ಚಿತ್ರದುರ್ಗ: ಬಸವಣ್ಣನವರು 900 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹ ನೆರವೇರಿಸುವ ಮೂಲಕ ಸಾಮಾಜಿಕ
ಪರಿವರ್ತನೆಗೆ ಮುಂದಾಗಿದ್ದರು ಎಂದು ಡಾ| ಶಿವಮೂರ್ತಿಮುರುಘಾ ಶರಣರು ಹೇಳಿದರು.
ಇಲ್ಲಿನ ಬಸವಕೇಂದ್ರ ಶ್ರೀ ಮುರುಘಾಮಠದಲ್ಲಿ ಎಸ್. ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಮತ್ತು ಕರ್ನಾಟಕ
ಅರಣ್ಯ ಇಲಾಖೆ ಚಿತ್ರದುರ್ಗ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂತರ್ಜಾತಿ ವಿವಾಹ, ಸಮಾನತೆಯ ಸಮ ಸಮಾಜದ ಜಾಗೃತಿ ಮೂಡಿಸಿದರು. ಇಂದು ಶ್ರೀಮಠದಲ್ಲೂ ಜಾತಿ
ಧರ್ಮ ಮೀರಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ವೈಚಾರಿಕತೆಯ ಅಡಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಅತೀವ ಸಂತಸದ ವಿಷಯವಾಗಿದೆ.ಪ್ರಕೃತಿ ವಿಕೋಪದಿಂದ ಹಲವಾರು ಸಮಸ್ಯೆಗಳನ್ನು ನಾವಿಂದು ಎದುರಿಸುತ್ತಿದ್ದೇವೆ ಎಂದರು.
ತಮಿಳುನಾಡು ಕುಂಭಕೋಣಂನ ವೆಂಕಟೇಶ್ ಮಾತನಾಡಿ, ಶ್ರೀ ಮುರುಘಾಮಠದಲ್ಲಿ ಸರಳ ಸಾಮೂಹಿಕ ವಿವಾಹ ಇನ್ನಿತರೆ ಸಾಮಾಜಿಕ ಕಾರ್ಯಗಳು, ಪರಿಸರ ಕಾಳಜಿ ಮತ್ತು ಇಲ್ಲಿನ ಪರಿಸರ ನೋಡಿ ತಮಿಳುನಾಡಿನಿಂದ ಬಂದ
ನಮಗೆ ಅಚ್ಚರಿ ಮೂಡಿಸಿದೆ ಎಂದರು.
ಇದೇ ಸಂದರ್ಭದಲ್ಲಿ 28 ನವ ವಧುವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ
ನವ ವಿವಾಹಿತರು ಸಸಿಗಳನ್ನು ನೆಟ್ಟರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕೆ.ಆರ್. ಮಂಜುನಾಥ್, ಮದುರೈನ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಎ. ಗಣೇಶ್, ಮಧುರೈನ ನ್ಯಾಯವಾದಿ ಜಯಪ್ರಕಾಶ್, ಕುಂಭಕೋಣಂನ ಪೆರಿಯಮಠದ ಕಾರ್ಯದರ್ಶಿ ಆರ್ .ಟಿ. ಸೆಂದಿಲ್‌ನಾದನ್, ದಾಸೋಹಿ ಸುಜಾತಾ ಮತ್ತು ಎಂ. ರವಿಕುಮಾರ್, ಪೈಲ್ವಾನ್ ತಿಪ್ಪೇಸ್ವಾಮಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ನಿರ್ವಹಣಾ ನಿರ್ದೇಶಕ ಡಾ| ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಇತರರು ಇದ್ದರು.