ಬೆಂಗಳೂರು: ಆರೋಗ್ಯಕರ ಹಳ್ಳಿ ನಿರ್ಮಾಣಕ್ಕೆ ಪಣತೊಟ್ಟಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ತನ್ನ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಬೂದು ನೀರಿನ (ಗ್ರೇ ವಾಟರ್) ನಿರ್ವಹಣೆಗಾಗಿ ಸಮು ದಾಯ ಇಂಗು ಗುಂಡಿಗಳ ನಿರ್ಮಾಣಕ್ಕೆ ಹೆಜ್ಜೆಯಿರಿಸಿದೆ.
ಮನೆಯಲ್ಲಿ ಕೈತೊಳೆಯಲು, ಸ್ನಾನಕ್ಕೆ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಅಡುಗೆಗೆ, ತರ ಕಾರಿಗಳ ಸ್ವತ್ಛತೆಗೆ ಬಳಸಿದ ಬೂದು ನೀರು ರಸ್ತೆ ಮೂಲಕ ಎಲ್ಲೆಂದರಲ್ಲಿ ಹರಿದು ಹೋಗಿ ಅನೇಕ ರೀತಿಯ ರೋಗಗಳಿಗೂ ಕಾರಣ ವಾಗುತ್ತದೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ, ಪ್ರತಿ ಹಳ್ಳಿಗಳಲ್ಲೂ ಸಮು ದಾಯ ಇಂಗುಗುಂಡಿ ನಿರ್ಮಾಣಕ್ಕೆ ಮುಂದಾಗಿದೆ.
ನಗರ ಜಿಲ್ಲಾ ಪಂಚಾಯ್ತಿಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 590 ಹಳ್ಳಿಗಳಿವೆ. ಈ ಹಳ್ಳಿಗಳಲ್ಲಿ ಜಿಲ್ಲಾಡಳಿತ ಮನೆ ಹಂತದಲ್ಲೇ ಇಂಗು ಗುಂಡಿ ಮೂಲಕ ಬೂದು ನೀರು ನಿರ್ವ ಹಣೆಗೆ ಆದ್ಯತೆ ನೀಡಿದೆ. ಜತೆಗೆ ಸಮು ದಾಯ ಇಂಗುಗುಂಡಿಗೆ ಒತ್ತು ನೀಡಿದೆ. 28 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಈಗಾಗಲೇ 3.5 ಕೋಟಿ ರೂ. ಸ್ವಚ್ಛಭಾರತ್ ವಿಷನ್ ಯೋಜನೆಯಡಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನೀಲ ನಕ್ಷೆ ಸಿದ್ಧವಾಗಿದೆ ಎಂದು ಸ್ವಚ್ಛ ಭಾರತ್ ವಿಷನ್ ಯೋಜನೆಯ ಅಧಿಕಾರಿಗಳು ಹೇಳಿದ್ದಾರೆ.
ಒಂದೇ ಗ್ರಾಮಕ್ಕೆ ಇಂತಿಷ್ಟೇ ಇಂಗು ಗುಂಡಿಗಳನ್ನು ಅಳವಡಿಸಲಾಗುವುದು ಎಂದು ಹೇಳಲಾಗದು. 5 ಸಾವಿರಕ್ಕಿಂತ ಕಡಿಮೆ ಜನರು ಇರುವ ಹಳ್ಳಿಗಳಿಗೆ ಒಬ್ಬರಿಗೆ ತಲಾ 250 ರೂ. ಮತ್ತು 5 ಸಾವಿರಕ್ಕಿಂತ ಮೇಲ್ಪಟ್ಟ ಜನರು ಇರುವ ಹಳ್ಳಿಗಳಿಗೆ ತಲಾ ಒಬ್ಬರಿಗೆ 650 ರೂ. ಅಂತೆ ಅನುದಾನ ದೊರೆಯಲಿದೆ. ಎಲ್ಲೆಲ್ಲಿ ಹೆಚ್ಚು ಅಗತ್ಯವಿದೆಯೋ ಅಲ್ಲಿ ಸಮುದಾಯ ಇಂಗು ಗುಂಡಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಏನಿದು ಬೂದು ನೀರು? : ಮನೆಯ ದಿನ ನಿತ್ಯದ ಕೆಲಸಗಳಿಗೆ ಬಳಕೆಯಾದ, ಕುಡಿಯಲು ಬಳಕೆಯಾಗದ, ಶೌಚಾಲಯದ ಸಂಪರ್ಕಕ್ಕೆ ಬಾರದ ನೀರು ಬೂದು ನೀರು ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಗೆ ಪ್ರತಿದಿನ ಬಳಕೆಗಾಗಿ ಸುಮಾರು 60 ಲೀಟರ್ ನೀರು ಅಗತ್ಯವಿದೆ. 4 ಜನ ಸದಸ್ಯರಿರುವ ಕುಟುಂಬಕ್ಕೆ ದಿನ ನಿತ್ಯದ ಬಳಕೆಗಾಗಿ ಸರಿ ಸುಮಾರು 250-300 ಲೀಟರ್ ನೀರು ಅಗತ್ಯವಿದೆ. ಹೀಗೆ ಮನೆಯಲ್ಲಿ ನಿತ್ಯ ಗೃಹಬಳಕೆಯ ನೀರಿನಲ್ಲಿ ಅಂದಾಜು ಶೇ. 65-70 ಬೂದು ನೀರು ಉತ್ಪಾದನೆಯಾಗು ತ್ತದೆ. ಇಂತಹ ನೀರು ಇಂಗಲು ಗುಂಡಿ ಮಾಡಲು ಜಿಲ್ಲಾ ಪಂಚಾಯ್ತಿ ಯೋಜನೆ ರೂಪಿಸಿದೆ.
ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಸಮುದಾಯ ಇಂಗುಗುಂಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಜಿನಿಯರ್, ಪಿಡಿಒ ಮತ್ತಿತರರ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಈ ವರ್ಷವೇ ಈ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. –
ನೋಮೇಶ್ ಕುಮಾರ್, ಉಪಕಾರ್ಯದರ್ಶಿ, ಬೆಂಗಳೂರು ನಗರ ಜಿಪಂ
– ದೇವೇಶ ಸೂರಗುಪ್ಪ