ಉಡುಪಿ: “ನಾವು ರಾಜಕೀಯ ಸ್ವಾತಂತ್ರ್ಯವನ್ನು ಸಾಧಿಸಿದ್ದೇವೆಯಾದರೂ; ಇನ್ನೂ ಸಂಪೂರ್ಣ ಸಾಮಾಜಿಕ -ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವುದು ಬಾಕಿ ಇದೆ; ಅದು ಸಾಧ್ಯವಾದಾಗಲೇ ಗಾಂಧೀಜಿಯವರ ಕನಸು ಸಂಪೂರ್ಣ ವಾಸ್ತವವಾಗುತ್ತದೆ “ಎಂದು ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ.ವಿನೋದ್ ಭಟ್ ಹೇಳಿದರು.
ಮಾಹೆಯ ಗಾಂಧಿಯ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಹೊಸ ಬಿಎ ಮತ್ತು ಎಂಎ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರೋತ್ಸವದ ಮಾರನೇ ದಿನವೇ ಈ ಹೊಸ ಮಾದರಿಯ ಕಾರ್ಯಕ್ರಮಗಳು ಆರಂಭವಾಗುತ್ತಿರುವುದು ಅರ್ಥಪೂರ್ಣ ಕಾಕತಾಳೀಯ ಎಂದು ಸಮರ್ಥಿಸಿಕೊಂಡರು.
ಶಿಕ್ಷಣ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿಯಾಗಬೇಕು ಆ ಮೂಲಕ ಗಾಂಧೀಜಿಯವರ ಆಶಯ ನೆರವೇರಬೇಕು ಎಂದರು. ಒಂದಾಗಿ ಕಲಿಯದೇ ಶಿಕ್ಷಣವು ಅಪೂರ್ಣವಾಗುತ್ತದೆ ಹಾಗಾಗಿ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳನ್ನು ಬೇಗನೆ ಕ್ಯಾಂಪಸ್‌ಗೆ ಕರೆಸಿಕೊಳ್ಳಬಹುದು ಎಂದು ಡಾ ಭಟ್ ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಸಿ.ಪಿ.ಎ.ಎಸ್. ನ ನಿರ್ದೇಶಕರಾದ ಪ್ರೊ ವರದೇಶ್ ಹಿರೇಗಂಗೆ, ಮೂರು ‘P’ ಗಳಾದ- ಪೊಯೆಟಿಕ್ಸ್ (ಸೌಂದರ್ಯಶಾಸ್ತ್ರಕ್ಕೆ ಇನ್ನೊಂದು ಅರ್ಥ), ಪಾಲಿಟಿಕ್ಸ್ (ಶಾಂತಿ ಅಧ್ಯಯನದತ್ತ ದಾರಿ) ಮತ್ತು ಫಿಲಾಸಫಿ (ಪರಿಸರದ ತತ್ವಶಾಸ್ತ್ರವಾಗಿ ರೂಪಾಂತರವಾಗುವುದು), ಜಿ.ಸಿ.ಪಿ.ಎ.ಎಸ್. ನಲ್ಲಿ ನೀಡುವ ಅಂತರ್ಶಿಸ್ತೀಯ ಶಿಕ್ಷಣದ ಸಾರವನ್ನು ಸೆರೆಹಿಡಿಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) ಪದವಿ ಕಾರ್ಯಕ್ರಮ ಉದ್ಘಾಟನೆಗೊಂಡಿತು ಮತ್ತು ಎಂಎ (ಇಕೋಸೊಫಿಕಲ್ ಎಸ್ಥೆಟಿಕ್ಸ್) ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್) ಮರುಪ್ರಾರಂಭಗೊಂಡಿತು.
ವಿದ್ಯಾರ್ಥಿಗಳಾದ ಮರಿಯಂ ರಾಯ್ ಮತ್ತು ಶ್ರೀಕೃಷ್ಣ ಅಡಿಗ ಮಣಿಪಾಲದ ವಿಶೇಷತೆಗಳ ಕುರಿತು ಮಾತನಾಡಿದರು. ಶ್ರಾವ್ಯ ಬಾಸ್ರಿ ಟ್ಯಾಗೋರರ ‘ಎಲ್ಲಿ ಮಾನವಳುಕಿರದೋ’ ಗೀತೆಯನ್ನು ಹಾಡಿದರು. ಟ್ರೈಫೆನ್ ಫೋನ್ಸೆಕಾ ವಂದಿಸಿದರು ಮತ್ತು ಜೂಡಿ ಶೆರೀನ್ ಕಾರ್ಯಕ್ರಮವನ್ನು ನಿರ್ವಹಿಸಿದರು.ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.