Advertisement

ಆಸ್ಟ್ರೇಲಿಯನ್‌ ಓಪನ್‌: ಮಹಿಳಾ ಫೈನಲ್‌ ನಲ್ಲಿ ಮುಗುರುಜಾ-ಸೋಫಿಯಾ ಹಣಾಹಣಿ

09:26 AM Jan 31, 2020 | keerthan |

ಮೆಲ್ಬರ್ನ್: ಯಾವುದೇ ನಿರೀಕ್ಷೆ ಹೊತ್ತುಬಾರದ ಸ್ಪೇನಿನ ಗಾರ್ಬಿನ್‌ ಮುಗುರುಜಾ ಮತ್ತು ಅಮೆರಿಕದ ನವತಾರೆ ಸೋಫಿಯಾ ಕೆನಿನ್‌ ಶನಿವಾರದ ಆಸ್ಟ್ರೇಲಿಯನ್‌ ಓಪನ್‌’ ವನಿತಾ ಸಿಂಗಲ್ಸ್‌ ಫೈನಲ್‌ ನಲ್ಲಿ ಸೆಣಸಾಡಲಿದ್ದಾರೆ. ಇವರಿಂದ ಸೋಲಿನೇಟು ತಿಂದ ರೊಮೇನಿಯಾದ ಸಿಮೋನಾ ಹಾಲೆಪ್‌ ಮತ್ತು
ತವರಿನ ಭರವಸೆಯಾಗಿದ್ದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಕೂಟದಿಂದ ಹೊರಬಿದ್ದರು.

Advertisement

ಗುರುವಾರದ ಎರಡೂ ಸೆಮಿಫೈನಲ್‌ ತೀವ್ರ ಪೈಪೋಟಿಯಿಂದ ಕೂಡಿತ್ತಾದರೂ ಯಾವುದೂ 2 ಸೆಟ್‌ ಗಳಾಚೆ ವಿಸ್ತರಿಸಲಿಲ್ಲ. ಮೊದಲ ಪಂದ್ಯದಲ್ಲಿ ಅಮೆರಿಕದ 14ನೇ ರ್‍ಯಾಂಕಿಂಗ್‌ ಆಟಗಾರ್ತಿ ಸೋಫಿಯಾ ಕೆನಿನ್‌ ಭಾರೀ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಅವರಿಗೆ 7-6 (8-6), 7-5 ಅಂತರದಿಂದ ಆಘಾತವಿಕ್ಕಿದರು. ಬಾರ್ಟಿ ಸೋಲನ್ನು ನಿರೀಕ್ಷಿಸಿರದ ಮೆಲ್ಬರ್ನ್ ಪಾರ್ಕ್‌ ವೀಕ್ಷಕರು ಈ ಫ‌ಲಿತಾಂಶವನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಸ್ವತಃ ಸೋಫಿಯಾ ಕೂಡ!

ಅನಂತರದ ಸೆಮಿಫೈನಲ್‌ನಲ್ಲಿ ಅವಳಿ ಗ್ರ್ಯಾನ್‌ ಸ್ಲಾಮ್‌ ವಿಜೇತೆ, 26ರ ಹರೆಯದ ಮುಗುರುಜಾ 7-6 (10-8), 7-5 ಅಂತರದಿಂದ ಸಿಮೋನಾ ಹಾಲೆಪ್‌ ಹಾರಾಟವನ್ನು ಕೊನೆಗೊಳಿಸಿದರು. ಮೆಲ್ಬರ್ನ್ ಬಿಸಿಲು ನನ್ನನ್ನು ಕೊಂದೇ ಬಿಟ್ಟಿತು’ ಎಂದು ಗೊಣಗಿಕೊಳ್ಳುತ್ತ ಹಾಲೆಪ್‌ ಅಂಕಣ ತ್ಯಜಿಸಿದರು.

ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌: ಮಾಸ್ಕೋದಲ್ಲಿ ಜನಿಸಿದ, 21ರ ಹರೆಯದ ಸೋಫಿಯಾ ಕೆನಿನ್‌ ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿದೆ. ಅವರು ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಆಡಿದ್ದು ಕೂಡ ಇದೇ ಮೊದಲು. ನನಗೆ ಮಾತೇ ಹೊರಡುತ್ತಿಲ್ಲ. ಈ ಗೆಲುವನ್ನು ನಂಬಲಾಗುತ್ತಿಲ್ಲ. ಬಾರ್ಟಿ
ನಂಬರ್‌ ವನ್‌ ಆಟಗಾರ್ತಿ. 5 ವರ್ಷದವಳಾಗಿದ್ದಾಗಲೇ ನಾನು ಗ್ರ್ಯಾನ್‌ಸ್ಲಾಮ್‌ ಕನಸು ಕಾಣತ್ತಿದ್ದೆ…’ ಎಂಬುದಾಗಿ ಕೆನಿನ್‌ ಪ್ರತಿಕ್ರಿಯಿಸಿದ್ದಾರೆ. ಹಾಲಿ ಚಾಂಪಿಯನ್‌ ನವೋಮಿ ಒಸಾಕಾ ಅವರ ಆಟವನ್ನು ಕೊನೆಗೊಳಿಸಿದ ತಮ್ಮದೇ ನಾಡಿನ ಕೋಕೊ ಗಾಫ್ ಅವರಿಗೆ ಸೋಲುಣಿಸುವ ಮೂಲಕ ಕೆನಿನ್‌ ಅಪಾಯಕಾರಿಯಾಗಿ ಗೋಚರಿಸಿದ್ದರು.

ಶ್ರೇಯಾಂಕ ರಹಿತ ಆಟಗಾರ್ತಿ: ಗಾರ್ಬಿನ್‌ ಮುಗುರುಜಾ 2016ರಲ್ಲಿ ಫ್ರೆಂಚ್‌ ಓಪನ್‌, 2017ರಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಆಗಿ ಮೂಡಿ ಬಂದಿದ್ದರು. ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ತಲುಪಿದ್ದು ಇದೇ ಮೊದಲು. ಹೀಗಾಗಿ ಶನಿವಾರ ಯಾರೇ ಗೆದ್ದರೂ ಮೊದಲ ಸಲ ಮೆಲ್ಬರ್ನ್ ಕ್ವೀನ್‌’ ಆಗಿ ಮೆರೆಯಲಿದ್ದಾರೆ. ಅಂದಹಾಗೆ ಮುಗುರುಜಾ ಇಲ್ಲಿ ಯಾವುದೇ ಶ್ರೇಯಾಂಕವಿಲ್ಲದೆ ಓಟ ಬೆಳೆಸಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

Advertisement

ಸಿಮೋನಾ ಹಾಲೆಪ್‌ ಕೂಡ ಮುಗುರುಜಾ ಅವರಂತೆ 2 ಗ್ರ್ಯಾನ್‌ಸ್ಲಾಮ್‌ಗಳ ಒಡತಿ. ಫ್ರೆಂಚ್‌ ಓಪನ್‌ (2018) ಮತ್ತು ವಿಂಬಲ್ಡನ್‌ (2019). 2018ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ತಲುಪಿಪ್ರಶಸ್ತಿ ವಂಚಿತರಾಗಿದ್ದರು. ಹೀಗಾಗಿ ಇದು ನಿರೀಕ್ಷೆಯಂತೆ ಸಮಬಲದ ಹೋರಾಟವಾಗಿ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next