ದಾವಣಗೆರೆ: ಮುಂದಿನ ದಿನಗಳಲ್ಲಿ ಕೋವಿಡ್ ಉಲ್ಬಣವಾಗಿ ಕಠೊರವಾಗಿರಬಹುದಾದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳ ಅನ್ವಯವೇ ಸಾಮಾಜಿಕ ಅಂತರದಲ್ಲಿ ಬಕ್ರೀದ್ ಆಚರಣೆ ನಡೆಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಸೂಚನೆ ನೀಡಿದ್ದಾರೆ.
ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಶಾಂತಿಯುತವಾಗಿ ಬಕ್ರೀದ್ ಆಚರಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲೇ ಈಗ ಸೋಂಕು ಕಾಣಿಸಿಕೊಂಡಿದೆ. ಎಲ್ಲ ಕಡೆಗಳಲ್ಲೂ ಕೋವಿಡ್ ಹರಡಿರುವುದರಿಂದ ಹೊರಗಿನಿಂದಲೂ ವೈದ್ಯರನ್ನು ಕರೆಸಲಾಗದು. ಕೋವಿಡ್ ಗೆ ಚಿಕಿತ್ಸೆ ನೀಡುವುದು ಹೇಗೆ ಎಂಬ ಗಂಭೀರ ಪ್ರಶ್ನೆ ಕಾಡುತ್ತದೆ. ಹಾಗಾಗಿ ಎಲ್ಲರೂ ಸೋಂಕಿನ ತೀವ್ರತೆ ಸರಿಯಾಗಿ ಅರಿತು ವೈಯಕ್ತಿಕ, ಸಾಮೂಹಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ಮತ್ತು ಗಮನ ನೀಡಬೇಕು ಎಂದರು.
ಇತ್ತೀಚೆಗಷ್ಟೇ ಗ್ರಾಮಾಂತರದಲ್ಲಿ ಏಳು ಹಸುಗಳ ಕಳ್ಳ ಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಇಂತಹ ಪ್ರಕರಣ ತಡೆಯಲು 20 ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗುವುದು. ಸರ್ಕಾರದ ಆದೇಶದ ಅನ್ವಯ ಒಂಟೆ ಮಾಂಸ ಸಹ ನಿಷೇಧಿಸಲಾಗಿದೆ. ಈ ಎಲ್ಲ ಕ್ರಮಗಳಿಗೆ ಸಹಕಾರ ಬೇಕು. ಸರ್ಕಾರ ಬಕ್ರೀದ್‌ಗೆ ವಿಧಿಸಿರುವ ನಿರ್ಬಂಧಗಳನ್ನು ಮೌಲ್ವಿಗಳ ಮೂಲಕ ವಿಡಿಯೋ ಮಾಡಿಸಿ ಸಮುದಾಯಕ್ಕೆ ತಲುಪಿಸಬೇಕು. ಮಸೀದಿಗಳಿಂದ ಸಾಮಾಜಿಕ ಅಂತರಕ್ಕಾಗಿ ಸ್ವಯಂಸೇವಕರನ್ನು ನೇಮಿಸುವಂತೆ ತಿಳಿಸಿದರು.
ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಮಾತನಾಡಿ, ರಂಜಾನ್ ಸಮಯದಲ್ಲಿ ಶೇ. 85ರಷ್ಟು ಜನರು ಮನೆಯಲ್ಲೇ ನಮಾಜ್ ಮಾಡಿದ್ದರು. ಅದೇ ರೀತಿ ಬಕ್ರೀದ್ ಆಚರಣೆಗೆ ಸಹಕರಿಸುತ್ತೇವೆ ಎಂದರು. ರಜ್ವಿ ಖಾನ್ ಮಾತನಾಡಿ, ಸಂಪ್ರದಾಯ ಹಾಗೂ ಸಂವಿಧಾನ ಎರಡರ ಉಲ್ಲಂಘನೆಯಾಗದ ರೀತಿಯಲ್ಲಿ ಹಬ್ಬದ ಆಚರಣೆ ಮಾಡಬೇಕಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್ ಮಾತನಾಡಿ, ಕೊರೊನಾ ಈಗ ಸಮುದಾಯ ಹಂತಕ್ಕೆ ಕಾಲಿಟ್ಟಿದೆ. ನಮ್ಮ ಜೀವ ನಮ್ಮ ಕೈಯಲ್ಲಿದೆ. ಸರ್ಕಾರ ನಿಯಮ ರೂಪಿಸಿದೆ ಎಂಬುದಕ್ಕಿಂತ ಹೆಚ್ಚಾಗಿ ಸುರಕ್ಷತೆಗಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಸಿರಾಜ್ ಮಹಮ್ಮದ್, ಬಕ್ರೀದ್ ಸಂದರ್ಭದಲ್ಲಿ ಮೂರು ದಿನಗಳ ಕಾಲ ಮಸೀದಿಯ ಸುತ್ತ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕೆಂದರು. ಪಾಲಿಕೆ ಮಾಜಿ ಸದಸ್ಯ ಎಚ್.ಜಿ. ಆವರಗೆರೆ ಉಮೇಶ್ ಎಎಸ್ಪಿ ಎಂ. ರಾಜೀವ್ ಇದ್ದರು.