Advertisement

ಮಣ್ಣಿನ ಸಂರಕ್ಷ ಣೆ ಪ್ರತಿಯೊಬ್ಬರ ಹೊಣೆಯಾಗಲಿ: ಡಾ|ಮಹಾಂತೇಶ

01:18 PM Apr 09, 2022 | Shwetha M |

ವಿಜಯಪುರ: ಮಣ್ಣು, ನೀರು, ಗಾಳಿ ಸೇರಿದಂತೆ ಪಂಚಮಹಾಭೂತಗಳಿಂದ ಕೂಡಿದ ಈ ಪ್ರಕೃತಿ ಲಕ್ಷಾಂತರ ವರ್ಷಗಳಿಂದ ಇದೆ. ಈ ಪ್ರಕೃತಿಯನ್ನು ಸಹಜವಾಗಿಯೇ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿರುವುದು ನಮ್ಮ ಮೇಲಿರುವ ಭಾರಿ ದೊಡ್ಡ ಹೊಣೆ. ಹೀಗಾಗಿ ಪ್ರಕೃತಿಯ ಭಾಗವಾಗಿರುವ ಮಣ್ಣನ್ನು ಉಳಿಸುವುದು ನಮ್ಮ ಕರ್ತವ್ಯವಾಗಲಿ ಎಂದು ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ ಅಧ್ಯಕ್ಷ ಡಾ| ಮಹಾಂತೇಶ ಬಿರಾದಾರ ಹೇಳಿದರು.

Advertisement

ಶುಕ್ರವಾರ ಇಶಾ ಫೌಂಡೇಶನ್‌ ಮಣ್ಣು ಉಳಿಸಿ ಅಭಿಯಾನ ಅಂಗವಾಗಿ ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ ನಗರದಲ್ಲಿ ಹಮ್ಮಿಕೊಂಡಿದ್ದ ಸೈಕಲ್‌ ಜಾಗೃತಿ ಜಾಥಾ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡು ಪ್ರಮುಖ ಮಾರ್ಗದಲ್ಲಿ ಸಂಚರಿಸಿ, ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಮುಕ್ತಾಯ ಕಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ| ಮಹಾಂತೇಶ ಬಿರಾದಾರ, ಸೈಕಲ್‌ ಜಾಥಾದಲ್ಲಿ ಮಾತನಾಡಿದ ಅವರು, ಮಣ್ಣು ಪ್ರಕೃತಿ ನಮಗೆ ನೀಡಿರುವ ಪವಿತ್ರ ಕೊಡುಗೆ. ಮನುಷ್ಯನ ಆಹಾರ ಉತ್ಪಾದನೆಯ ಮೂಲವೇ ಭೂಮಿ ಹಾಗೂ ಅದರ ಮೇಲಿರುವ ಮಣ್ಣು ಎಂದರು.

ಕೆಲವೇ ದಶಕಗಳ ಹಿಂದೆ ಫಲವತ್ತಾಗಿದ್ದ ಮಣ್ಣನ್ನು ಅವೈಜ್ಞಾನಿಕ ರಾಸಾಯನಿಕ ಬಳಸಿ, ಫಲವತ್ತಾದ ಭೂಮಿಯನ್ನು ಬಂಜರು ಮಾಡಿದ್ದೇವೆ. ಮಣ್ಣು ಕಲುಷಿತಗೊಂಡು, ಬೆಳೆಗಳು ವಿಷಯುಕ್ತಗೊಂಡು, ಕ್ಯಾನ್ಸರ್‌ ನಂತಹ ಕಾಯಿಲೆಗಳು ಹೆಚ್ಚುತ್ತಿವೆ. ನೀರಾವರಿ ಹೆಚ್ಚಿದಂತೆಲ್ಲ ಅತಿರೇಕದ ನೀರಿನ ಬಳಕೆಯಿಂದ ಮಣ್ಣಿನ ಫಲವತ್ತತೆ ಕಳೆದು, ಕ್ಷಾರತೆ ಹೆಚ್ಚುತ್ತಿದೆ. ಆದ್ದರಿಂದ ಮಣ್ಣಿನ ಮೂಲ ಸ್ವರೂಪವನ್ನು ಸಂರಕ್ಷಿಸುವ ಉದ್ದೇಶದಿಂದ ಅಗತ್ಯದಷ್ಟು ನೀರನ್ನು ಮಾತ್ರ ಬಳಸಬೇಕು ಎಂದು ಸಲಹೆ ನೀಡಿದರು.

ಸದ್ಯ ಪುಣೆಯಲ್ಲಿ ನೆಲೆಸಿರುವ ವೃತ್ತಿಯಲ್ಲಿ ಮರಿನ್‌ ಎಂಜಿನಿಯರ್‌ ಆಗಿರುವ ಸಾಗರ ಎಂಬವರು ಮಣ್ಣಿನ ಸಂರಕ್ಷಣೆ ಜಾಗೃತಿಗಾಗಿ ಕೊಯಮುತ್ತೂರ್‌ ಮಹಾನಗರದಿಂದ ಪುಣೆಯವರೆಗೆ 1500 ಕಿ.ಮೀ. ಸೈಕಲ್‌ ಜಾಗೃತಿ ಜಾಥಾ ನಡೆಸಿದ್ದು ಹಲವರಿಗೆ ಅನುಕರಣೀಯ ಎಂದರು. ಇಶಾ ಫೌಂಡೇಶನ್‌ನ ಬಸವರಾಜ ಗುರುಜಿ ಬಿರಾದಾರ, ಸೈಕ್ಲಿಂಗ್‌ ಗ್ರುಪ್‌ನ ಶಿವನಗೌಡ ಪಾಟೀಲ, ಸೋಮಶೇಖ ಸ್ವಾಮಿ, ಶಿವರಾಜ ಪಾಟೀಲ, ಸೋಮು ಮಠ, ಸಮೀರ ಬಳಗಾರ, ಸಂದೀಪ ಮಡಗೊಂಡ, ಡಿ.ಕೆ. ತಾವಸೆ ಸೇರಿದಂತೆ ಇತರರು ಸಾಗರ ಅವರನ್ನು ಸನ್ಮಾನಿಸಿದರು. ಪ್ರಗತಿಪರ ರೈತ ಎಸ್‌.ಟಿ.ಪಾಟೀಲ ಮಣ್ಣಿನ ಸಂರಕ್ಷಣೆ ಅಗತ್ಯದ ಕುರಿತು ಗೀತೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next