Advertisement
ಈ ದೇಶದಲ್ಲಿ ತಾಯಿಯ ಗರ್ಭವೂ ಸೇರಿದಂತೆ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತ ತಾಣವೇ ಇಲ್ಲ ಎಂಬ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಹಲವಾರು ವರ್ಷಗಳ ಹಿಂದಿನ ಹೇಳಿಕೆ ಹಾಗೂ ಈ ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸಂಭವಿಸಿದ ಸ್ತ್ರೀ ಶೋಷಣೆ, ದೌರ್ಜನ್ಯ ಪ್ರಕರಣಗಳನ್ನು ಅವಲೋಕಿಸಿದರೆ ನಾವು ಬಹಳ ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಸಾಮಾಜಿಕ ಶ್ರೀಮಂತಿಕೆಗೆ ಕೊಳ್ಳಿ ಇಡಲು ತಯಾರಿ ನಡೆಸಿದ್ದೇವೆಯೇ ಎಂಬ ಕಲ್ಪನೆ ಕಾಡದಿರದು. ಸದ್ಯ ಸಂಭವಿಸುವ ಅತ್ಯಾಚಾರಗಳ ಸ್ವರೂಪ ಮತ್ತು ಕಾರಣಗಳನ್ನು ಗಮನಿಸುತ್ತಿರುವ ಪೋಷಕ ಮತ್ತು ಪಾಲಕರು ಭಯಭೀತರಾಗಿದ್ದಾರೆ.
ದಿಲ್ಲಿಯ ಕರಾಳ ನೆನಪು ದೇಶದ ಜನರಲ್ಲಿ ಮಾಸುವುದಕ್ಕಿಂತ ಮುನ್ನವೇ ರಾಜ್ಯದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿರುವ ಅತ್ಯಾಚಾರ, ಶಾಲೆಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಗ್ಯಾಂಗ್‌ರೇಪ್‌ಗ್ಳು ಪೋಷಕರ ಆತಂಕವನ್ನು ಹೆಚ್ಚಿಸುತ್ತಲೇ ಇವೆ. ಈ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ವೈಪರೀತ್ಯಗಳು ಬಹಳ ಹಿಂದಿನಿಂದಲೂ ಇವೆ, ಪ್ರಸ್ತುತ ಅವು ಉಲ್ಬಣಾವಸ್ಥೆ ತಲುಪಿರುವುದು ದುರಂತ. ಈ ದೇಶದ ಬಗ್ಗೆ ನಾವು ಹೆಮ್ಮೆಯಿಂದ ಬೀಗುವ ವಿಚಾರಗಳು ಎಷ್ಟಿವೆಯೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ನಾವು ತಲೆ ತಗ್ಗಿಸಬೇಕಾದ ಸಂಗತಿಗಳಿವೆ. ಅಂಥವುಗಳಲ್ಲಿ ಈ ಲೈಂಗಿಕ ದೌರ್ಜನ್ಯ ಮತ್ತು ಸ್ತ್ರೀ ಶೋಷಣೆಯೂ ಒಂದು. ನಮಗೆ ನಾವೇ ಪರಾಮರ್ಶೆ ಮಾಡಿಕೊಂಡರೆ ಹೊರಗಿನವರೆದುರು ನಾವು ತಲೆತಗ್ಗಿಸಬೇಕಾದ ಅನಿವಾರ್ಯತೆ ಇಂಥ ಸಂಗತಿಗಳಿಂದ ಎದುರಾಗುತ್ತದೆ. ಈ ಸಮಾಜಬಾಹಿರ ಕೃತ್ಯಗಳು ನಮ್ಮ ಸ್ವಸ್ಥ ಸಮಾಜಕ್ಕೆ ಕಪ್ಪುಕಲೆಗಳಾಗಿವೆ. ಅವು ಇಂದಲ್ಲ ನಾಳೆ ವಾಸಿಯಾಗಬಹುದೆಂಬ ನಂಬಿಕೆ ಇಂದಿನ ದಿನಗಳಲ್ಲಿ ಹುಸಿಯಾಗಿ ಭವಿಷ್ಯದ ಬಗ್ಗೆ ಸಂದೇಹಕ್ಕೆ ಎಡೆಮಾಡಿ ಕೊಡುತ್ತಿದೆ.
Related Articles
Advertisement
ಈ ಕಳೆದ ಐದು ವರ್ಷಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಂಭವಿಸಿದ ಘಟನೆಗಳನ್ನು ಗಮನಿಸಿದರೆ ನಾಗರಿಕತೆ ಮತ್ತು ನಾಗರಿಕ ಸಮಾಜದ ಬಗ್ಗೆ ನಂಬಿಕೆ, ವಿಶ್ವಾಸ ನಾಶವಾಗುತ್ತದೆ. ಅದರಲ್ಲೂ ಜಗತ್ತಿನ ಆಗುಹೋಗುಗಳನ್ನು ಪೂರ್ತಿಯಾಗಿ ವೀಕ್ಷಿಸದ ಪುಟ್ಟ ಕಂದಮ್ಮಗಳ ಮೇಲೆ ನಡೆಯುವ ಅತ್ಯಾಚಾರಗಳು ಇಡೀ ಸಾಮಾಜಿಕ ವ್ಯವಸ್ಥೆಗೆ ಸವಾಲಾಗಿವೆ. ಈ ಹಿಂದೆ ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಘಟನೆಗೆ ಕಾರಣ ಹಾಗೂ ಅದರ ಬಾಧಕಗಳನ್ನು ಚರ್ಚಿಸುವ ರಾಜಕಾರಣಿಗಳು ತಮ್ಮ ಎಲುಬಿಲ್ಲದ ನಾಲಗೆಯನ್ನು ಪ್ರದರ್ಶಿಸಿ ತಮ್ಮ ನೈತಿಕ ಅಧೋಗತಿಯನ್ನು ಪ್ರದರ್ಶಿಸಿದ್ದು ಮರೆಯಲಾಗದು. ಜತೆಗೆ ಇಂತಹ ವಿಚಾರಗಳಲ್ಲಿ ಅವರ ಕೆಸರೆರಚಾಟದ ಧೋರಣೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹಿಂಸಾಚಾರದ ಹೆಚ್ಚಳಕ್ಕೆ ಮೂಲ ಪ್ರೇರಕ ಶಕ್ತಿಗಳಾಗಬಲ್ಲುದು ಎಂಬುದನ್ನು ಸಮಾಜ ಸೂಕ್ಷ್ಮವಾಗಿ ಗಮನಿಸಿದೆ.
ಮದ್ರಾಸ್ ಹೈಕೋರ್ಟ್ ಸಲಹೆ ಪರಿಶೀಲನಾರ್ಹಈ ದೇಶದಲ್ಲಿ 2008ರಿಂದ 2016ರ ಅವಧಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಶೇ.400 ಪಟ್ಟು ಹೆಚ್ಚಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್ ಮಕ್ಕಳ ಮೇಲೆ ದೌರ್ಜನ್ಯ ನಡೆಸಿ ಅತ್ಯಾಚಾರ ಎಸಗುವ ಆರೋಪಿಗಳಿಗೆ ಪುರುಷತ್ವ ಹರಣ ಶಿಕ್ಷೆ ಜಾರಿ ಮಾಡುವ ಸಂಬಂಧ ಭಾರತ ಸರಕಾರಕ್ಕೆ ಸಲಹೆ ನೀಡಿದೆ. ಈಗ ವಿಧಿಸುತ್ತಿರುವ ಶಿಕ್ಷೆ ಪರಿಣಾಮಕಾರಿಯಾಗಿಲ್ಲ, ನ್ಯಾಯಾಂಗ ವ್ಯವಸ್ಥೆ ಇದನ್ನೆಲ್ಲ ನೋಡಿ ಕೈಕಟ್ಟಿ ಕೂರುವುದಿಲ್ಲ. ದೇಶಾದ್ಯಂತ ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಹೆಚ್ಚುತ್ತಿರುವ ದಿನಗಳಲ್ಲಿ ಕಠಿನ ಶಿಕ್ಷೆ ಜಾರಿಯ ಅಗತ್ಯವಿದೆ ಎಂದು ನ್ಯಾಯಮೂರ್ತಿ ಎನ್. ಕಿರುಬಾಕರನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಪ್ರತಿವರ್ಷ ಮಾರ್ಚ್ 8ರಂದು ಆಚರಿಸುವ ವಿಶ್ವ ಮಹಿಳಾ ದಿನಾಚರಣೆಯನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಮಹಿಳೆಯರ ಹಕ್ಕು, ಹಿತರಕ್ಷಣೆ ಮತ್ತು ಅವರ ಯೋಗಕ್ಷೇಮದ ಉದ್ದೇಶಗಳನ್ನು ವಿಶಾಸಾರ್ಥದಲ್ಲಿ ಸಾಕಾರಗೊಳಿಸಬೇಕು. ಭಾರತೀಯ ಸನಾತನ ಸಾಮಾಜಿಕ ಸಂಸ್ಕೃತಿಯು ವಿಶ್ವ ಮಾನ್ಯತೆ ಪಡೆದದ್ದು. ಈಗಂತೂ ಅತಿ ದೂರದಲ್ಲಿರುವ ಮಂಗಳ ಗ್ರಹಕ್ಕೆ ಯಶಸ್ವೀ ಶೋಧ ನೌಕೆ ಉಡಾಯಿಸಿದವರು ನಾವು. ಇಂತಹ ಬೌದ್ಧಿಕ ಸಾಮರ್ಥ್ಯವಿದ್ದರೂ ದೀಪದ ಬುಡದಲ್ಲಿ ಕತ್ತಲು ಎಂಬಂತೆ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಭವಿಸುವ ಕುಕೃತ್ಯಗಳನ್ನು ಗಮನಿಸದ ಮತ್ತು ಒತ್ತಡದ ಬದುಕಿನ ಮಧ್ಯೆ ಪರಿಹಾರ ಕಂಡುಕೊಳ್ಳಲಾಗದ ದುಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಕಳೆದ 70 ವರ್ಷಗಳಲ್ಲಿ ಆಳುವವರು ದೇಶದ ಹಿತಕ್ಕೆ ಮಾರಕವಾಗುವ ವಿಚಾರಗಳ ಬಗೆಗೆ ಸ್ಪಷ್ಟತೆ ಮತ್ತು ಬದ್ಧತೆಯ ನಿರ್ಧಾರಗಳನ್ನು ತೆಗೆದುಕೊಳ್ಳದ ಕಾರಣ ಈ ದೇಶವು ಇಂದಿಗೂ ಅಭಿವೃದ್ಧಿಶೀಲ ರಾಷ್ಟ್ರವಾಗಿಯೇ ಉಳಿದಿದೆ. ಸಾಮಾಜಿಕ ಅಪಸವ್ಯಗಳು ಮುಂದುವರಿದಿವೆ. ಬಟ್ರìಂಡ್ ರಸಲ್ ಎಂದೋ ಹೇಳಿದ್ದರು, “ಈ ಜಗತ್ತಿನ ದೊಡ್ಡ ಸಮಸ್ಯೆಯೆಂದರೆ ಮೂರ್ಖರು ಮತ್ತು ಮತಾಂಧರು ತಮ್ಮ ಆಲೋಚನೆಗಳ ಬಗ್ಗೆ ಯಾವತ್ತೂ ಖಚಿತವಾಗಿರುತ್ತಾರೆ, ಆದರೆ ಬುದ್ಧಿವಂತರು ಮಾತ್ರ ಸದಾ ಗೊಂದಲದಲ್ಲಿ ಇರುತ್ತಾರೆ’. ಈ ದೇಶದ ಮಟ್ಟಿಗೆ ಅವರ ಮಾತು ಸದಾ ಸತ್ಯವೇ ಎಂಬ ಚಿಂತೆ ಕಾಡುತ್ತದೆ. ಮಂಜುನಾಥ ಉಲುವತ್ತಿ ಶೆಟ್ಟರ್