Advertisement

ಹಾವುಗಳ ರಕ್ಷಣೆ: ತಾಲೂಕಿಗೆ ಬೇಕಿದೆ ಸ್ನೇಕ್‌ ಪಾರ್ಕ್‌

02:55 AM Jun 20, 2018 | Karthik A |

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಹಾವುಗಳು ಪತ್ತೆಯಾಗುತ್ತವೆ. ವಿಷಕಾರಿ ಹಾವುಗಳೆಂದು ತೋಚಿದಲ್ಲಿ ಕೊಲ್ಲುವುದು, ನಾಗರ, ಕಾಳಿಂಗ ಸರ್ಪ ಹಾಗೂ ಹೆಬ್ಟಾವು ಕಂಡುಬಂದಲ್ಲಿ ಉರಗಪ್ರೇಮಿಗಳಿಗೆ ಹಿಡಿಯಲು ಕರೆ ಮಾಡಲಾಗುತ್ತದೆ. ಸ್ನೇಕ್‌ ಪಾರ್ಕ್‌ ಮಾಡಿದಲ್ಲಿ ಪರಿಸರ ಸ್ನೇಹಿಯಾಗಿರುವ ಹಾವುಗಳನ್ನು ಉಳಿಸಲು ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸಲು, ಹಾವುಗಳು ಹಾಗೂ ಸಾರ್ವಜನಿಕರು ಜತೆಯಾಗಿ ಬದುಕಲು ಸಾಧ್ಯ.

Advertisement

ಜಿಲ್ಲೆಯಲ್ಲಿ ಸುಮಾರು 75 ಬಗೆಯ ಹಾವುಗಳಿವೆ. ಅದರಲ್ಲಿ 5 ಬಗೆಯ ಹಾವುಗಳಷ್ಟೇ ವಿಷಕಾರಿಯಾಗಿವೆ. ಮುಖ್ಯವಾಗಿ ಹಾವುಗಳು ಗಾಯಗೊಂಡಲ್ಲಿ ಚಿಕಿತ್ಸೆ ನೀಡಲು ಯಾವುದೇ ಕೇಂದ್ರಗಳಿಲ್ಲ. ತಾಲೂಕಿನಲ್ಲಿ ಸ್ನೇಕ್‌ ಪಾರ್ಕ್‌ ಹಾಗೂ ಹಾವು ರಕ್ಷಣಾ ಕೇಂದ್ರ ತೆರೆದಲ್ಲಿ ಗಾಯಗೊಂಡ ಹಾವುಗಳ ಪಾಲನೆ ಸಾಧ್ಯ. ಜತೆಗೆ ಅಳಿವಿನಂಚಿನಲ್ಲಿರುವ ಹಾಗೂ ವಿಷಕಾರಿ ಎಂದು ಗುರುತಿಸಲ್ಪಡುವ ಹಾವುಗಳ ರಕ್ಷಣೆಗೂ ಸಹಕಾರಿಯಾಗಲಿದೆ. ಜನರಿಗೆ ನೇರವಾಗಿ ಅರಿವು ಮೂಡಿಸಲೂ ಸಾಧ್ಯವಾಗಲಿದೆ.

ಕೆಲವು ದಿನಗಳ ಹಿಂದೆ ಸವಣಾಲಿನ ಆಯಿಲಹಡಿಮೆ ರಸ್ತೆ ಪಕ್ಕದ ಬೇಲಿಯ ನೆಟ್‌ ನಲ್ಲಿ ಸಿಲುಕಿಕೊಂಡಿದ್ದ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉಜಿರೆಯ ಉರಗತಜ್ಞ ಸ್ನೇಕ್‌ ಜಾಯ್‌ ರಕ್ಷಿಸಿ, ಚಾರ್ಮಾಡಿ ಕಾಡಿಗೆ ಬಿಟ್ಟಿದ್ದರು. ತಾಲೂಕಿನ ವಿವಿಧೆಡೆ ಇಂತಹ ಘಟನೆಗಳು ನಡೆಯುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟವಾದ ಕಾಡು ಪ್ರದೇಶವಿದ್ದು, ಉರಗಗಳು ವಾಸಿಸಲೂ ಸಹಕಾರಿಯಾಗಿದೆ.

ತಂಪು ಪ್ರದೇಶಗಳಲ್ಲಿ ವಾಸ
ಹಾವುಗಳು ಕರಾವಳಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅಡಗಿಕೊಳ್ಳಲು ಪ್ರಶಸ್ತ ಜಾಗ ಹುಡುಕಿ ಬದುಕುತ್ತವೆ. ಕಾಳಿಂಗಗಳು ತಂಪು ಜಾಗಗಳನ್ನು ಹುಡುಕಿಕೊಂಡು ಅಲ್ಲಿ ವಾಸಿಸುವ ಗುಣ ಹೊಂದಿದೆ. ಅಡಿಕೆ ತೋಟಗಳಲ್ಲಿ ತುಂತುರು ನೀರಾವರಿ ಇರುವುದರಿಂದ ತಂಪಾಗಿರುವ ಕಾರಣ ಅವುಗಳು ಸುರಕ್ಷಿತವಾದ ಜಾಗದಲ್ಲಿ ವಾಸಿಸುತ್ತವೆ ಎನ್ನುತ್ತಾರೆ ಉರಗಪ್ರೇಮಿ ಜಾಯ್‌.

400 ಕಾಳಿಂಗ ಸರ್ಪ!
ಬೆಳ್ತಂಗಡಿ ತಾ|ನಲ್ಲಿ ಈವರೆಗೆ ಸುಮಾರು 400 ಕಾಳಿಂಗ ಸರ್ಪಗಳನ್ನು ಹಿಡಿಯಲಾಗಿದೆ. ತಾನು 172, ತನ್ನ ಜತೆಗಿರುವ ಅಶೋಕ್‌ 100ಕ್ಕೂ ಹೆಚ್ಚು ಹಾಗೂ ಇತರೆಡೆಗಳಲ್ಲಿ ಸೇರಿ ಸುಮಾರು 400 ಕಾಳಿಂಗ ಸರ್ಪಗಳನ್ನು ಹಿಡಿದು ಸುರಕ್ಷಿತವಾಗಿ ಬಿಡಲಾಗಿದೆ. ಆದರೆ ಎಲ್ಲಿಯೂ ಈ ಹಾವುಗಳಿಂದ ಜನರಿಗೆ ಸಮಸ್ಯೆಯಾಗಿಲ್ಲ ಎನ್ನುತ್ತಾರೆ ಜಾಯ್‌.

Advertisement

ಪ್ರಕೃತಿ ಸಮತೋಲನಕ್ಕೆ ಅವಶ್ಯ
ಹಾವುಗಳು ಪ್ರಕೃತಿ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಜನತೆ ಸಾಮಾನ್ಯವಾಗಿ ಹೆಬ್ಟಾವು, ಕಾಳಿಂಗ ಸರ್ಪ, ನಾಗರಹಾವು ಬಂದಾಗ ಕರೆ ಮಾಡುತ್ತಾರೆ. ಆದರೆ ಇತರ ಹಾವುಗಳನ್ನು ಗುರುತಿಸುವ ಅಥವಾ ಅವುಗಳ ಸಂರಕ್ಷಣೆಗೂ ಕಾಳಜಿ ವಹಿಸಬೇಕು. ಪ್ರಕೃತಿ ವೃತ್ತದಲ್ಲಿ ಹಾವುಗಳ ನಾಶವಾದಲ್ಲಿ, ಅಸಮತೋಲನ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.

ಸ್ವ ಹಿತಾಸಕ್ತಿಯಿಂದ ಸೇವೆ
ತಾಲೂಕಿನಲ್ಲಿ ಎಲ್ಲೇ ಕರೆಬಂದರೂ ಹಾವುಗಳ ಬಗೆಗಿನ ಕಾಳಜಿಯಿಂದ ಅವುಗಳ ರಕ್ಷಣೆ ಮಾಡಲಾಗುತ್ತಿದೆ. ಅವುಗಳ ಸುಶ್ರೂಷೆಗೂ ಹಣ ಬರುತ್ತಿಲ್ಲ, ಹಿಡಿಯಲು ಯಾರ ಬಳಿಯೂ ಹಣ ಕೇಳುತ್ತಿಲ್ಲ. ಆದರೆ ಹಾವುಗಳನ್ನು ಬೇರೆಡೆ ಸಾಗಿಸಲು ಹಾಗೂ ಸ್ಥಳಕ್ಕೆ ತೆರಳುವ ವಾಹನದ ವೆಚ್ಚ ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಹಾವುಗಳ ಉಳಿಸುವ ದೃಷ್ಟಿಯಿಂದ ಪಾಲನೆ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಜಾಯ್‌.

ಪ್ರತ್ಯೇಕ ಜಾಗ ಅವಶ್ಯ
ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ, ಮನುಷ್ಯರು ಕಡಿಮೆ ಇರುವ ದಟ್ಟವಾದ ಅರಣ್ಯ ಇರುವ ಪ್ರದೇಶಗಳಲ್ಲಿ, ವನ್ಯಜೀವಿ ಸಂರಕ್ಷಣಾ ತಾಣಗಳಲ್ಲಿ ಈ ಸ್ನೇಕ್‌ ಪಾರ್ಕ್‌ ಹಾಗೂ ಉರಗ ರಕ್ಷಣಾ ಕೇಂದ್ರ ಮಾಡಿದಲ್ಲಿ ಉರಗಗಳಿಗೆ ನೆರವಾಗಲಿದೆ. ನೈಸರ್ಗಿಕ ತಾಣದಲ್ಲಿ ನಿರ್ಮಿಸಿದಲ್ಲಿ ಪ್ರವಾಸೋದ್ಯಮವನ್ನೂ ಅಭಿವೃದ್ಧಿಗೊಳಿಸಬಹುದು. ಸ್ಥಳೀಯ ಜನತೆ ಅರಿವು ಪಡೆಯಲು ಸಹಕಾರಿಯಾಗಲಿದೆ. ಆಗುಂಬೆ ಘಾಟಿಯಲ್ಲಿ ಕಾಳಿಂಗ ಸರ್ಪಗಳ ಅಧ್ಯಯನ ನಡೆಸಲಾಗುತ್ತದೆ. ತಾಲೂಕಿನಲ್ಲಿ ಪಾರ್ಕ್‌ ನಿರ್ಮಾಣದಿಂದ ಅಧ್ಯಯನ ಹಾಗೂ ವಿಶೇಷ ಪ್ರಬೇಧಗಳ ಹಾವುಗಳ ರಕ್ಷಣೆಗೂ ಚಿಂತಿಸಿದಂತಾಗುತ್ತದೆ.

ನಿರ್ವಹಣೆಗೆ ಸಿದ್ಧ
ಕಾಳಿಂಗ ಸರ್ಪಗಳು ದಟ್ಟವಾದ ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಸವಣಾಲಿನಲ್ಲಿ ಸಿಕ್ಕ ಕಾಳಿಂಗ ಸುಮಾರು 13 ಅಡಿಯಷ್ಟು ಉದ್ದವಿತ್ತು. ಸುಮಾರು 12 ವರ್ಷಗಳ ಅವಧಿಯಲ್ಲಿ 172 ಕಾಳಿಂಗ ಸರ್ಪಗಳನ್ನು ಹಿಡಿದಿದ್ದೇನೆ. ಜಿಲ್ಲೆಯಲ್ಲಿ ವಿವಿಧ ಬಗೆಯ ಹಾವುಗಳಿವೆ. ಸರಕಾರದಿಂದ ಅನುಮತಿ ನೀಡಿ, ನಿರ್ದಿಷ್ಟ ಜಾಗ, ಸೌಲಭ್ಯ ಹಾಗೂ ಜವಾಬ್ದಾರಿ ನೀಡಿದಲ್ಲಿ ರಾಷ್ಟ್ರದಲ್ಲೇ ಮಾದರಿಯಾಗಿ ಸ್ನೇಕ್‌ ಪಾರ್ಕ್‌ ನಿರ್ವಹಣೆಗೆ ಸಿದ್ಧ. ಇದರಿಂದ ತಮಗೆ ಅಧಿಕೃತ ಮಾನ್ಯತೆ ಲಭಿಸಿದಂತಾಗಿ ಉರಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಉರಗಪ್ರೇಮಿ ಜಾಯ್‌.

ಹಾವುಗಳ ಕೊಲ್ಲದಿರಿ
ಹಾವುಗಳು ಶಾಂತ ಜೀವಿಗಳಾಗಿದ್ದು, ಆಹಾರ ಹುಡುಕಲಷ್ಟೇ ಅಲೆದಾಡುತ್ತವೆ. ಅಹಾರ ದೊರೆತ ಬಳಿಕ ಅವುಗಳನ್ನು ಕೊಬ್ಟಾಗಿ ಸಂಗ್ರಹಿಸಿ ಬಳಕೆ ಮಾಡುತ್ತವೆ. ಅವು ಖಾಲಿಯಾಗುವವರೆಗೆ ಎಲ್ಲೂ ಸುಳಿದಾಡುವುದಿಲ್ಲ. ಹಾವುಗಳು ಭಯವಾಗದೆ ಅಥವಾ ಅವುಗಳಿಗೆ ನೋವಾಗದೆ  ಕಚ್ಚುವುದಿಲ್ಲ. ತ್ರಿಭುಜದ ತಲೆಯ ಹಾವುಗಳು ವಿಷಕಾರಿ ಎನ್ನಲಾಗುತ್ತದೆ, ಆದರೆ ಹೆಚ್ಚಿನ ಹಾವುಗಳ ತಲೆ ತ್ರಿಭುಜಾಕಾರದಲ್ಲಿರುವುದರಿಂದ ವಿಷಕಾರಿಯನ್ನು ಗುರುತಿಸುವುದು ಕಷ್ಟ. ಹಾವುಗಳನ್ನು ಕೊಲ್ಲುವ ಪರಿಪಾಠ ಜನತೆ ಬಿಡಬೇಕಿದೆ.
– ಸ್ನೇಕ್‌ ಜಾಯ್‌, ಉರಗ ಪ್ರೇಮಿ

ಪ್ರಸ್ತಾವನೆ ಸಲ್ಲಿಸಲು ಸಿದ್ಧ
ತಾಲೂಕಿನಲ್ಲಿ ಸ್ನೇಕ್‌ ಪಾರ್ಕ್‌ ಹಾಗೂ ಉರಗ ಸಂರಕ್ಷಣ ಕೇಂದ್ರ ಮಾಡಲು ಸರಕಾರ ಸಿದ್ಧವಾದ್ದಲ್ಲಿ ಪ್ರಸ್ತಾವನೆ ಸಲ್ಲಿಸಲು ಸಿದ್ಧ. ಸರಕಾರ ಹಾಗೂ ಖಾಸಗಿ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂತಹ ಕಾರ್ಯಗಳು ನಡೆದಲ್ಲಿ ಉತ್ತಮ. ಸ್ಥಳೀಯವಾಗಿಯೂ ಉರಗ ಪ್ರೇಮಿಗಳಿದ್ದು, ಅವರನ್ನು ಬಳಸಿಕೊಂಡು ತಾಲೂಕಿನಲ್ಲಿ ಉತ್ತಮ ಕಾರ್ಯ ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತದೆ.
– ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next