Advertisement

ಅನೇಕ ಕಾಯಿಲೆಗೆ ರಾಮಬಾಣ; ನೆನೆಸಿದ ಡ್ರೈ ಫ್ರೂಟ್ಸ್ ಸೇವನೆಯಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ

05:05 PM Oct 10, 2022 | ಕಾವ್ಯಶ್ರೀ |

ನಾವು ಆರೋಗ್ಯವಾಗಿರಲು ದಿನನಿತ್ಯ ಸಾಕಷ್ಟು ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಕ್ಕಾಗಿ ಆರೋಗ್ಯವಂತರಾಗಿರಲು ಬಯಸುವವರು ದಿನನಿತ್ಯ ತಮ್ಮ ಆಹಾರಗಳಲ್ಲಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸುವುದರ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಬಳಸುವ ಅಭ್ಯಾಸ ರೂಡಿಸಿಕೊಳ್ಳುವುದು ಉತ್ತಮ.

Advertisement

ಡ್ರೈ ಫ್ರೂಟ್ಸ್ ಮಿತವಾಗಿ ಎಂದರೆ ಪ್ರತಿದಿನ ಮೂರು-ನಾಲ್ಕು ನೆನೆಸಿಟ್ಟ ಬಾದಾಮಿ ಅಥವಾ ಒಂದೆರಡು ಒಣ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯವೃದ್ಧಿ ಆಗುವುದರೊಂದಿಗೆ ಅನೇಕ ಕಾಯಿಲೆಗಳಿಂದ ಕೂಡ ದೂರ ಉಳಿಯುವಂತೆ ಮಾಡುತ್ತದೆ.

ಒಣಹಣ್ಣುಗಳ ಬೆಲೆ ದುಬಾರಿಯಾದರೂ ತಾಜಾ ಹಣ್ಣುಗಳಿಗಿಂತ ಹೆಚ್ಚು ಆ್ಯಂಟಿಆಕ್ಸಿಡೆಂಟ್, ಪ್ರೋಟೀನ್‌, ವಿಟಮಿನ್‌ಗಳು, ಆಹಾರದ ಫೈಬರ್‌ಗಳು ಮತ್ತು ಖನಿಜಗಳಿಂದ ಕೂಡಿರುತ್ತವೆ. ಒಣ ಹಣ್ಣು ನಿರ್ಜಲೀಕರಣಗೊಂಡ ಹಣ್ಣಿನ ಒಂದು ರೂಪವಾಗಿದೆ. ಬಾದಾಮಿ, ಪಿಸ್ತಾ, ಖರ್ಜೂರ, ಗೋಡಂಬಿ, ವಾಲ್‌ನಟ್ಸ್ ಮತ್ತು ಹ್ಯಾಝೆಲ್‌ನಟ್ಸ್, ಒಣದ್ರಾಕ್ಷಿ ಮತ್ತು ಅಂಜೂರ ಮುಂತಾದವು ಒಣಹಣ್ಣುಗಳ ವಿಧಗಳು.

ಒಣಹ್ಣುಗಳು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು:

ತೂಕ ಇಳಿಕೆ:

Advertisement

ಡ್ರೈ ಫ್ರೂಟ್ಸ್ ಗಳನ್ನು ಮಿತವಾಗಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.  ಅವು ಕಡಿಮೆ ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ ಮತ್ತು ಹೆಚ್ಚಿನ ಪ್ರೋಟೀನ್‌ಗಳು ಹೊಂದಿರುತ್ತವೆ. ಇವುಗಳಿಂದ ನಾವು ಹೆಚ್ಚು ಸಮಯದವರೆಗೆ ಹಸಿವನ್ನು ತಡೆಯಲು ಸಾಧ್ಯವಾಗುತ್ತದೆ.

ಆರೋಗ್ಯಕರ ಮೂಳೆಗಳು:

ಒಣ ಹಣ್ಣುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಮತ್ತು ಅವುಗಳನ್ನು ಬಲಪಡಿಸಲು ಸಹಾಯವಾಗುತ್ತದೆ.

ರಕ್ತಹೀನತೆ ಸುಧಾರಣೆ:

ಡ್ರೈಫ್ರೂಟ್ಸ್ ಗಳಲ್ಲಿ ಕೆಲವೊಂದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿವೆ. ಇದು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಸಹಾಯವಾಗುತ್ತದೆ. ಒಣ ಹಣ್ಣುಗಳಲ್ಲಿ ವಿಟಮಿನ್ ಎ, ಬಿ ಮತ್ತು ಕೆ ಮತ್ತು ತಾಮ್ರ, ಮೆಗ್ನೀಸಿಯಮ್ ಮುಂತಾದ ಅಗತ್ಯವಾದ ಪೋಷಕಾಂಶಗಳಿವೆ. ಇವು ದೇಹದಲ್ಲಿ ಕೆಂಪು ರಕ್ತ ಕಣಗಳು ಮತ್ತು ಹಿಮೋಗ್ಲೋಬಿನ್ ಅನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಚರ್ಮ:

ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಒಣ ಹಣ್ಣುಗಳು ಚರ್ಮವನ್ನು ಕಾಂತಿಯುತವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದು ಚರ್ಮದ ನೈಸರ್ಗಿಕ ಹೊಳಪಿಗೆ ಕಾರಣವಾಗುತ್ತದೆ. ಚರ್ಮ ಸುಕ್ಕು, ರೇಖೆಗಳು ಮೂಡದಂತೆ ತಡೆಯಲು ಸಹಾಯವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ:

ಡ್ರೈ ಫ್ರೂಟ್ಸ್ ಗಳಲ್ಲಿ ಕೊಬ್ಬಿನಾಂಶ, ಪ್ರೋಟೀನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂಗಳು ಅಧಿಕವಾಗಿರುತ್ತದೆ. ಅದು ನಮಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಹೃದಯ:

ಒಣ ಹಣ್ಣುಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ. ಅದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಇತ್ಯಾದಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಡ್ರೈ ಫ್ರೂಟ್ಸ್‌ ಸೇವನೆಯಲ್ಲೂ ಕೆಲವು ನಿಯಮಗಳಿವೆ. ಅವುಗಳನ್ನು ಹಾಗೆ ಸೇವಿಸಿದರೆ ಮಾತ್ರ ಅದು ಅಗತ್ಯ ಪೋ‍ಷಕಾಂಶಗಳನ್ನು ಒದಗಿಸುತ್ತದೆ ಎನ್ನುತ್ತಾರೆ ಆಹಾರ ತಜ್ಞರು. ತಜ್ಞರು ಹೇಳುವಂತೆ ಒಣಹಣ್ಣುಗಳನ್ನು ನೆನೆಸಿ ಸೇವಿಸಬೇಕು.

ಗೋಡಂಬಿ ಮತ್ತು ಪಿಸ್ತಾವನ್ನು ನೆನೆಸದೆ ಹಾಗೆಯೇ ತಿನ್ನಬಹುದು. ಆದರೆ ಇತರ ಒಣ ಹಣ್ಣುಗಳಾದ ಬಾದಾಮಿ, ವಾಲ್‌ನಟ್ಸ್ ಮತ್ತು ಒಣದ್ರಾಕ್ಷಿಗಳನ್ನು ನೆನೆಸಿ ತಿನ್ನುವುದು ಆರೋಗ್ಯಕ್ಕೆ ಉತ್ತಮ.  ಇದರಿಂದ ದೇಹಕ್ಕೆ ಸಂಪೂರ್ಣ ಪ್ರಯೋಜನ ದೊರೆಯುತ್ತದೆ.

ಬಾದಾಮಿ

ಬಾದಾಮಿಯು ವಿಶ್ವದ ಅತ್ಯುತ್ತಮ ಡ್ರೈಫ್ರೂಟ್‌ಗಳಲ್ಲಿ ಒಂದಾಗಿದೆ. ಇದು ವಿಟಮಿನ್ ಇ, ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ. ಹಲವರು ಇದನ್ನು ಹಾಗೆಯೇ ಸೇವಿಸಲು ಇಷ್ಟಡುತ್ತಾರೆ. ಬಾದಾಮಿ ತಿನ್ನುವುದರಿಂದ ಚರ್ಮವನ್ನು ಆರೋಗ್ಯಕರವಾಗಿ ಹಾಗೂ ಹೊಳೆಯುವಂತೆ ಮಾಡುತ್ತದೆ. ಬಾದಾಮಿಯಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಲು ಅವುಗಳನ್ನು ನೀರಿನಲ್ಲಿ ನೆನೆಸಿ ತಿನ್ನಬೇಕು. ಕನಿಷ್ಠ 6-8 ಗಂಟೆಗಳ ಕಾಲ ಶುದ್ಧ ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ.

ವಾಲ್ ನಟ್ಸ್

ಕೆಮ್ಮು, ಮಲಬದ್ಧತೆಯಂತಹ ಸಮಸ್ಯೆ ನಿವಾರಿಸಲು ವಾಲ್‌ನಟ್ಸ್ ತುಂಬಾ ಒಳ್ಳೆಯದು. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್‌, ಖನಿಜ ಮತ್ತು ವಿಟಮಿನ್‌ಗಳು ಯಥೇಚ್ಛವಾಗಿದೆ. ವಾಲ್‌ನಟ್ಸ್‌ನಲ್ಲಿರುವ ಆರೋಗ್ಯಕರ ಕೊಬ್ಬಿನಾಮ್ಲಗಳು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ವಾಲ್‌ನಟ್‌ಗಳನ್ನು ದೈನಂದಿನ ಆಹಾರದ ಭಾಗವಾಗಿ ಸೇವಿಸುವುದು ಆರೋಗ್ಯಕ್ಕೆ ಸಹಾಯಕವಾಗುತ್ತದೆ. ಅವುಗಳನ್ನು ಹಾಲು ಅಥವಾ ನೀರಿನಲ್ಲಿ ನೆನೆಸಿ ಸೇವಿಸುವುದು ಇನ್ನೂ ಉತ್ತಮ. ನೆನೆಸಿದ ವಾಲ್‌ನಟ್ಸ್‌ ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.

ಅಂಜೂರ

ಅಂಜೂರದ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್ ದೇಹಕ್ಕೆ ಶಕ್ತಿ ನೀಡುತ್ತದೆ. ಕೊಲೆಸ್ಟ್ರಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮತೋಲನದಲ್ಲಿರುತ್ತವೆ. ಮಧುಮೇಹಿಗಳು ಇದನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಪಿಸಿಓಡಿ ಪೀಡಿತರಿಗೂ ಇದು ಒಳ್ಳೆಯದು. ಮೂಳೆಯ ಆರೋಗ್ಯವನ್ನು ಕೂಡಾ ಸುಧಾರಿಸುತ್ತದೆ.

ಒಣ ಖರ್ಜೂರ

ಒಣ ಖರ್ಜೂರದಲ್ಲಿ ಪೋಷಕಾಂಶಗಳು, ಖನಿಜಗಳು ಮತ್ತು ವಿಟಮಿನ್‌ಗಳು ಅಧಿಕ ಮಟ್ಟದಲ್ಲಿದೆ.  ಖರ್ಜೂರದಲ್ಲಿರುವ ಗಂಧಕದ ಅಂಶ ಅಲರ್ಜಿಯನ್ನು ತಡೆಯಲು ಸಹಾಯ ಮಾಡುತ್ತದೆ. ಇವುಗಳನ್ನು ನೆನೆಸಿಟ್ಟು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಗರ್ಭಿಣಿಯರಿಗೂ ಇದು ಹೆಚ್ಚು ಪ್ರಯೋಜನಕಾರಿ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಆದ್ದರಿಂದಲೇ ರಕ್ತಹೀನತೆಯಿಂದ ಬಳಲುತ್ತಿರುವವರು ಒಣ ಖರ್ಜೂರವನ್ನು ನೆನೆಸಿಟ್ಟು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ.

-ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next