ಬೆಂಗಳೂರು: ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಗೆ ದಿನಗಣನೆ ಆರಂಭವಾಗಿದೆ. ವಾರದ ಹಿಂದೆ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಉತ್ತಮ ತಂಡವನ್ನೇ ಖರೀದಿ ಮಾಡಿದೆ. ಉತ್ತಮ ದೇಶಿಯ ಮತ್ತು ವಿದೇಶಿ ಆಟಗಾರರನ್ನು ಖರೀದಿಸಿದ ಆರ್ಸಿಬಿ ಮೊದಲ ಕೂಟಕ್ಕೆ ಸಿದ್ದವಾಗಿದೆ.
ಇದೀಗ ತಂಡದ ನಾಯಕಿ ನೇಮಕವಾಗಿದೆ. ನಿರೀಕ್ಷೆಯಂತೆಯೇ ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂಧನಾ ಅವರು ಆರ್ ಸಿಬಿ ವನಿತಾ ತಂಡವನ್ನು ಮುನ್ನಡೆಸಲಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ಪುರುಷರ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಅವರು ವಿಡಿಯೋ ಮೂಲಕ ಆರ್ ಸಿಬಿ ವನಿತಾ ನಾಯಕಿಯ ಹೆಸರನ್ನು ಅನಾವರಣ ಮಾಡಿದರು.
“ಒಬ್ಬ ನಂ. 18 ರಿಂದ ಇನ್ನೊಂದಕ್ಕೆ, ಒಬ್ಬ ನಾಯಕನಿಂದ ಇನ್ನೊಂದಕ್ಕೆ, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮಹಿಳಾ ಪ್ರೀಮಿಯರ್ ಲೀಗ್ ಗೆ ಆರ್‌ಸಿಬಿಯ ನಾಯಕಿಯಾಗಿ ಸ್ಮೃತಿ ಮಂಧನಾ ಅವರನ್ನು ಘೋಷಿಸುತ್ತಾರೆ” ಎಂದು ಫ್ರಾಂಚೈಸ್ ಟ್ವಿಟರ್ ನಲ್ಲಿ ಬರೆದಿದೆ.
“ನಮ್ಮ ಮಹಿಳಾ ನಾಯಕಿ ಆರ್ ಸಿಬಿಯನ್ನು ಮುನ್ನಡೆಸುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ಆಲ್ ದಿ ವೆರಿ ಬೆಸ್ಟ್ ಸ್ಮೃತಿ ಮಂಧನಾ. ಪಂದ್ಯಗಳಲ್ಲಿ ನಿಮ್ಮನ್ನು ಭೇಟಿಯಾಗೋಣ” ಎಂದು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದರು.
ನೂತನ ನಾಯಕಿ ಮಂದನಾ ಅವರೂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, “ನನಗೆ ಈ ಅದ್ಭುತ ಅವಕಾಶವನ್ನು ನೀಡಿದ ಆರ್ ಸಿಬಿ ಫ್ರಾಂಚೈಸಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಭಿಮಾನಿಗಳಿಂದ ಎಲ್ಲಾ ಪ್ರೀತಿ ಮತ್ತು ಬೆಂಬಲವನ್ನು ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ, ಆರ್ ಸಿಬಿ ಅಭಿಮಾನಿಗಳು ವಿಶ್ವದ ಅತ್ಯುತ್ತಮರು ಎಂದು ನಾನು ಕೇಳಿದ್ದೇನೆ ಮತ್ತು ಡಬ್ಲ್ಯುಪಿಎಲ್ ನಲ್ಲಿ ಆರ್‌ಸಿಬಿಯನ್ನು ಯಶಸ್ಸಿನತ್ತ ಮುನ್ನಡೆಸಲು ನಾನು ಪೂರ್ಣ ಪ್ರಯತ್ನ ಮಾಡುವುದಾಗಿ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.