ಮೊದಲ ಚಿತ್ರಕ್ಕೆ ಅನುರಾಗ್ ಕಶ್ಯಪ್ ನಿರ್ದೇಶನ, ನವಾಜುದ್ದೀನ್ ಸಿದ್ದಿಕಿ ನಾಯಕ. ಯಾವುದೇ ನಟಿಯ ಪಾಲಿಗಾದರೂ ಇದು ಡ್ರೀಮ್ ಎಂಟ್ರಿಯೇ ಸರಿ. ಖ್ಯಾತ ನಿರ್ದೇಶಕ, ಖ್ಯಾತ ನಾಯಕನ ಚಿತ್ರಕ್ಕೆ ನಾಯಕಿಯಾಗಲು ಪ್ರತಿಭೆಯೊಂದೇ ಇದ್ದರೆ ಸಾಲದು, ಅದೃಷ್ಟವೂ ಬೇಕು. ಇಂಥ ಅದೃಷ್ಟ ಪಡೆದವಳು ಶೋಭಿತಾ ಧುಲಿಪಾಲ್.
ಕಳೆದ ವರ್ಷ ರಮಣ್ ರಾಘವ್ 2.0 ಚಿತ್ರಕ್ಕೆ ಶೋಭಿತಾ ನಾಯಕಿಯಾದಾಗ ಅವಳ ಅದೃಷ್ಟ ಖುಲಾಯಿಸಿತು ಎಂದೇ ಭಾವಿಸಲಾಗಿತ್ತು. ರಮಣ್ ರಾಘವ್ 2.0 ಚಿತ್ರಮಂದಿರಗಳಲ್ಲಿ ಸಾಧಾರಣ ನಿರ್ವಹಣೆ ತೋರಿಸಿದರೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಖತ್ತಾಗಿ ಮಿಂಚಿತು. ಕಾನ್ಸ್ ತನಕ ಹೋಗಿ ಬಂತು. ಆದರೆ ನಾಯಕಿ ಶೋಭಿತಾ ಪಾಲಿಗೆ ವಿಶೇಷ ಅದೃಷ್ಟವೇನೂ ತರಲಿಲ್ಲ. ರಮಣ್ ರಾಘವ್ 2.0 ಬಳಿಕ ಇನ್ನೊಂದು ಚಿತ್ರ ಸಿಗಬೇಕಾದರೆ ಭರ್ತಿ ಒಂದು ವರ್ಷ ಕಾಯಬೇಕಾಯಿತು. ಆದರೆ, ಆರಂಭದಲ್ಲಿ ಕೈಕೊಟ್ಟ ಅದೃಷ್ಟ ಈಗ ಒದ್ದುಕೊಂಡು ಬಂದಿರುವಂತೆ ಕಾಣಿಸುತ್ತದೆ. ಈ ವರ್ಷ ಎರಡು ಚಿತ್ರಗಳಲ್ಲಿ ಶೋಭಿತಾ ನಟಿಸುತ್ತಿದ್ದಾಳೆ. ಈ ಪೈಕಿ ಒಂದು ಸೈಫ್ ಅಲಿಖಾನ್ ನಾಯಕನಾಗಿರುವ ಶೆಫ್ ಮತ್ತು ಇನ್ನೊಂದು ಭಾರೀ ಕುತೂಹಲ ಹುಟ್ಟಿಸಿರುವ ಕಾಲಾಕಾಂಡಿ.
ಇದಲ್ಲದೆ ಮುಂದಿನ ವರ್ಷ ಸೆಟ್ಟೇರಲಿರುವ ಮೂಥನ್ ಚಿತ್ರಕ್ಕೆ ಆಯ್ಕೆಯಾಗಿದ್ದಾಳೆ. ಇದು ಹಿಂದಿ ಮಲಯಾಳದಲ್ಲಿ ತಯಾರಾಗಲಿರುವ ದ್ವಿಭಾಷಾ ಚಿತ್ರ. ಇದಲ್ಲದೆ ತೆಲುಗಿನ ಒಂದು ಚಿತ್ರಕ್ಕೂ ಆಯ್ಕೆಯಾಗಿದ್ದಾಳೆ. ಇದಿಷ್ಟು ಶೋಭಿತಾಳ ವೃತ್ತಿ ವೃತ್ತಾಂತ. ಇಷ್ಟಕ್ಕೂ ಈ ಶೋಭಿತಾ ಯಾರು ಎನ್ನುವ ಕುತೂಹಲ ಮೂಡುವುದು ಸಹಜ? 2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಪ್ರಸಿದ್ಧಿಗೆ ಬಂದ ಚೆಲುವೆ ಶೋಭಿತಾ. ಮೂಲತಃ ವಿಶಾಖಪಟ್ಟಣದಳಾಗಿದ್ದರೂ ಕಲಿಯುವ ಸಲುವಾಗಿ ಮುಂಬಯಿಗೆ ಹೋದಾಕೆ. ಆರೇ ತಿಂಗಳಲ್ಲಿ ಹಿಂದಿ ಕಲಿತು ತನ್ನ ಡೈಲಾಗ್‌ಗಳನ್ನೆಲ್ಲ ತಾನೇ ಹೇಳುವಷ್ಟು ಪರಿಣತಿ ಸಾಧಿಸಿದ ಹಿರಿಮೆ ಅವಳದ್ದು. ಕಾಮರ್ಸ್ ಮತ್ತು ಇಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಶೋಭಿತಾ ಮಿಸ್ ಅರ್ಥ್, ಮಿಸ್ ಫೊಟೊಜೆನಿಕ್, ಮಿಸ್ ಬ್ಯೂಟಿ, ಮಿಸ್ ಟ್ಯಾಲೆಂಟ್, ಮಿಸ್ ಬ್ಯೂಟಿಫುಲ್ ಫೇಸ್- ಹೀಗೆ ಹತ್ತಾರು ಸೌಂದರ್ಯಸ್ಪರ್ಧೆಗಳಲ್ಲಿ ಭಾಗವಹಿಸಿ ಕೆಲವನ್ನು ಗೆದ್ದು ಬೀಗಿದಾಕೆ. ಕಿಂಗ್‌ಫಿಶರ್ ಕ್ಯಾಲೆಂಡರ್‌ನಲ್ಲಿ ಮಾದಕವಾಗಿ ಕಾಣಿಸಿಕೊಳ್ಳುವ ಮೂಲಕ ಅನುರಾಗ್ ಕಶ್ಯಪ್ ಕಣ್ಣಿಗೆ ಬಿದ್ದು ಮೊದಲ ಅಡಿಶನ್‌ನಲ್ಲೇ ನೇರವಾಗಿ ಬಾಲಿವುಡ್‌ಗೆ ಎಂಟ್ರಿಕೊಟ್ಟ ಪ್ರತಿಭಾವಂತೆ. ಓದುವುದು, ತಿರುಗಾಡುವುದು ಶೋಭಿತಾಳ ಹವ್ಯಾಸಗಳು. ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಜತೆಗೆ ಇರುವ ಅಪರೂಪದ ನಟಿ ಎನ್ನುವುದು ಅವಳ ಹೆಗ್ಗಳಿಕೆ.