Advertisement

ವನಿತಾ ಟಿ20 ತ್ರಿಕೋನ ಸರಣಿ: ಭಾರತಕ್ಕೆ ಸಮಾಧಾನಕರ ಜಯ

06:30 AM Mar 30, 2018 | Team Udayavani |

ಮುಂಬಯಿ: ತ್ರಿಕೋನ ಸರಣಿ ಫೈನಲ್‌ ರೇಸ್‌ನಿಂದ ಬಹಳ ಮೊದಲೇ ಹೊರಬಿದ್ದಿದ್ದ ಭಾರತ ಕೊನೆಯ ಲೀಗ್‌ ಪಂದ್ಯದಲ್ಲಿ ಸಮಾಧಾನಕರ ಗೆಲುವೊಂದನ್ನು ಸಾಧಿಸಿ ಅಂಕದ ಖಾತೆ ತೆರೆದಿದೆ. ಗುರುವಾರದ ಮುಖಾಮುಖೀಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ ಇಂಗ್ಲೆಂಡನ್ನು 8 ವಿಕೆಟ್‌ಗಳಿಂದ ಮಣಿಸಿ ಅಷ್ಟರ ಮಟ್ಟಿಗೆ ತೃಪ್ತಿಪಟ್ಟಿತು.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡನ್ನು 18.5 ಓವರ್‌ಗಳಲ್ಲಿ 107 ರನ್ನುಗಳ ಸಣ್ಣ ಮೊತ್ತಕ್ಕೆ ಉರುಳಿಸಿದ ಭಾರತ, ಬಳಿಕ 15.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 108 ರನ್‌ ಬಾರಿಸಿ ಕೂಟದ ಮೊದಲ ಗೆಲುವನ್ನು ಒಲಿಸಿಕೊಂಡಿತು.

ಇದು ಇಂಗ್ಲೆಂಡಿನ ಎದುರಾದ ಸತತ 2ನೇ ಸೋಲು. ಇದರಿಂದ ಲೀಗ್‌ ಹಂತದ ದ್ವಿತೀಯ ಸ್ಥಾನಿಯಾಗಿ ಆಂಗ್ಲ ವನಿತೆಯರು ಫೈನಲ್‌ ತಲುಪಿದರು. 3 ಪಂದ್ಯ ಗೆದ್ದ ಆಸ್ಟ್ರೇಲಿಯ ಅಗ್ರಸ್ಥಾನಿಯಾಗಿ ಪ್ರಶಸ್ತಿ ಸಮರಕ್ಕೆ ಅಣಿಯಾಯಿತು. ಇತ್ತಂಡಗಳ ನಡುವಿನ ಪ್ರಶಸ್ತಿ ಫೈಟ್‌ ಶನಿವಾರ ನಡೆಯಲಿದೆ.

ಕೊನೆಯ ಲೀಗ್‌ ಪಂದ್ಯ ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ಬುಧವಾರದ ಮುಖಾಮುಖೀಯ ಪುನರಾವರ್ತನೆಯಂತಿತ್ತು. ಅಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಅಲ್ಪ ಮೊತ್ತಕ್ಕೆ ಕುಸಿದಿತ್ತು (97). ಚೇಸಿಂಗಿಗೆ ಇಳಿದ ಆಸೀಸ್‌ 2 ವಿಕೆಟ್‌ಗಳನ್ನು ಬಹಳ ಬೇಗನೇ ಕಳೆದುಕೊಂಡಿತ್ತು; ಕೊನೆಗೆ 8 ವಿಕೆಟ್‌ಗಳ ಜಯ ಒಲಿಸಿಕೊಂಡಿತ್ತು.

ಗುರುವಾರದ ಪಂದ್ಯದಲ್ಲಿ ನೂರರ ಗಡಿ ದಾಟಿದ್ದಷ್ಟೇ ಇಂಗ್ಲೆಂಡಿನ ಸಾಧನೆ. ರನ್‌ ಬೆನ್ನಟ್ಟುವ ವೇಳೆ ಭಾರತ ಮಿಥಾಲಿ ರಾಜ್‌ (6) ಮತ್ತು ಜೆಮಿಮಾ ರೋಡ್ರಿಗಸ್‌ (7) ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು. ಆದರೆ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಭರ್ಜರಿ ಬೀಸುಗೆಗೆ ಮುಂದಾದರು. ಇವರಿಗೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಉತ್ತಮ ಬೆಂಬಲ ನೀಡಿದರು; ಮುರಿಯದ 3ನೇ ವಿಕೆಟಿಗೆ 10.3 ಓವರ್‌ಗಳಿಂದ 60 ರನ್‌ ಒಟ್ಟುಗೂಡಿತು.

Advertisement

ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಮತಿ ಮಂಧನಾ 41 ಎಸೆತಗಳಿಂದ 62 ರನ್‌ ಬಾರಿಸಿ ಔಟಾಗದೆ ಉಳಿದರು (8 ಬೌಂಡರಿ, 1 ಸಿಕ್ಸರ್‌). ಕೌರ್‌ ಅವರ 20 ರನ್‌ 31 ಎಸೆತಗಳಿಂದ ಬಂತು (2 ಬೌಂಡರಿ).

ಭಾರತದ ಘಾತಕ ಸ್ಪಿನ್‌ ದಾಳಿ
ಇಂಗ್ಲೆಂಡ್‌ ಆಟಗಾರ್ತಿಯರು ಆತಿಥೇಯರ ಘಾತಕ ಸ್ಪಿನ್‌ ದಾಳಿಗೆ ಸಿಲುಕಿ ತತ್ತರಿಸಿದರು. ಹತ್ತರಲ್ಲಿ 9 ವಿಕೆಟ್‌ಗಳು ಸ್ಪಿನ್ನರ್‌ಗಳ ಬುಟ್ಟಿಗೆ ಬಿದ್ದವು. ಇದರಲ್ಲಿ 21ಕ್ಕೆ 3 ವಿಕೆಟ್‌ ಕಿತ್ತ ಅನುಜಾ ಪಾಟೀಲ್‌ ಹೆಚ್ಚಿನ ಯಶಸ್ಸು ಸಂಪಾದಿಸಿದರು. ಉಳಿದಂತೆ ರಾಧಾ ಯಾದವ್‌, ದೀಪ್ತಿ ಶರ್ಮ ಹಾಗೂ ಪೂನಂ ಯಾದವ್‌ ತಲಾ 2 ವಿಕೆಟ್‌ ಕಿತ್ತರು. ಉಳಿದೊಂದು ವಿಕೆಟ್‌ ಮಧ್ಯಮ ವೇಗಿ ಪೂಜಾ ವಸ್ತ್ರಾಕರ್‌ ಪಾಲಾಯಿತು. ಒಂದು ಮೇಡನ್‌ ಓವರ್‌ ಎಸೆದ ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ವಿಕೆಟ್‌ ಕೀಳುವಲ್ಲಿ ವಿಫ‌ಲರಾದರು.

ಇಂಗ್ಲೆಂಡ್‌ ಸರದಿಯ ಮೊದಲ 6 ಮಂದಿ ಎರಡಂಕೆಯ ಗಡಿ ದಾಟಿದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫ‌ಲರಾದರು. 31 ರನ್‌ ಮಾಡಿದ ಓಪನರ್‌ ಡೇನಿಯಲ್‌ ವ್ಯಾಟ್‌ ಅವರದೇ ಸರ್ವಾಧಿಕ ಗಳಿಕೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-18.5 ಓವರ್‌ಗಳಲ್ಲಿ 107 (ವ್ಯಾಟ್‌ 31, ಜೋನ್ಸ್‌ 15, ಸ್ಕಿವರ್‌ 15, ಅನುಜಾ 21ಕ್ಕೆ 3, ರಾಧಾ ಯಾದವ್‌ 16ಕ್ಕೆ 2, ಪೂನಂ ಯಾದವ್‌ 17ಕ್ಕೆ 2, ದೀಪ್ತಿ 24ಕ್ಕೆ 2). ಭಾರತ-15.4 ಓವರ್‌ಗಳಲ್ಲಿ 2 ವಿಕೆಟಿಗೆ 108 (ಮಂಧನಾ ಔಟಾಗದೆ ಔಟಾಗದೆ 62, ಕೌರ್‌ ಔಟಾಗದೆ 20, ಹ್ಯಾಝೆಲ್‌ 17ಕ್ಕೆ 2). ಪಂದ್ಯಶ್ರೇಷ್ಠ: ಅನುಜಾ ಪಾಟೀಲ್‌.

Advertisement

Udayavani is now on Telegram. Click here to join our channel and stay updated with the latest news.

Next