Advertisement

Social Networks Use: ಸಾಮಾಜಿಕ ಜಾಲತಾಣ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಡಿವಾಣ!

03:20 AM Sep 30, 2024 | Team Udayavani |

ಮಕ್ಕಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಬಳಕೆಯ ಅಭ್ಯಾಸವನ್ನು ನಿಯಂತ್ರಿಸುವುದಕ್ಕಾಗಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌, ಸೋಶಿಯಲ್‌ ಮೀಡಿಯಾ ಬಳಕೆಗೆ ವಯಸ್ಸಿನ ಮಿತಿ ಹೇರುವ ಕಾನೂನು ಜಾರಿ ಮಾಡುವುದಾಗಿ ಹೇಳಿದ್ದಾರೆ. ಮಕ್ಕಳ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಇದೊಂದು ಉತ್ತಮ ನಡೆ. ಈ ಹಿನ್ನೆಲೆಯಲ್ಲಿ ಜಾಲತಾಣಗಳ ಮೇಲೆ ಮಕ್ಕಳ ಅವಲಂಬನೆ, ಅವರ ಮೇಲಾಗುತ್ತಿರುವ ಪರಿಣಾಮ, ಕಾನೂನುಗಳು ಇತ್ಯಾದಿ ಮಾಹಿತಿ ಇಲ್ಲಿದೆ.

Advertisement

ದಿನಕ್ಕೆ 3 ಗಂಟೆಗೂ ಹೆಚ್ಚು ಕಾಲ ಮೊಬೈಲ್‌ ಬಳಕೆ
ನಾವೀಗ ಈಗ ಸೋಶಿಯಲ್‌ ಮೀಡಿಯಾ ಯುಗದಲ್ಲಿ ಬದುಕುತ್ತಿದ್ದೇವೆ. ಒಂದಿಲ್ಲ ಒಂದು ರೀತಿಯಲ್ಲಿ ನಮ್ಮ ನಿತ್ಯದ ಬದುಕಿನ ಮೇಲೆ ಸಾಮಾಜಿಕ ಜಾಲತಾಣಗಳು ಪರಿಣಾಮ ಇದ್ದೇ ಇದೆ. ಇದಕ್ಕೆ ಮಕ್ಕಳು ಕೂಡ ಹೊರತಾಗಿಲ್ಲ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಹಲವು ಅಧ್ಯಯನ ವರದಿಗಳು ಖಚಿತಪಡಿಸಿವೆ.

ಸಮೀಕ್ಷೆಯೊಂದರ ಪ್ರಕಾರ, ಭಾರತದಲ್ಲಿ 9ರಿಂದ 13 ವರ್ಷದೊಳಗಿನ ಮಕ್ಕಳು ನಿತ್ಯ 3 ಗಂಟೆಗೂ ಹೆಚ್ಚು ಸಮಯ ಸಾಮಾಜಿಕ ಜಾಲತಾಣ, ವೀಡಿಯೋಗೇಮ್ಸ್‌ನಲ್ಲಿ ಕಳೆಯುತ್ತಾರೆ. ಇದೇ ಮಾತನ್ನು ಅಮೆರಿಕದ ಮಕ್ಕಳಿಗೆ ಹೇಳುವುದಾದರೆ 5 ಗಂಟೆ ವ್ಯಯಿಸುತ್ತಾರೆ. ಅಂದರೆ ಮಕ್ಕಳು ಹೆಚ್ಚಿನ ಸಮಯವನ್ನು ಡಿಜಿಟಲ್‌ ಪ್ರಪಂಚದಲ್ಲಿ ಕಳೆಯುವ ಮೂಲಕ ನಿಜ ಪ್ರಪಂಚದ ಅನುಭವದಿಂದ ಹೊರಗುಳಿಯುತ್ತಿದ್ದಾರೆ.

ವಯಸ್ಸಿನ ಮಿತಿ ಬೇಕಾ, ಬೇಡವಾ?
ಸಾಮಾಜಿಕ ಜಾಲತಾಣ ಬಳಕೆಗೆ ವಯಸ್ಸಿನ ಮಿತಿ ಹೇರುವ ಬಗ್ಗೆ ಮೊದಲಿನಿಂದಲೂ ಚರ್ಚೆಗಳಿವೆ. ಹಲವು ದೇಶಗಳಲ್ಲಿ 13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ಅನುಮತಿ ಇಲ್ಲ. ಈ ಮಿತಿಯನ್ನು ಹೆಚ್ಚಿಸಬೇಕೆಂಬ ಚರ್ಚೆಗಳು ನಡೆಯುತ್ತಲೇ ಇವೆ. ಬಹುತೇಕ ತಜ್ಞರು ವಯೋಮಿತಿಯನ್ನು ಹೆಚ್ಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಮಕ್ಕಳಿಗೆ ಆನ್‌ಲೈನ್‌ಲ್ಲಿ ಸುರಕ್ಷೆ ಒದಗಿಸಲು ವಯೋಮಿತಿ ಅತ್ಯಗತ್ಯ ಎಂಬುದು ಪ್ರಬಲ ವಾದವಾಗಿದೆ.

ಮಕ್ಕಳು ಎದುರಿಸುವ ಅಪಾಯಗಳೇನು?
ಮಕ್ಕಳಲ್ಲಿ ಸೋಶಿಯಲ್‌ ಮೀಡಿಯಾ ಬಳಕೆಯ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವುದು ಹೆಚ್ಚು. ಹಿಂಸಾತ್ಮಕ, ಲೈಂಗಿಕ ವಿಷಯ ಗಳಿಗೆ ಮಕ್ಕಳು ತೆರೆದುಕೊಳ್ಳಬಹುದು. ಅಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಯ ಬಹುದು. ವಿಶೇಷವಾಗಿ ಹೆಣ್ಣು ಮಕ್ಕಳು ಇಂಥ ಜಾಲಕ್ಕೆ ಒಳಗಾಗಬಹುದು. ಜಾಲತಾಣಗಳ ಮೂಲಕ ಪರಿಚಯವಾದ ವ್ಯಕ್ತಿಗಳಿಂದ ಮಕ್ಕಳು ಹಾಗೂ ಹದಿಹರೆಯದವರು ಅಪಾಯಕ್ಕೆ ಸಿಲುಕಿದ ಉದಾರಣೆಗಳಿವೆ ಸಾಕಷ್ಟಿವೆ. ಇನ್ನು ಸೈಬರ್‌ ಬುಲ್ಲಿಯಿಂಗ್‌ಗೆ ಒಳಗಾಗಬಹುದು. ಮಕ್ಕಳಲ್ಲಿ ಆಕ್ರಮಣಕಾರಿ ವರ್ತನೆ ಹೆಚ್ಚಬಹುದು, ಆತ್ಮಹತ್ಯೆಯಂಥ ಯೋಚನೆಗಳೂ ಬರುವ ಅಪಾಯಗಳಿವೆ.

Advertisement


ಭಾರತದಲ್ಲಿ ವಯೋಮಿತಿ ಇದೆಯಾ?
ಸದ್ಯದ ಮಟ್ಟಿಗೆ ಭಾರತದಲ್ಲಿ 13 ವರ್ಷ ಮೇಲ್ಪಟ್ಟ ಮಕ್ಕಳು ಫೇಸ್‌ಬುಕ್‌, ಗೂಗಲ್‌, ಮತ್ತು ಇನ್‌ಸ್ಟಾಗ್ರಾಮ್‌ ಸಹಿತ ಇತರ ಸೋಶಿಯಲ್‌ ಮೀಡಿಯಾದಲ್ಲಿ ಖಾತೆಗಳನ್ನು ತೆರೆಯಬಹುದಾಗಿದೆ. ಅಲ್ಲದೇ ಈ ತಾಣಗಳಲ್ಲಿ ಎಷ್ಟು ಹೊತ್ತು ಬೇಕಾದರೂ ಸಮಯ ಕಳೆಯಬಹುದು. ಇದಕ್ಕೆ ಯಾವುದೇ ಮಿತಿ ಇಲ್ಲ. ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣೆ(ಡಿಪಿಡಿಪಿ) ಕಾಯ್ದೆಯಲ್ಲಿ ಮಕ್ಕಳ ದತ್ತಾಂಶ ರಕ್ಷಣೆಗೆ ಬಗ್ಗೆ ತಿಳಿಸಲಾಗಿದೆ. ಭಾರತದಲ್ಲಿನ ಕಾಯ್ದೆಯ ಪ್ರಕಾರ, 18 ವಯಸ್ಸಿನ ಒಳಗಿನವರನ್ನು ಅಪ್ರಾಪ್ತರು ಎಂದು ಗುರುತಿಸಲಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣ ಬಳಕೆಗೆ ಯಾವುದೇ ವಯೋಮಿತಿಯ ಪ್ರಸ್ತಾವಗಳಿಲ್ಲ ಎನ್ನಬಹುದು.

ಜಾಲತಾಣಗಳಿಂದ ವಯೋಮಿತಿ ನಿಯಮ
ಬಹುತೇಕ ಸಾಮಾಜಿಕ ಜಾಲತಾಣಗಳ ಸ್ವಯಂ ವಯೋಮಿತಿಯನ್ನು ಹೊಂದಿರುತ್ತವೆ. ಫೇಸ್‌ಬುಕ್‌, ಯುಟ್ಯೂಬ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌, ಟಿಕ್‌ಟಾಕ್‌ನಲ್ಲಿ ಖಾತೆ ತೆರೆಯಬೇಕಿದ್ದರೆ 13 ವರ್ಷ ಆಗಿರಬೇಕು. ಜತೆಗೆ ಪೋಷಕರ ಒಪ್ಪಿಗೆಯನ್ನು ಕೇಳುತ್ತವೆ. ಹೀಗಿದ್ದೂ ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳು ವಯೋಮಿತಿಯನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಯೋಚಿಸುತ್ತಿವೆ.

ವಯೋಮಿತಿಗೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌
3 ವರ್ಷದ ಹಿಂದೆ ಕರ್ನಾಟಕ ಹೈಕೋರ್ಟ್‌ ಕೂಡ ಸಾಮಾಜಿಕ ಜಾಲತಾಣಗಳ ಬಳಕೆಗೆ ಮಕ್ಕಳಿಗೆ ವಯೋಮಿತಿ ಹೇರುವುದು ಅಗತ್ಯ ಎಂದು ಅಭಿಪ್ರಾಯ­ಪಟ್ಟಿತ್ತು. ಟ್ವಿಟರ್‌(ಈಗ ಎಕ್ಸ್‌) ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ವೇಳೆ ಹೈಕೋ­ರ್ಟ್‌, ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಗೆ 18 ಅಥವಾ 21 ವರ್ಷ ವಯಸ್ಸಿನ ಮಿತಿ ಹೇರುವುದು ಅಗತ್ಯವಾಗಿದೆ ಎಂದು ಹೇಳಿತ್ತು. ಶಾಲೆಗೆ ಹೋಗುವ ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ದಾಸರಾಗುತ್ತಿದ್ದಾರೆ. ವಯೋಮಿತಿಯನ್ನು ಹೇರು­ವುದರಿಂದ ದೇಶಕ್ಕೆ ಲಾಭವಾಗಲಿದೆ ಎಂದು ಹೈಕೋರ್ಟ್‌ನ ನ್ಯಾ| ಜಿ.ನರೇಂದ್ರ ಹಾಗೂ ನ್ಯಾ| ವಿಜಯಕುಮಾರ್‌ ಎ ಪಾಟೀಲ್‌ ಅವರಿದ್ದ ಪೀಠ ಹೇಳಿತ್ತು.

ಹಲವು ದೇಶಗಳಲ್ಲಿ ನಿಷೇಧ
ಮಕ್ಕಳ ಬಳಕೆ ಹೆಚ್ಚಳ ಕಾರಣ ಮಾತ್ರಕ್ಕೆ ಅಲ್ಲದೇ ಭದ್ರತೆ ಸೇರಿದಂತೆ ಅನೇಕ ಕಾರಣಕ್ಕಾಗಿ ಹಲವು ದೇಶಗಳಲ್ಲಿ ನಾನಾ ಸೋಶಿಯಲ್‌ ಮೀಡಿಯಾಗಳನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಟಿಕ್‌ಟಾಕ್‌ ನಿಷೇಧಗೊಂಡಿದ್ದರೆ, ಚೀನದಲ್ಲಿ ಟ್ವಿಟರ್‌(ಎಕ್ಸ್‌), ಫೇಸ್‌ಬುಕ್‌ ಸೇರಿ ಹಲವು ವಿದೇಶಿ ಜಾಲತಾಣಗಳು ಬಳಕೆಗೆ ಸಿಗಲ್ಲ. ಉತ್ತರ ಕೊರಿಯಾದಲ್ಲಂತೂ ಎಲ್ಲ ಸೋಶಿಯಲ್‌ ಮೀಡಿಯಾಗಳ ಮೇಲೆ ನಿರ್ಬಂಧವಿದೆ. ತೈವಾನ್‌, ಟರ್ಕಿ, ರಷ್ಯಾ, ಅಫ್ಘಾನಿಸ್ಥಾನ, ಮ್ಯಾನ್ಮಾರ್‌, ಬಾಂಗ್ಲಾದೇಶ, ವಿಯೆಟ್ನಾಂ, ಅಮೆರಿಕ, ಇಂಗ್ಲೆಂಡ್‌, ಕಿರ್ಗಿಸ್ಥಾನ್‌, ಸಿರಿಯಾ, ಪಾಕಿಸ್ಥಾನ, ಸೆನೆಗಲ್‌ ಸಹಿತ ಹಲವು ದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ.

ಗಮನ ಸೆಳೆದ ಚೀನದ ನೀತಿ!
2023ರ ಆಗಸ್ಟ್‌ನಲ್ಲಿ ಚೀನ ಮೊಬೈಲ್‌ ಇಂಟರ್ನೆಟ್‌ಗಾಗಿ ಅಪ್ರಾಪ್ತ ವಯಸ್ಕರು ಪಾಲಿಸಬೇಕಾದ ಮಾರ್ಗಸೂಚಿ ಕರಡನ್ನು ಸಿದ್ಧಪಡಿಸಿತ್ತು. ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಸಂಬಂಧಿಸಿದಂತೆ ಈ ಕರಡು ಜಾಗತಿಕವಾಗಿ ಸಾಕಷ್ಟು ಗಮನ ಸೆಳೆದಿದೆ. ಈ ಕರಡಿನ ಪ್ರಕಾರ, 8 ವರ್ಷದೊಳಗಿನವರು ದಿನಕ್ಕೆ ಕೇವಲ 40 ನಿಮಿಷ, 8 ವರ್ಷ ಮೇಲ್ಪಟ್ಟವರು ದಿನಕ್ಕೆ 60 ನಿಮಿಷ ಫೋನ್‌ ಬಳಸಬಹುದು. ಜತೆಗೆ, ಕಂಟೆಂಟ್‌ ಮೇಲೂ ನಿರ್ಬಂಧ ಹೇರಲಾಗಿದೆ. 8 ವರ್ಷದೊಳಗಿನವರು ಮತ್ತು ಮೇಲ್ಪಟ್ಟವರು ಇಂತಿಂಥ ಮಾದರಿಯ ಕಂಟೆಂಟ್‌ ನೋಡಲು ಅವಕಾಶವಿದೆ. ಇದೇ ರೀತಿಯ ನಿಯಮಗಳನ್ನು ಭಾರತದಲ್ಲೂ ಅನುಷ್ಠಾನಗೊಳಿಸುವುದು ಅಗತ್ಯವಿದೆ ಎನ್ನುತ್ತಾರೆ ತಜ್ಞರು.

ಇನ್‌ಸ್ಟಾಗ್ರಾಮ್‌ನಿಂದ ಟೀನ್‌ ಅಕೌಂಟ್‌!
ಆನ್‌ಲೈನ್‌ನಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ ಟೀನ್‌ ಅಕೌಂಟ್‌(ಹದಿಹರೆಯದವರಿಗೆ ಖಾತೆ) ಪರಿಚಯಿಸಲು ಮುಂದಾಗಿದೆ. ಈ ಖಾತೆಯಲ್ಲಿ ಸಾಕಷ್ಟು ಸುರಕ್ಷ ಫೀಚರ್‌ಗಳನ್ನು ಒಳಗೊಂಡಿರುವುದರಿಂದ, ಆನ್‌ಲೈನ್‌ನಲ್ಲಿ ಮಕ್ಕಳಿಗೆ ಎದುರಾಗುವ ಬೆದರಿಕೆಗಳಿಂದ ರಕ್ಷಣೆ ಮಾಡಬಹುದಾಗಿದೆ.

ಸಾಮಾಜಿಕ ಜಾಲತಾಣದಿಂದ ಮಕ್ಕಳೇಕೆ ದೂರ ಇರಬೇಕು?
1. ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ದಾಸರಾಗಬಹುದು.

2. ಅತಿಯಾದ ಜಾಲತಾಣಗಳ ಬಳಕೆಯಿಂದಾಗಿ ಮಕ್ಕಳಲ್ಲಿ ಒತ್ತಡ ಹೆಚ್ಚಬಹುದು.

3. ಮಕ್ಕಳು ಭ್ರಮಾಲೋಕದಲ್ಲಿ ಇರುವುದರಿಂದ ನಿಜ ಜೀವನದ ಅನುಭವ ದೊರೆಯದು

4. ಅತೀ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

5. ಸೋಶಿಯಲ್‌ ಮೀಡಿಯಾಗಳ ಬಳಕೆ ಹೆಚ್ಚಳದಿಂದ ಮಕ್ಕಳು ಖನ್ನತೆಗೆ ಜಾರಬಹುದು.

6. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ತಪ್ಪಿಸಿಕೊಳ್ಳಬಹುದು.

7. ಮಕ್ಕಳು ನಿಮ್ಮಿಂದ ಭಾವನಾತ್ಮಕವಾಗಿ ದೂರವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next