ದುಬಾೖ: ಸೋಮವಾರ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಮೋಘ ಆಟವಾಡಿದ ಸ್ಮೃತಿ ಮಂಧನಾ ನೂತನ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ತೃತೀಯ ಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಜೆಮಿಮಾ ರೋಡ್ರಿಗಸ್ 12ನೇ ಸ್ಥಾನಕ್ಕೆ ಏರಿದ್ದಾರೆ.
ಮೊದಲ 3 ಪಂದ್ಯಗಳಲ್ಲಿ ಅಜೇಯವಾಗಿ ಉಳಿದು, ಕ್ರಮವಾಗಿ 31, 44 ಮತ್ತು 47 ರನ್ ಮಾಡಿದ ತಂಡದ ಯುವ ಬ್ಯಾಟರ್ ರಿಚಾ ಘೋಷ್ 20ನೇ ಸ್ಥಾನದಲ್ಲಿದ್ದಾರೆ. ಐರ್ಲೆಂಡ್ ವಿರುದ್ಧ ಮೊದಲ ಎಸೆತಕ್ಕೇ ಔಟಾದುದರಿಂದ ರಿಚಾ ಕೆಲವು ಅಂಕಗಳನ್ನು ಕಳೆದುಕೊಳ್ಳಬೇಕಾಯಿತು. ರಿಚಾ ಈಗ 572 ಅಂಕ ಹೊಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲ್ಯಾಂಡ್‌ನ ಪೇಸ್ ಬೌಲರ್ ಲೀ ಟಹುಹು ಜೀವನಶ್ರೇಷ್ಠ 7ನೇ ರ್‍ಯಾಂಕಿಂಗ್ ಪಡೆದಿದ್ದಾರೆ. ವಿಶ್ವಕಪ್ ಕೂಟದಲ್ಲಿ ಸರ್ವಾಧಿಕ 8 ವಿಕೆಟ್ ಕಿತ್ತ ಸಾಧನೆ ಟಹುಹು ಅವರದು. ಹೊಂದಿರುವ ಅಂಕ 701. ನ್ಯೂಜಿಲ್ಯಾಂಡ್‌ನ ಅಮೇಲಿಯಾ ಕೆರ್ ಕೂಡ ಬ್ಯಾಟಿಂಗ್ (16) ಹಾಗೂ ಆಲ್‌ರೌಂಡರ್ (3) ವಿಭಾಗದಲ್ಲಿ ಜೀವನಶ್ರೇಷ್ಠ ರ್‍ಯಾಂಕಿಂಗ್ ಗಳಿಸಿದ್ದಾರೆ. ಪಾಕಿಸ್ಥಾನದ ನಿದಾ ದಾರ್ ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ 5 ಸ್ಥಾನಗಳ ಪ್ರಗತಿ ಸಾಧಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯದ ಡಾರ್ಸಿ ಬ್ರೌನ್ ಅವರದು 10 ಸ್ಥಾನಗಳ ನೆಗೆತ. ಅವರೀಗ ಜೀವನಶ್ರೇಷ್ಠ 8ನೇ ಸ್ಥಾನಕ್ಕೆ ಏರಿದ್ದಾರೆ.