ಲಕ್ಷದ್ವೀಪ: ದಕ್ಷಿಣ ಭಾರತ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ತಮ್ಮ ಸಾಹಸಮಯ ಸ್ನಾರ್ಕೆಲಿಂಗ್ ಮಾಡಲು ಪ್ರಯತ್ನಿಸಿ, ಇದೊಂದು ಉಲ್ಲಾಸದಾಯಕ ಅನುಭವ ಎಂದು ಸಾಮಾಜಿಕ ತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಸಾಹಸ ಪ್ರಿಯರು ತಮ್ಮ ಪ್ರವಾಸದ ಪಟ್ಟಿಗೆ ಲಕ್ಷದ್ವೀಪವನ್ನು ಸೇರಿಸಬೇಕೆಂದು ಸಲಹೆ ನೀಡಿದ್ದಾರೆ.
“ತಮ್ಮಲ್ಲಿರುವ ಸಾಹಸಿಗಳನ್ನು ಅಪ್ಪಿಕೊಳ್ಳಲು ಬಯಸುವವರ ಪಟ್ಟಿಯಲ್ಲಿ ಲಕ್ಷದ್ವೀಪವಿರಬೇಕು. ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ನಾರ್ಕೆಲಿಂಗ್ ಅನ್ನು ಸಹ ಪ್ರಯತ್ನಿಸಿದೆ. ಇದು ಎಷ್ಟು ಆಹ್ಲಾದಕರ ಅನುಭವ!” ಎಂದು ಎಕ್ಸ್ ನಲ್ಲಿ ಸ್ನಾರ್ಕೆಲ್ ಮಾಸ್ಕ್ , ಸ್ನಾರ್ಕೆಲ್ ಮತ್ತು ಲೈಫ್ ವೆಸ್ಟ್ ಧರಿಸಿರುವ ಫೋಟೋಗಳು, ಜತೆಯಲ್ಲಿ ಮೀನು ಮತ್ತು ಹವಳದ ಬಂಡೆಗಳ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಇನ್ನೊಂದು ಪೋಸ್ಟ್ ನಲ್ಲಿ ”ಇತ್ತೀಚೆಗಷ್ಟೇ ಲಕ್ಷದ್ವೀಪದ ಜನರ ಮಧ್ಯೆ ಇರುವ ಅವಕಾಶ ಸಿಕ್ಕಿತು. ಅದರ ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಅಲ್ಲಿನ ಜನರ ನಂಬಲಾಗದ ಪ್ರೀತಿಗೆ ನಾನು ಇನ್ನೂ ವಿಸ್ಮಯಗೊಂಡಿದ್ದೇನೆ. ಅಗತ್ತಿ, ಬಂಗಾರಂ ಮತ್ತು ಕವರಟ್ಟಿಯಲ್ಲಿ ಜನರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ಅವರ ಆತಿಥ್ಯಕ್ಕಾಗಿ ನಾನು ದ್ವೀಪಗಳ ಜನರಿಗೆ ಧನ್ಯವಾದ ಹೇಳುತ್ತೇನೆ. ಲಕ್ಷದ್ವೀಪದ ವೈಮಾನಿಕ ನೋಟಗಳು ಸೇರಿದಂತೆ ಕೆಲವು ಗ್ಲಿಂಪ್‌ಗಳು ಇಲ್ಲಿವೆ” ಎಂದು ಫೋಟೋಗಳನ್ನೂ ಗುರುವಾರ ಪೋಸ್ಟ್ ಮಾಡಿದ್ದಾರೆ.
”ಲಕ್ಷದ್ವೀಪದಲ್ಲಿ ನಮ್ಮ ಗಮನವು ವರ್ಧಿತ ಅಭಿವೃದ್ಧಿಯ ಮೂಲಕ ಜೀವನವನ್ನು ಮೇಲಕ್ಕೆತ್ತುವುದಾಗಿದೆ. ಭವಿಷ್ಯದ ಹಿತದೃಷ್ಟಿಯ ಮೂಲಸೌಕರ್ಯವನ್ನು ರಚಿಸುವುದರ ಜತೆಗೆ, ಉತ್ತಮ ಆರೋಗ್ಯ ರಕ್ಷಣೆ, ವೇಗವಾದ ಇಂಟರ್ನೆಟ್ ಮತ್ತು ಕುಡಿಯುವ ನೀರಿನ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ, ರೋಮಾಂಚಕ ಸ್ಥಳೀಯ ಸಂಸ್ಕೃತಿಯನ್ನು ರಕ್ಷಿಸುವುದು ಮತ್ತು ಆಚರಿಸುವ ಮನೋಭಾವವನ್ನು ಇಲ್ಲಿ ಉದ್ಘಾಟನೆಗೊಂಡ ಯೋಜನೆಗಳು ಪ್ರತಿಬಿಂಬಿಸುತ್ತವೆ” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.