ಹೊನ್ನಾಳಿ: ದತ್ತಿ ಉಪನ್ಯಾಸಗಳ ಮೂಲಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಹೇಳಿದರು.
ತಾಲೂಕಿನ ಕತ್ತಿಗೆ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ತಗ್ಗಿಹಳ್ಳಿ ನಾಗಮ್ಮ ಅಂಗಡಿ ಕೆಂಚಪ್ಪ, ಎಚ್.ಪಿ. ಪ್ರಭಾವತಿ ಹಾಗೂ ಬೋರ್‌ಪಾಯಿಂಟ್ ಬೀರಪ್ಪ ಸರೋಜಮ್ಮ ದತ್ತಿ ಉಪನ್ಯಾಸ ಮತ್ತು 2016-17ನೇ ಸಾಲಿನ ದತ್ತಿ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು-ನುಡಿಯ ಮೇಲೆ ಅನಾದಿ ಕಾಲದಿಂದಲೂ ಆಕ್ರಮಣ ನಡೆಯುತ್ತಿದೆ. ನಾಡಿನ ವಿವಿಧ ಪ್ರಾಂತ್ಯಗಳಲ್ಲಿ ಕನ್ನಡ ಭಾಷೆಗೆ ಆತಂಕ ಎದುರಾಗಿದೆ. ಕನ್ನಡಿಗರ ಮೃದು ಧೋರಣೆಯಿಂದ ಕನ್ನಡ ಭಾಷೆಗೆ ಧಕ್ಕೆ ಉಂಟಾಗಿದೆ. ಇದನ್ನು ಸಮರ್ಥವಾಗಿ ಎದುರಿಸಬೇಕು ಎಂದು ತಿಳಿಸಿದರು.
ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ತೀರ್ಥಲಿಂಗಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ಹಿಂದೆಂದಿಗಿಂತ ಇಂದು ಹೆಚ್ಚಿನ ಆತಂಕ ಎದುರಾಗಿದೆ. ಇದನ್ನು ಎದುರಿಸಲು ನಾವೆಲ್ಲರೂ ಸಿದ್ಧರಾಗಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕುರುಬರ ಇತಿಹಾಸ ಎಂಬ ವಿಷಯದ ಬಗ್ಗೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ ಮತ್ತು ಕನಕದಾಸರು ಮತ್ತು ಅವರ ಸಾಹಿತ್ಯ-ಸಂದೇಶ ಎಂಬ ವಿಷಯದ ಬಗ್ಗೆ ಸಾಹಿತಿ ರಾಮಗಿರಿ ಎಸ್. ಕರಿಸಿದಪ್ಪ ಕುಂಬಾರ್ ಉಪನ್ಯಾಸ ನೀಡಿದರು. ಕತ್ತಿಗೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೆ. ಹುಚ್ಚಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕತ್ತಿಗೆ ಗ್ರಾಮದ ಬಿ. ರುದ್ರಮ್ಮ ಮತ್ತು ಬಿ. ಜಯಮ್ಮ ಸೋಬಾನೆ ಪದ ಹಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಕೆ.ಪಿ. ಗಂಗನಗೌಡ, ಕಸಾಪ ಉಪಾಧ್ಯಕ್ಷ ಜಿ. ಶಂಕರಪ್ಪ, ಕಾರ್ಯದರ್ಶಿ ಕೆ. ಶೇಖರಪ್ಪ, ಚುಟುಕು ಸಾಹಿತಿ ಮತ್ತು ಕಸಾಪ ಗೌರವ ಸದಸ್ಯ ಬಿ. ತಿಮ್ಮನಗೌಡ, ಮುಖಂಡರಾದ ಜಿ. ಮಹೇಶ್ವರಪ್ಪ, ಎಸ್. ನಾಗರಾಜ್, ಶಿಕ್ಷಕರಾದ ಕೆ.ಎಸ್. ಪರಮೇಶ್ವರಪ್ಪ, ಪ್ರೇಮಾಬಾಯಿ, ರಾಜಶೇಖರ್, ಮಲ್ಲಪ್ಪ, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.