ಮೆಕಾಯ್: ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಶ್ ಲೀಗ್ ನಲ್ಲಿ ಆಡುತ್ತಿರುವ ಭಾರತದ ಸ್ಮೃತಿ ಮಂಧನಾ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಸಿಡ್ನಿ ಥಂಡರ್ಸ್ ಪರವಾಗಿ ಆಡುತ್ತಿರುವ ಮಂಧನಾ ಬುಧವಾರ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಅಜೇಯ ಶತಕ ಬಾರಿಸಿ ಮಿಂಚಿದರು.
64 ಎಸೆತಗಳನ್ನು ಎದುರಿಸಿದ ಮಂಧನಾ ಅಜೇಯ 114 ರನ್ ಗಳಿಸಿದರು. 14 ಬೌಂಡರಿ ಮತ್ತು ಮೂರು ಸಿಕ್ಸರ್ ಗಳನ್ನು ಮಂಧನಾ ಬಾರಿಸಿದರು. ಮಹಿಳಾ ಬಿಬಿಎಲ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆಗೆ ಸ್ಮೃತಿ ಪಾತ್ರರಾದರು. ಆದರೆ ಸ್ಮೃತಿ ಮಂಧನಾ ಶತಕದ ಹೊರತಾಗಿಯೂ ಸಿಡ್ನಿ ಥಂಡರ್ಸ್ ತಂಡ ನಾಲ್ಕು ರನ್ ಅಂತರದ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ರೆನೆಗೇಡ್ಸ್ ತಂಡಕ್ಕೆ ಭಾರತೀಯ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ನೆರವಾದರು. 55 ಎಸೆತ ಎದುರಿಸಿದ ಹರ್ಮನ್ ಎರಡು ಸಿಕ್ಸರ್ ಮತ್ತು 11 ಬೌಂಡರಿ ನೆರವಿನಿಂದ ಅಜೇಯ 81 ರನ್ ಗಳಿಸಿದರು. ರೆನೆಗೇಡ್ಸ್ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಇದನ್ನೂ ಓದಿ:ಟಿ20 ಪಂದ್ಯದ ವೇಳೆ ಸಿರಾಜ್ ತಲೆಗೆ ಹೊಡೆದ ನಾಯಕ ರೋಹಿತ್: ವಿಡಿಯೋ ವೈರಲ್
ಗುರಿ ಬೆನ್ನತ್ತಿದ್ದ ಥಂಡರ್ಸ್, ಎರಡು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲು ಮಾತ್ರ ಶಕ್ತವಾಯಿತು. ಸ್ಮೃತಿ ಮಂಧನಾ ಬಿರುಸಾಗಿ ಆಡಿದರೂ ಮತ್ತೊಂದೆಡೆ ತಹಿಲಾ ವಿಲ್ಸನ್ ರ ನಿಧಾನಗತಿಯ ಆಟ ತಂಡಕ್ಕೆ ಮುಳುವಾಯಿತು. ವಿಲ್ಸನ್ 39 ಎಸೆತಗಳಲ್ಲಿ 38 ರನ್ ಗಳಿಸಿದರು. ಪಂದ್ಯ ಸೋತರೂ ಸ್ಮೃತಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದೇ ವೇಳೆ ಮಹಿಳಾ ಬಿಬಿಎಲ್ ಇತಿಹಾಸದಲ್ಲಿ ಅತೀ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ದಾಖಲೆಯನ್ನು ಸ್ಮೃತಿ ಸರಿಗಟ್ಟಿದರು. ಈ ಹಿಂದೆ 2017ರಲ್ಲಿ ಗಾರ್ಡ್ನರ್ ಕೂಡಾ 114 ರನ್ ಗಳಿಸಿದ್ದರು.