Advertisement

ಸಾಂಕ್ರಾಮಿಕ, ಪ್ರಕೃತಿ ವಿಕೋಪಗಳ ಅವಳಿ ಸವಾಲು

12:59 AM Dec 29, 2021 | Team Udayavani |

ಉಡುಪಿ: ದೇಶಕ್ಕೆ 2020ರಲ್ಲಿ ಕೊರೊನಾ ಆಘಾತದ ಜತೆ ಜತೆಗೆ ಪ್ರಾಕೃತಿಕ ವಿಕೋಪವೂ ಎದುರಾಗಿತ್ತು. ಕೇಂದ್ರ ಸರಕಾರ ಜನರ ವಿಶ್ವಾಸ ಗಳಿಸುವ ಮೂಲಕ ಈ ಎರಡೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಮಾಹೆ ವಿ.ವಿ.ಯ ಎಂಐಸಿಯಿಂದ ಎಂ.ವಿ. ಕಾಮತ್‌ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಮಂಗಳವಾರ ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ “ಭಾರತ ಮತ್ತು ಸಾಂಕ್ರಾಮಿಕ ಅನಂತರದ ಅರ್ಥಿಕ ಪ್ರಗತಿ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಜಗತ್ತು ಕೊರೊನಾ ಆತಂಕದಲ್ಲಿರುವಾಗ ಭಾರತ ಇದರ ಜತೆಗೆ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿತ್ತು. 2020ರಲ್ಲಿ ದೇಶವು ಪ್ರಮುಖ ಐದು ಚಂಡಮಾರುತುಗಳನ್ನು ಕಂಡಿದೆ. 2021ರಲ್ಲೂ ಅದು ಮುಂದುವರಿದಿದೆ. ಕೆಲವು ರಾಜ್ಯಗಳಲ್ಲಿ ಭಾರೀ ಪ್ರವಾಹ ಬಂದಿದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ತೀವ್ರ ಬರ ಕಾಡಿತ್ತು. ಕೇಂದ್ರ ಸರಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜೀವ ಮತ್ತು ಜೀವನೋತ್ಸಾಹ ಉಳಿಸಲು ಹಲವು ಸಮರ್ಥ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ವಿವರಿಸಿದರು.

ಜನರ ಹಸಿವು ನೀಗಿಸಲು 2020ರಿಂದಲೇ ಉಚಿತ ಪಡಿತರ ನೀಡುತ್ತ ಬಂದಿದ್ದೇವೆ. ಮಾರ್ಚ್‌ 2022 ತನಕವೂ ಇದನ್ನು ವಿಸ್ತರಿಸಿದ್ದೇವೆ. ಕೊರೊನಾ ಆರಂಭದಲ್ಲಿ ಲಸಿಕೆ ಬಂದಿರಲಿಲ್ಲ. ಪ್ರಧಾನಿ ಮೋದಿ ದೇಶದ ವಿಜ್ಞಾನಿಗಳು ಮತ್ತು ಇದಕ್ಕೆ ಸಂಬಂಧಿಸಿದ ತಂತ್ರಜ್ಞರಿಗೆ ಕರೆ ನೀಡಿ, ಲಸಿಕೆ ಸಿದ್ಧಪಡಿಸಲು ಬೇಕಾದ ಉತ್ತೇಜನ ನೀಡಿದರು.

ಅದರಂತೆ ಲಸಿಕೆ ಅಭಿವೃದ್ಧಿಪಡಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ. 95ರಷ್ಟು ಜನರಿಗೆ ಮೊದಲ ಡೋಸ್‌ ನೀಡಲಾಗಿದೆ. ಶೇ. 60ರಷ್ಟು ಜನರಿಗೆ 2ನೇ ಡೋಸ್‌ ಕೂಡ ನೀಡಲಾಗಿದೆ. 15ರಿಂದ 18 ವರ್ಷ ವಯೋಮಾನದವರಿಗೂ ಲಸಿಕೆ ನೀಡುವ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗೆ ಕೇಂದ್ರ ಸರಕಾರ ಕೊರೊನಾ ಸಂದಿಗ್ಧವನ್ನು ಸಮರ್ಥವಾಗಿ ನಿಭಾಯಿಸಿದೆ ಎಂದರು.

Advertisement

ಇದನ್ನೂ ಓದಿ:ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಲಾಕ್‌ಡೌನ್‌ನಿಂದ ಸೆಮಿ ಲಾಕ್‌ಡೌನ್‌, ಈಗ ನೋ ಲಾಕ್‌ಡೌನ್‌. ಕೆಲವು ಭಾಗಗಳಲ್ಲಿ ಮೈಕ್ರೋ ವಿಧಾನದಲ್ಲಿ ಲಾಕ್‌ಡೌನ್‌, ಕಂಟೈನ್‌ಮೆಂಟ್‌ ವಲಯ ರಚನೆ ಮಾಡಲಾಗುತ್ತಿದೆ. ವ್ಯಾಪಾರ, ವಹಿವಾಟುಗಳು ಚುರುಕಾಗುತ್ತಿರುವುದರಿಂದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದರು.

ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಎಂ.ವಿ. ಕಾಮತ್‌ ಪತ್ರಕರ್ತರಾಗಿ ಉನ್ನತ ಸಾಧನೆ ಮಾಡಿದ್ದರು. ಪ್ರಸಾರಭಾರತಿ ಅಧ್ಯಕ್ಷರಾಗಿಯೂ ಉತ್ಕೃಷ್ಟ ಸೇವೆ ಸಲ್ಲಿಸಿದ್ದಾರೆ. ಅವರ ದೂರದೃಷ್ಟಿತ್ವ ಎಲ್ಲ ರೀತಿಯಲ್ಲೂ ಸಹಕಾರಿಯಾಗಿದೆ ಎಂದರು.

ಕುಲಪತಿ ಲೆ| ಡಾ| ಎಂ.ಡಿ. ವೆಂಕಟೇಶ್‌ ಸ್ವಾಗತಿಸಿದರು. ಎಂಐಸಿ ಆ್ಯನಿಮೇಶನ್‌ ವಿಭಾಗದ ಮುಖ್ಯಸ್ಥ ಡಾ| ಬಾಲಾಜಿ ವಂದಿಸಿದರು.

ಎಂ.ವಿ. ಕಾಮತ್‌ ಸ್ಫೂರ್ತಿ, ಪ್ರೇರಣೆ
ಬಹುಮುಖ ವ್ಯಕ್ತಿತ್ವದ ಎಂ.ವಿ. ಕಾಮತ್‌ ವಿಜ್ಞಾನ ಪದವೀಧರರಾಗಿದ್ದರೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದರು. ಪತ್ರಕರ್ತರಾಗಿ ಸಂವಿಧಾನದ ಕರಡು ಸಿದ್ಧಪಡಿಸುವ ಸಾಂವಿಧಾನಿಕ ಸಭೆಯ ಕಲಾಪಗಳನ್ನು ಪ್ರತ್ಯಕ್ಷ ವರದಿ ಮಾಡಿದ್ದರು. ಗೋಡ್ಸೆಯ ನ್ಯಾಯಾಂಗ ವಿಚಾರಣೆ, ದೇಶದ ಸ್ವಾತಂತ್ರ್ಯದ ಘಳಿಗೆ ಸೇರಿದಂತೆ ಅನೇಕ ಪ್ರಮುಖ ಘಟನೆಗಳಿಗೆ ಪತ್ರಕರ್ತರಾಗಿ ಸಾಕ್ಷಿಯಾಗಿದ್ದರು. ಎಂ.ವಿ. ಕಾಮತ್‌ ಅವರ ಜೀವನ ಯುವ ಜನತೆಗೆ ಸ್ಫೂರ್ತಿ ಹಾಗೂ ಪ್ರೇರಣೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next