ಹರಿಹರ: ಒಣಗಿದ ಬೇವಿನ ಎಲೆಗಳ ಹೊಗೆ ಹಾಕುವ ಮೂಲಕ ಸೊಳ್ಳೆಗಳನ್ನು ನಿವಾರಿಸಬಹುದು ಎಂದು ಭಾನುವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಬ್ದುಲ್ ಖಾದರ್ ಹೇಳಿದರು.
ತಾಲೂಕಿನ ಭಾನುವಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜಿಪಂ, ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಡೆಂಘೀ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ಮನೆ ಅಂಗಳ, ಕೊಟ್ಟಿಗೆ ಮುಂತಾದೆಡೆ ಸೊಳ್ಳೆಗಳ ಕಾಟ ತಪ್ಪಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಸುಲಭದ ಹಾಗೂ ಖರ್ಚಿಲ್ಲದ ವಿಧಾನವಾಗಿದೆ ಎಂದರು.
ಡೆಂಘೀ, ಮಲೇರಿಯಾ ಸೇರಿದಂತೆ ವಿವಿಧ ರೀತಿಯ ಜ್ವರಗಳು ಸೊಳ್ಳೆ ಕಡಿತದಿಂದ ಬರುತ್ತವೆ. ಆದ್ದರಿಂದ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಸೊಳ್ಳೆಗಳು ಇರದಂತೆ ನೋಡಿಕೊಳ್ಳಬೇಕು. ನೀರು ಸಂಗ್ರಹಿಸುವ ಪಾತ್ರೆ, ಡ್ರಮ್, ಕೊಳ, ಸಿಂಟೆಕ್ಸ್, ಕೊಡಪಾನಗಳನ್ನು ಸದಾ ಬಾಯಿ ಮುಚ್ಚಿಡಬೇಕು. ಅಲ್ಲದೆ ಕನಿಷ್ಟ 15 ದಿನಗಳಿಗೊಮ್ಮೆಯಾದರೂ ಸೋಪ್, ಬ್ರಶ್‌ನಿಂದ
ತೊಳೆಯಬೇಕು. ಹೂವಿನ ಕುಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ವಿಧಾನಗಳಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬಹುದು. ಜ್ವರ ಬಂದರೆ ಕೂಡಲೆ ವೈದ್ಯರಲ್ಲಿ ತಪಾಸಣೆ, ಅಗತ್ಯವಿದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಬೇಕು. ನಿರ್ಲಕ್ಷé ಮಾಡಬಾರದು ಎಂದರು.
ಆರೋಗ್ಯ ಸಹಾಯಕ ವಿಜಯ ವಿಠ್ಠಲ ಮಾತನಾಡಿ, ಸೊಳ್ಳೆ ಕಚ್ಚದಂತೆ ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು. ಮಲಗುವಾಗ ಸೊಳ್ಳೆಪರದೆ ಬಳಸಬೇಕು ಎಂದರು.
ಮುಖ್ಯ ಶಿಕ್ಷಕ ಕರಿಯಪ್ಪ ಮಾತನಾಡಿ, ವೈದ್ಯರ ಸಲಹೆಗಳನ್ನು ಮಕ್ಕಳು ಪೋಷಕರಿಗೂ ತಿಳಿಸಿ ಮನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವೀಂದ್ರನಾಥ್, ಗ್ರಾಪಂ ಉಪಾಧ್ಯಕ್ಷೆ ರಿಯಾಜ್ ಉನ್ನಿಸಾ, ಸದಸ್ಯ ಹಳದಪ್ಪ, ಪಿಡಿಒ ರೇಣುಕಾಬಾಯಿ, ಸಿಸ್ಟರ್ ಕೋಕಿಲಾವಾಣಿ, ಭಾರತ್ ನಿರ್ಮಾಣ್ ಸಂಸ್ಥೆಯ ಎನ್.ಶಿವಕುಮಾರ್ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.