Advertisement

Smuggling Garlic: ಭಾರತಕ್ಕೆ ನಿಷೇಧಿತ ಚೀನಿ ಬೆಳ್ಳುಳ್ಳಿ ಪ್ರವೇಶ!

02:11 AM Sep 24, 2024 | Team Udayavani |

ಭಾರತದ ಮಾರುಕಟ್ಟೆ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಹಿಡಿತ ಸಾಧಿಸಿಕೊಳ್ಳುವ ಪ್ರಯತ್ನದಲ್ಲಿ ರುವ ಚೀನ ಈಗ ಅಕ್ರಮವಾಗಿ ಬೆಳ್ಳುಳ್ಳಿಯನ್ನೂ ಭಾರತಕ್ಕೆ ರವಾನಿಸುತ್ತಿದೆ. ಆರೋಗ್ಯಕ್ಕೆ ಮಾರಕ ವಾಗಿರುವ ಚೀನ ಬೆಳ್ಳುಳ್ಳಿ ಈಗಾಗಲೇ ಭಾರತದಲ್ಲಿ ನಿಷೇಧಗೊಂಡಿದೆ. ಆದರೂ ಕಳ್ಳಮಾರ್ಗದ ಮೂಲಕ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಏನಿದು ಚೀನಿ ಬೆಳ್ಳುಳ್ಳಿ, ಭಾರತದಲ್ಲಿ ನಿಷೇಧ ಏಕೆ, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ. 

Advertisement

ಬೆಳ್ಳುಳ್ಳಿ, ಭಾರತದಲ್ಲಿ ಅತೀಹೆಚ್ಚು ಬಳಸಲಾಗುವ ಮಸಾಲೆ ಪದಾರ್ಥಗಳಲ್ಲಿ ಒಂದು. ಹೀಗಾಗಿ ಬೆಳ್ಳುಳ್ಳಿಯ ಬೆಲೆ ಕೆಲವು ಋತು ಮಾನಗಳಲ್ಲಿ ಗಗನಮುಖೀಯಾಗುವುದು ಸಾಮಾನ್ಯ. ಹೀಗಾಗಿ ಮಾರುಕಟ್ಟೆಯಲ್ಲಿ ಕಂಗೊಳಿಸುವ ಬಿಳಿ ಬಣ್ಣ ಹಾಗೂ ಅಗ್ಗದ ಬೆಲೆಗೆ ದೊರೆಯಿತೆಂದು ಕೊಂಡು ಹೋದ ಬೆಳ್ಳುಳ್ಳಿಯಲ್ಲಿ ಪರಿಮಳವೇ ಇರದ ಕಾರಣ ಅದೆಷ್ಟೋ ಗ್ರಾಹಕರು ಬೇಸ್ತು ಬಿದ್ದಿದ್ದಾರೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಭಾರತದಿಂದ ದಶಕಗಳ ಹಿಂದೆಯೇ ನಿಷೇಧಕ್ಕೆ ಒಳಗಾಗಿರುವ ಚೀನಿ ಬೆಳ್ಳುಳ್ಳಿಗಳು ಭಾರತಕ್ಕೆ ಅಕ್ರಮವಾಗಿ ಆಮದಾಗುತ್ತಿದ್ದು, ಗ್ರಾಹಕರು ಕಡಿಮೆ ಬೆಲೆಯ ಬೆಳ್ಳುಳ್ಳಿಗಳೆಡೆಗೆ ಮಾರುಹೋಗುತ್ತಿದ್ದಾರೆ. ಅಲ್ಲದೇ ಬೆಲೆ ಏರಿಕೆಯ ಸಂದರ್ಭದಲ್ಲಿ ಲಾಭದ ಕನಸು ಕಾಣುತ್ತಿದ್ದ ರೈತರು ಮತ್ತು ವರ್ತಕರಿಗೂ ದೊಡ್ಡ ಹೊಡೆತ ನೀಡುತ್ತಿದೆ. ಹೀಗಾಗಿಯೇ ಇತ್ತೀಚೆಗೆ ಚೀನಿ ಬೆಳ್ಳುಳ್ಳಿಗಳು ರಾಜಸ್ಥಾನ ಮತ್ತು ಗುಜರಾತ್‌ನ ಸಗಟು ಮಾರುಕಟ್ಟೆಯಲ್ಲಿ ದೊರೆತಿದ್ದು, ಇದರ ವಿರುದ್ಧ ರಾಜಸ್ಥಾನ ಮತ್ತು ಗುಜರಾತ್‌ನ ಬೆಳ್ಳುಳ್ಳಿ ವರ್ತಕರು ಸಿಡಿದೆದ್ದಿದ್ದಾರೆ.

ಏನಿದು ಚೀನಿ ಬೆಳ್ಳುಳ್ಳಿ ?
ಹೆಸರೇ ಹೇಳುವಂತೆ ಚೀನಿ ಬೆಳ್ಳುಳ್ಳಿಯು ಚೀನದಲ್ಲಿ ಬೆಳೆಯಲಾಗುತ್ತಿರುವ ಸ್ಥಳೀಯ ತಳಿಯಾಗಿದೆ. 2.33 ಕೋಟಿ ಟನ್‌ಗಳಷ್ಟು ಬೆಳ್ಳುಳ್ಳಿ ಬೆಳೆಯುವ ಮೂಲಕ ವಿಶ್ವದ ಶೇ.75 ಬೆಳ್ಳುಳ್ಳಿ ರಫ್ತಿನಲ್ಲಿ ಚೀನ ಪಾಲುದಾರವಾಗಿದೆ. ಆದರೆ ಅತಿ ಲಾಭದ ಹಪಾಹಪಿಗೆ ಬಿದ್ದಿರುವ ಚೀನ, ಅತ್ಯಂತ ಅಪಾಯಕಾರಿ ವಿಧಾನಗಳನ್ನು ಬಳಸಿ ಬೆಳ್ಳುಳ್ಳಿಯನ್ನು ಬೆಳೆಯುತ್ತಿದೆ ಎಂದು ಭಾರತವು ಸೇರಿದಂತೆ ಹಲವು ರಾಷ್ಟ್ರಗಳು ಆರೋಪಿಸಿವೆ. ಅಲ್ಲದೇ ವೆಚ್ಚ ತಗ್ಗಿಸಲು ಬೆಳ್ಳುಳ್ಳಿ ಸಂಸ್ಕರಣೆಯಲ್ಲಿ ಚೀನವು ಕೈದಿಗಳನ್ನು ಬಳಸುತ್ತಿದೆ ಎಂಬ ಅನುಮಾನಗಳಿವೆ.

ಚೀನಿ ಬೆಳ್ಳುಳ್ಳಿಗೆ ಭಾರತದಲ್ಲೇಕೆ ನಿಷೇಧ?
ಅತೀಯಾದ ರಾಸಾಯನಿಕಗಳ ಬಳಕೆ: ಚೀನಿ ಬೆಳ್ಳುಳ್ಳಿಗಳ ಕೃಷಿ ಮತ್ತು ಸಂಸ್ಕರಣೆಯ ಸಂದರ್ಭದಲ್ಲಿ ವ್ಯಾಪಕವಾಗಿ ಕೀಟ ನಾಶಕ ಮತ್ತು ವಿವಿಧ ರಾಸಾಯನಿಕಗಳು ಬಳಕೆಯಾಗುತ್ತಿದೆ. ಜತೆಗೆ ಶಿಲೀಂಧ್ರನಾಶಕವಾಗಿ ಮಿಥೈಲ್‌ ಬೊÅಮೈಡ್‌ ಮತ್ತು ಬೆಳ್ಳುಳ್ಳಿಯು ಮೊಳಕೆಯೊಡೆಯುವುದನ್ನು ತಡೆಯಲು ಮತ್ತು ಬೆಳ್ಳುಳ್ಳಿ ಬಿಳಿ ಬಣ್ಣದಿಂದ ಕಂಗೊಳಿಸಲು ಹಾನಿಕಾರಕ ಕ್ಲೋರಿನ್‌ ಬಳಸಿ ಬ್ಲೀಚಿಂಗ್‌ ಮಾಡಲಾಗುತ್ತಿದೆ.


ಕಳಪೆ ಗುಣಮಟ್ಟ:
ತಜ್ಞರ ಪ್ರಕಾರ ದೇಶಿ ಬೆಳ್ಳುಳ್ಳಿಗಳಲ್ಲಿ ರಕ್ತದೊತ್ತಡ ನಿಯಂತ್ರಿಸುವ ಮತ್ತು ನೈಸರ್ಗಿಕ ಪ್ರತಿಜೀವಕವಾದ ಅಲಿಸಿನ್‌ ಎಂಬ ನೈಸರ್ಗಿಕ ರಾಸಾಯನಿಕ ಸಂಯುಕ್ತವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದರೆ ಚೀನಿ ಬೆಳ್ಳುಳ್ಳಿಗಳ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದಾಗಿ ಅಲಿಸಿನ್‌ ಪ್ರಮಾಣ ಅತ್ಯಲ್ಪವಾಗಿರುತ್ತದೆ. ಅಪಾಯಕಾರಿ ರಾಸಾಯನಿಕಗಳ ಉಳಿಕೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಗುಣಮಟ್ಟದಲ್ಲೂ ದೇಶಿ ಬೆಳ್ಳುಳ್ಳಿಗಳಿಗೆ ಚೀನಿ ಬೆಳ್ಳುಳ್ಳಿಗಳು ಸರಿಸಾಟಿಯಾಗುವುದಿಲ್ಲ.

Advertisement

 ಆರ್ಥಿಕ ಪರಿಣಾಮಗಳು:
ದೇಶಿಯ ಬೆಳ್ಳುಳ್ಳಿಗೆ ಹೋಲಿಸಿದಲ್ಲಿ ಚೀನಿ ಬೆಳ್ಳುಳ್ಳಿಯ ಬೆಲೆ ಕಡಿಮೆಯಿದ್ದ ಕಾರಣ, ಅಗ್ಗದ ಚೀನಿ ಬೆಳ್ಳುಳ್ಳಿಯ ಭಾರತ ಮಾರುಕಟ್ಟೆ ಪ್ರವೇಶದಿಂದ  ಭಾರತೀಯ ಬೆಳ್ಳುಳ್ಳಿ ಬೆಳೆಗಾರರು ಮತ್ತು ವರ್ತಕರಿಗೆ  ಆರ್ಥಿಕ ನಷ್ಟ ತಂದೊಡ್ಡಬಹುದು.

ಚೀನಕ್ಕೆ ಗಿನ್ನೆಸ್‌ ದಾಖಲೆ ಪಟ್ಟ
ಅತೀ ದೊಡ್ಡ ಬೆಳ್ಳುಳ್ಳಿ ಕೃಷಿ ಪ್ರದೇಶ ಹೊಂದಿರುವ ಚೀನವು 2002ರಲ್ಲಿ ಗಿನ್ನಿಸ್‌ ವಿಶ್ವ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ. ಚೀನದ ಶಾನ್‌ಡಾಂಗ್‌ ಪ್ರಾಂತದಲ್ಲಿರುವ ಜಿನ್‌ಕ್ಸಿಂಗ್‌ ಪಟ್ಟಣವನ್ನು ಜಾಗತಿಕ ಬೆಳ್ಳುಳ್ಳಿ ರಾಜಧಾನಿ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದ ಅಕೋಲಾದಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆಯಿಂದಾಗಿ ಕೇವಲ ಚೀನಿ ಬೆಳ್ಳುಳ್ಳಿಗಳಲ್ಲದೇ ಸಿಮೆಂಟ್‌ನಿಂದ ತಯಾರಾದ ಬೆಳ್ಳುಳ್ಳಿಯನ್ನು ಕಲಬೆರಕೆ ಮಾಡಲಾಗುತ್ತಿದೆ ಎಂದು ಕಳೆದ ತಿಂಗಳು ಗುಲ್ಲು ಹಬ್ಬಿತ್ತು.

ನೇಪಾಲ, ಮ್ಯಾನ್ಮಾರ್‌, ಭೂತಾನ್‌ ಮೂಲಕ ಭಾರತಕ್ಕೆ
ಯಾವ ವಸ್ತುವಿನ ಬೆಲೆ ಅಧಿಕವಾಗಿದೆಯೋ, ಅದರ ಬದಲಿ ಅಗ್ಗದ ವಸ್ತುಗಳು ಭಾರತಕ್ಕೆ ಆಮದಾಗುತ್ತಿರುವುದು ಹೊಸದಲ್ಲ. ಈ ಮೊದಲು ಕೂಡ ಅಗ್ಗದ ಕಾಳು ಮೆಣಸು, ಅಡಕೆ, ಪಟಾಕಿಗಳು ಸೇರಿ ಹಲವು ವಸ್ತುಗಳು ಅಕ್ರಮವಾಗಿ ಭಾರತದ ಮಾರುಕಟ್ಟೆ ಪ್ರವೇಶಿಸಿ, ತಲ್ಲಣಕ್ಕೆ ಕಾರಣವಾಗಿವೆ. ಮೂಲಗಳ ಪ್ರಕಾರ ಸದ್ಯ ಚೀನಿ ಬೆಳ್ಳುಳ್ಳಿಗಳು ಭಾರತದ ನೆರೆ ರಾಷ್ಟ್ರಗಳಾದ ನೇಪಾಲ, ಭೂತಾನ್‌ ಮತ್ತು ಮ್ಯಾನ್ಮಾರ್‌ ಮೂಲಕ ಭಾರತಕ್ಕೆ ಅಕ್ರಮವಾಗಿ ಆಮದಾಗುತ್ತಿದೆ. ಈ ವಾದಕ್ಕೆ ಪೂರಕವೆನ್ನುವಂತೆ  ಸೆ.10ರಂದು ನೇಪಾಲ ಗಡಿಯ ಮೂಲಕ ಭಾರತಕ್ಕೆ ಅಕ್ರಮವಾಗಿ ಒಳಪ್ರವೇಶಿದ್ದ 1,400 ಚೀಲಗಳಷ್ಟು ಚೀನಿ ಬೆಳ್ಳುಳ್ಳಿಗಳನ್ನು ನಾಶಪಡಿಸಲಾಗಿದೆ.

ಚೀನಿ ಬೆಳ್ಳುಳ್ಳಿಗಳ ದುಷ್ಪರಿಣಾಮ
ತಜ್ಞರ ಪ್ರಕಾರ ಚೀನಿ ಬೆಳ್ಳುಳ್ಳಿ ಸಂಸ್ಕರಣೆಯಲ್ಲಿ ಬಳಕೆಯಾಗುವ ರಾಸಯನಿಕಗಳಿಂದಾಗಿ ಶ್ವಾಸಕಾಂಗ, ಚರ್ಮ, ಕಣ್ಣು, ನರಮಂಡಲ ಸೇರಿದಂತೆ ಹಲವು ಅಂಗಾಂಗಗಳಿಗೆ ಹಾನಿ ತರುತ್ತದೆ.

ಅಮೆರಿಕದಲ್ಲೂ ಚೀನಿ ಬೆಳ್ಳುಳ್ಳಿಗೆ ವಿರೋಧ 
ಅಮೆರಿಕದ ರಿಪಬ್ಲಿಕನ್‌ ಪಕ್ಷದ ಸೆನೆಟರ್‌ ರಿಕ್‌ ಸ್ಕಾಟ್‌, ಚೀನಿ ಬೆಳ್ಳುಳ್ಳಿಯನ್ನು ಮಾನವ ತ್ಯಾಜ್ಯ ಮಿಶ್ರಿತ ಕೊಳಚೆ ನೀರನ್ನು ಬಳಸಿ ಬೆಳೆಯಲಾಗುತ್ತಿದ್ದು,ಅನಂತರ ಕ್ಲೋರಿನ್‌ ಬಳಸಿ ಬ್ಲೀಚಿಂಗ್‌ ಮಾಡುವ ಮೂಲಕ ಬೆಳ್ಳುಳ್ಳಿಯನ್ನು ಸಂಸ್ಕರಿಸಲಾಗುತ್ತಿದೆ ಎಂದು ಆಪಾದಿಸಿದ್ದರು. ಅಲ್ಲದೇ ಚೀನಿ ಬೆಳ್ಳುಳ್ಳಿಯ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸುವವರೆಗೂ ಮಾನವ ಬಳಕೆಗೆ ಅನುಮತಿ ನೀಡಬಾರದು ಎಂದು ವಾದಿಸಿದ್ದರು. ಸದ್ಯ ಅಮೆರಿಕವು  ಸ್ಥಳೀಯ ಬೆಳ್ಳುಳ್ಳಿ ಬೆಳೆಗಾರರ ಒತ್ತಾಯದ ಹಿನ್ನಲೆಯಲ್ಲಿ ಆಯ್ದ ಚೀನಿ ಮೂಲದ ರಫ್ತು ಸಂಸ್ಥೆಗಳನ್ನು ಹೊರತುಪಡಿಸಿ ಆಮದಾಗುತ್ತಿರುವ ಚೀನ ಮೂಲದ ಬೆಳ್ಳುಳ್ಳಿಗಳಿಗೆ ಶೇ.376  ಆಮದು ಸುಂಕ ವಿಧಿಸುತ್ತಿದೆ.

ಚೀನಿ ಬೆಳ್ಳುಳ್ಳಿ ಮತ್ತು ಭಾರತೀಯ ಬೆಳ್ಳುಳ್ಳಿ

1.  ಗಾತ್ರ ಮತ್ತು ಬಾಹ್ಯ ರಚನೆ 
ಚೀನಿ ಬೆಳ್ಳುಳ್ಳಿಗಳು ಬ್ಲೀಚಿಂಗ್‌ ಕಾರಣದಿಂದಾಗಿ ಹೆಚ್ಚಾಗಿ ಬಿಳಿಯಾಗಿದ್ದರೆ, ದೇಶಿ ಬೆಳ್ಳುಳ್ಳಿಗಳು ಬಿಳಿ, ನಸುಕಂದು ಅಥವಾ ಅಲ್ಪ ಪ್ರಮಾಣದಲ್ಲಿ ನೇರಳೆ  ಬಣ್ಣ ಹೊಂದಿರುತ್ತವೆ. ಚೀನಿ ಬೆಳ್ಳುಳ್ಳಿಗಳ ಗೆಡ್ಡೆಯ ಗಾತ್ರ ದೊಡ್ಡದಾಗಿದ್ದರೆ, ದೇಶಿ ಬೆಳ್ಳುಳ್ಳಿಗಳು ಸಣ್ಣ ಗಾತ್ರ ಹೊಂದಿದ್ದು,  ವಿವಿಧ ಗಾತ್ರದ ಎಸಳುಗಳನ್ನು ಹೊಂದಿರುತ್ತವೆ. ದೇಶಿ ಬೆಳ್ಳುಳ್ಳಿಗಳನ್ನು ಸುಲಿಯುವುದಕ್ಕಿಂತ ಚೀನಿ ಬೆಳ್ಳುಳ್ಳಿಗಳನ್ನು ಸುಲಿಯುವುದು ಸುಲಭ.  ಚೀನಿ ಬೆಳ್ಳುಳ್ಳಿಗಳಿಗೆ ಹೋಲಿಸಿದಲ್ಲಿ ದೇಶಿ ಬೆಳ್ಳುಳ್ಳಿಗಳು ಅಂಟಂಟಾಗಿರುತ್ತವೆ.

2. ಪರಿಮಳ – ರುಚಿ: 
ಬೆಳ್ಳುಳ್ಳಿಗೆ ವಿಶಿಷ್ಟ ಪರಿಮಳ ನೀಡುವ ಅಲಿಸಿನ್‌ ಎಂಬ ಜೈವಿಕ ವಸ್ತು ಭಾರತೀಯ ಬೆಳ್ಳುಳ್ಳಿಯಲ್ಲಿ ಹೆಚ್ಚಿದ್ದು, ದೇಶಿ ಬೆಳ್ಳುಳ್ಳಿ ಕಟು ಪರಿಮಳ ಹೊಂದಿದ್ದರೆ ಚೀನಿ ಬೆಳ್ಳುಳ್ಳಿ ಸೌಮ್ಯ ಪರಿಮಳ ಹೊಂದಿರುತ್ತದೆ.  ಚೀನಿ ಬೆಳ್ಳುಳ್ಳಿಗಳಿಗೆ ಹೋಲಿಸಿದರೆ ದೇಶಿ ಬೆಳ್ಳುಳ್ಳಿಗಳ ರುಚಿ ಹೆಚ್ಚು.

3. ಮಾರುಕಟ್ಟೆ ತಂತ್ರಗಳು
ಮಾರುಕಟ್ಟೆಗೆ ತಲುಪುವ ಮುನ್ನವೇ ಸಂಸ್ಕರಣೆಯ ಭಾಗವಾಗಿ ಚೀನಿ ಬೆಳ್ಳುಳ್ಳಿಯ ಬೇರುಗಳನ್ನು ಸಂಪೂರ್ಣವಾಗಿ ಕತ್ತರಿಸಲಾಗಿರುತ್ತದೆ. ಆದರೆ ದೇಶಿ ಬೆಳ್ಳುಳ್ಳಿಗಳ ಬೇರನ್ನು ಕತ್ತರಿಸಲಾಗಿರುವುದಿಲ್ಲ.

 

– ಅನುರಾಗ್‌ ಗೌಡ .ಬಿ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next