊಂದಿಗೆ ನೀಡಿದ ಕಾಂಪೋಸ್ಟ್‌ ಪೌಡರ್‌ನ್ನು ಹಾಕಬಹುದು. ಹೀಗೆ ಕೆಲವು ದಿನಗಳಲ್ಲಿ ಈ ಮಡಕೆ ತುಂಬುತ್ತದೆ. ಆಗ ಅದನ್ನು ತೆಗೆದು ಕೊನೆಯ ಮಡಕೆಗೆ ಹಾಕಬಹುದು. ಮತ್ತೆ ಎರಡನೇ ಮಡಕೆ ಮೇಲೆ ಇಟ್ಟು ಅದಕ್ಕೆ ಹಸಿ ಕಸಗಳನ್ನು ಹಾಕಲಾಗುತ್ತದೆ. ಹೀಗೆ ಮನೆಯ ಹಸಿ ತ್ಯಾಜ್ಯದಿಂದಲೇ ಗೊಬ್ಬರ ತಯಾರಿಸಬಹುದಾಗಿದೆ. ಇದಕ್ಕಾಗಿ ರಾಮಕೃಷ್ಣ ಮಿಷನ್‌ ಹಾಗೂ ಪಾಲಿಕೆ ತಲಾ 500 ರೂ. ಗಳನ್ನು ಸಾರ್ವಜನಿಕರಿಂದ ಪಡೆದುಕೊಳ್ಳಲಿದೆ.

Advertisement

ಗೊಬ್ಬರಕ್ಕೆ ಕೆಜಿಗೆ 25 ರೂ.
ಮನೆಯ ಹಸಿ ತ್ಯಾಜ್ಯಗಳನ್ನು ಡಂಪಿಂಗ್‌ ಯಾರ್ಡ್‌ಗೆ ಕಳುಹಿಸುವ ಬದಲು ಗೊಬ್ಬರವಾಗಿ ಪರಿವರ್ತಿಸಬಹುದಾಗಿದೆ. ಗೊಬ್ಬರವನ್ನು ಮನೆಯ ಗಾರ್ಡನ್‌ಗೆ ಬಳಸಬಹುದು. ತ್ಯಾಜ್ಯಗಳಿಂದ ಉಂಟಾದ ಗೊಬ್ಬರಕ್ಕೆ ಕೆಜಿಗೆ 25 ರೂ. ಇದೆ. ಭವಿಷ್ಯದಲ್ಲಿ ಆ ಹಣ ಪಾವತಿಸಿ ಗೊಬ್ಬರ ಸಂಗ್ರಹಿಸಲು ಮಠ ಸಿದ್ಧವಿದೆ. ಈ ಯೋಜನೆಯನ್ನು ಪ್ರತಿ ಮನೆಗಳಲ್ಲೂ ಬಳಸುವುದರಿಂದ ಮಣ್ಣಿನ ಮಡಕೆ ಮಾಡುವವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಮಠದ ಏಕಗಮ್ಯಾನಂದ ಸ್ವಾಮೀಜಿ ತಿಳಿಸುತ್ತಾರೆ.

ಹಸಿತ್ಯಾಜ್ಯ ನಿರ್ವಹಣೆ ಬಜೆಟ್‌ನಲ್ಲಿ ಪ್ರಸ್ತಾವ
ಹಸಿಕಸ ಒಣಕಸ ಪ್ರತ್ಯೇಕಿಸದೆ ಕೊಡುವುದು ಹಸಿತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ಮಣ್ಣಿನ ಮಡಕೆ ಕಾಂಪೋಸ್ಟ್‌ ಮಾಡಲು ರಾಮಕೃಷ್ಣ ಮಿಷನ್‌ ನೊಂದಿಗೆ ಕೈ ಜೋಡಿಸಿದ್ದೇವೆ. 5,000 ಮನೆಗಳಿಗೆ ಮಡಕೆ ವಿತರಣೆ ಮಾಡುವ ಗುರಿ ಹೊಂದಲಾಗಿದೆ.
ಭಾಸ್ಕರ್‌ ಕೆ., ಮೇಯರ್‌

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next