Advertisement

INDWvsNZW: ಮಂಧನಾ ಶತಕ; ವನಿತೆಯರ ದೀಪಾವಳಿ; ಭಾರತಕ್ಕೆ 2-1 ಸರಣಿ

10:14 PM Oct 29, 2024 | Team Udayavani |

ಅಹ್ಮದಾಬಾದ್‌: ಎಡಗೈ ಓಪನರ್‌ ಸ್ಮತಿ ಮಂಧನಾ ಅವರ ಅಮೋಘ ಶತಕ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಅಜೇಯ ಅರ್ಧ ಶತಕ ಸಾಹಸದಿಂದ ಅಂತಿಮ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಭಾರತದ ವನಿತೆಯರು ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ತಮ್ಮದಾಗಿಸಿಕೊಂಡರು. ದೀಪಾವಳಿ ಸಂಭ್ರಮಕ್ಕೆ ಹೊಸ ರಂಗು ಮೂಡಿಸಿದರು.

Advertisement

ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿ ಲ್ಯಾಂಡ್‌ 49.5 ಓವರ್‌ಗಳಲ್ಲಿ 232ಕ್ಕೆ ಆಲೌಟ್‌ ಆದರೆ, ಭಾರತ 44.2 ಓವರ್‌ಗಳಲ್ಲಿ 4 ವಿಕೆಟಿಗೆ 236 ರನ್‌ ಬಾರಿಸಿತು.

ಹಿಂದಿನೆರಡು ಪಂದ್ಯಗಳಲ್ಲಿ ತೀವ್ರ ರನ್‌ ಬರಗಾಲ ಅನುಭವಿಸಿದ್ದ ಮಂಧನಾ, ಇಲ್ಲಿ 8ನೇ ಶತಕ ಬಾರಿಸಿ ಮೆರೆದರು. ಅವರದು ಭರ್ತಿ 100 ರನ್‌ ಕೊಡುಗೆ. 41ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಮಂಧನಾ 122 ಎಸೆತ ಎದುರಿಸಿ, 10 ಬೌಂಡರಿ ಹೊಡೆದರು.

ಶಫಾಲಿ ವರ್ಮ (12) ಬೇಗನೇ ಔಟಾದರು. ಯಾಸ್ತಿಕಾ ಭಾಟಿಯಾ 35 ರನ್‌, ಜೆಮಿಮಾ ರೋಡ್ರಿಗಸ್‌ 22 ರನ್‌ ಮಾಡಿದರು. ಕೌರ್‌ ಕೊಡುಗೆ ಅಜೇಯ 59 ರನ್‌ (63 ಎಸೆತ, 6 ಬೌಂಡರಿ). ಮಂಧನಾ-ಕೌರ್‌ 3ನೇ ವಿಕೆಟ್‌ ಜತೆಯಾಟದಲ್ಲಿ 117 ರನ್‌ ಪೇರಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಹಾಲಿಡೇ ನೆರವು

Advertisement

8ನೇ ಓವರ್‌ ವೇಳೆ 25ಕ್ಕೆ 2 ವಿಕೆಟ್‌, ಅರ್ಧ ಹಾದಿ ಕ್ರಮಿಸುವ ವೇಳೆ 88ಕ್ಕೆ 5 ವಿಕೆಟ್‌ ಉದುರಿಸಿಕೊಂಡ ನ್ಯೂಜಿಲ್ಯಾಂಡ್‌ ಇನ್ನೂರರ ಗಡಿ ಮುಟ್ಟುವುದೇ ಅನುಮಾನವಿತ್ತು. ಆದರೆ ಮಧ್ಯಮ ಕ್ರಮಾಂಕದ ಆಟಗಾರ್ತಿ ಬ್ರೂಕ್‌ ಹಾಲಿಡೇ ಅಮೋಘ ಹೋರಾಟವೊಂದನ್ನು ಸಂಘಟಿಸಿ ಇನ್ನಿಂಗ್ಸ್‌ ಬೆಳೆಸತೊಡಗಿದರು. ಹಾಲಿಡೇ 96 ಎಸೆತ ನಿಭಾಯಿಸಿ 86 ರನ್‌ ಬಾರಿಸಿದರು. ಸಿಡಿಸಿದ್ದು 9 ಬೌಂಡರಿ ಹಾಗೂ 3 ಸಿಕ್ಸರ್‌.

ಓಪನರ್‌ ಜಾರ್ಜಿಯಾ ಪ್ಲಿಮ್ಮರ್‌ 39, ಕೀಪರ್‌ ಇಸಬೆಲ್ಲಾ ಗೇಝ್ 25, ಲೀ ಟಹುಹು ಔಟಾಗದೆ 24 ರನ್‌ ಮಾಡಿದರು.

ಭಾರತದ ಬೌಲಿಂಗ್‌ ಜತೆಗೆ ಫೀಲ್ಡಿಂಗ್‌ ಕೂಡ ಉತ್ತಮ ಮಟ್ಟದಲ್ಲಿತ್ತು. 3 ರನೌಟ್‌ ಮಾಡಿದ್ದೇ ಇದಕ್ಕೆ ಸಾಕ್ಷಿ. ಅಪಾಯಕಾರಿ ಓಪನರ್‌ ಸುಝೀ ಬೇಟ್ಸ್‌ (4) ರನೌಟ್‌ ಆದವರಲ್ಲಿ ಒಬ್ಬರು. ಕಳೆದ ಪಂದ್ಯದಲ್ಲಿ ಭಾರತವನ್ನು ಕಾಡಿದ್ದ ನಾಯಕಿ ಸೋಫಿ ಡಿವೈನ್‌ ಕೇವಲ 9 ರನ್‌ ಮಾಡಿ ಪ್ರಿಯಾ ಮಿಶ್ರಾ ಎಸೆತದಲ್ಲಿ ಬೌಲ್ಡ್‌ ಆದರು. ಪ್ರಿಯಾ ತಮ್ಮ ಮೊದಲ ಓವರ್‌ನಲ್ಲೇ ಈ ಬಹುಮೂಲ್ಯ ವಿಕೆಟ್‌ ಉಡಾಯಿಸಿದರು. ಮತ್ತೆ ಮಿಂಚಿದ ದೀಪ್ತಿ ಶರ್ಮ 39ಕ್ಕೆ 3 ವಿಕೆಟ್‌ ಉರುಳಿಸಿದರು. ಪ್ರಿಯಾ ಮಿಶ್ರಾ 2, ರೇಣುಕಾ ಸಿಂಗ್‌ ಮತ್ತು ಸೈಮಾ ಠಾಕೂರ್‌ ಒಂದೊಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-49.5 ಓವರ್‌ಗಳಲ್ಲಿ 232 (ಹಾಲಿಡೇ 86, ಪ್ಲಿಮ್ಮರ್‌ 39, ಗೇಝ್ 25, ಟಹುಹು ಔಟಾಗದೆ 24, ದೀಪ್ತಿ 39ಕ್ಕೆ 3, ಪ್ರಿಯಾ 41ಕ್ಕೆ 2). ಭಾರತ-44.2 ಓವರ್‌ಗಳಲ್ಲಿ 4 ವಿಕೆಟಿಗೆ 236 (ಮಂಧನಾ 100, ಕೌರ್‌ ಔಟಾಗದೆ 59, ಯಾಸ್ತಿಕಾ 35, ಜೆಮಿಮಾ 22, ರೋವ್‌ 47ಕ್ಕೆ 2). ಪಂದ್ಯಶ್ರೇಷ್ಠ: ಸ್ಮತಿ ಮಂಧನಾ. ಸರಣಿಶ್ರೇಷ್ಠ: ದೀಪ್ತಿ ಶರ್ಮ.

2ನೇ ಸ್ಥಾನಕ್ಕೇರಿದ ದೀಪ್ತಿ ಶರ್ಮ

ದುಬಾೖ: ಭಾರತದ ಆಫ್ಸ್ಪಿನ್ನರ್‌ ದೀಪ್ತಿ ಶರ್ಮ ವನಿತಾ ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಆಗಿದೆ. ದೀಪ್ತಿ 2 ಸ್ಥಾನಗಳ ಪ್ರಗತಿ ಸಾಧಿಸಿದರು.

ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಯಲ್ಲಿ ದೀಪ್ತಿ ಉತ್ತಮ ನಿರ್ವಹಣೆ ಕಾಯ್ದುಕೊಂಡು ಬಂದಿದ್ದು, ಮೊದಲೆರಡು ಪಂದ್ಯಗಳಲ್ಲಿ 3 ವಿಕೆಟ್‌ ಕೆಡವಿದ್ದರು. ಇಂಗ್ಲೆಂಡ್‌ನ‌ ಸೋಫಿ ಎಕ್‌Éಸ್ಟೋನ್‌ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next