Advertisement
ಈ ಸಂದರ್ಭದಲ್ಲಿ ನಾಸಾ ಗಗನಯಾತ್ರಿ ಫ್ರಾಂಕ್ ಕಲ್ಬರ್ಟ್‌ಸನ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್) ದಿಂದ ಈ ಘಟನೆಯನ್ನು ಕಣ್ಣಾರೆ ಕಂಡಿದ್ದರು. ಘಟನೆ ಅನಂತರದ ಸ್ಥಿತಿಯನ್ನು ಬಣ್ಣಿಸಿದ್ದ ಅವರು, “ವಿಶ್ವ ವ್ಯಾಪಾರ ಕೇಂದ್ರದ ಒಂದು ಕಾಲಂನಿಂದ ಹೊಗೆಯು ವಿಚಿತ್ರ ಹೂವಿನ ರೀತಿ ಹೊರಬರುತ್ತಿದ್ದು, ಅದು ನಗರದ ದಕ್ಷಿಣ ದಿಕ್ಕಿಗೆ ಹರಿಯುತ್ತಿದೆ ಎಂದಿದ್ದರು’. ಅಷ್ಟೇ ಅಲ್ಲ,”ನನ್ನ ದೇಶದ ಅದ್ಭುತ ಜಾಗದ ಮೇಲೆ ಆಗಿರುವ ಗಾಯದಿಂದ ಹೊಗೆ ಏಳುತ್ತಿರುವುದನ್ನು ನೋಡುವುದು ಭಯಾನಕವೆನಿಸುತ್ತಿದೆ’ “ಭೂಮಿಯ ಮೇಲಿರುವ ಜೀವನವನ್ನು ಸುಧಾರಿಸುವ ಸಲುವಾಗಿ ಮೀಸಲಾಗಿರುವ ಈ ಬಾಹ್ಯಾಕಾಶ ನೌಕೆಯಲ್ಲಿ ಇದ್ದುಕೊಂಡು ಮತ್ತು ಉದ್ದೇಶಪೂರ್ವಕ ಭಯಾನಕ ಕೃತ್ಯಗಳಿಂದ ಜೀವನವು ನಾಶವಾಗುವುದನ್ನು ನೋಡುವುದು ಮನಸ್ಸಿಗೆ ಕಷ್ಟವೆನಿಸುತ್ತಿದೆ’ ಎಂದು ಬರೆದುಕೊಂಡಿದ್ದರು.
Related Articles
Advertisement
ಅಂದು ಫ್ಲೈಟ್ ಸರ್ಜನ್ ಜತೆಗೂ ಕಲ್ಬರ್ಟ್‌ಸನ್ ಘಟನೆ ಬಗ್ಗೆ ಮಾತನಾಡಿದ್ದರು. ಅವರಿಂದ ಘಟನೆಯ ವಿವರಣೆ ಪಡೆದ ಬಳಿಕ ನಾನು ದಿಗ್ಬ್ರಮೆಗೊಂಡೆ, ಅನಂತರ ಗಾಬರಿಗೊಂಡೆ. ಇದು ನಿಜಕ್ಕೂ ಸಂಭಾಷಣೆಯಲ್ಲ. ನಾನು ಇನ್ನೂ ನನ್ನ ಟಾಮ್ ಕ್ಲಾನ್ಸಿ ಟೇಪ್‌ಗಳಲ್ಲಿ ಒಂದನ್ನು ಕೇಳುತ್ತಿದ್ದೇನೆ ಎಂಬುದು ನನ್ನ ಮೊದಲ ಆಲೋಚನೆಯಾಗಿತ್ತು ಎಂದು ಕಲ್ಬರ್ಟ್‌ಸನ್ ಹೇಳಿಕೊಂಡಿದ್ದರು. ನಮ್ಮ ದೇಶದಲ್ಲಿ ಈ ಪ್ರಮಾಣದ ದಾಳಿ ಮಾಡುವುದು ಸಾಧ್ಯವಿರಲಿಲ್ಲ. ಜತೆಗೆ ಮತ್ತಷ್ಟು ವಿನಾಶದ ಸುದ್ದಿ ಬರುವ ಮೊದಲೇ ನನಗೆ ಎಲ್ಲವನ್ನೂ ಊಹಿಸಲೂ ಸಾಧ್ಯವಾಗಲಿಲ್ಲ ಎಂದಿದ್ದರು.
ಅಷ್ಟೇ ಅಲ್ಲ, ಅಂದಿನ ಘಟನೆ ಬಗ್ಗೆ ತಮ್ಮ ಜತೆಗೆ ಇದ್ದ ಇಬ್ಬರು ರಷ್ಯಾದ ಗಗನಯಾತ್ರಿಗಳಾದ ಟೈರಿನ್ ಮತ್ತು ಡೆಝೋರಾವ್‌ಗೂ ವಿವರಿಸಿದ್ದರು. ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್ ಮತ್ತು ಪೆಂಟಗಾನ್ ಮೇಲೆ ಆದ ಉಗ್ರ ಕೃತ್ಯದ ಬಗ್ಗೆ ಹೇಳಿ ಇದರಿಂದ ಆಗುವ ಪರಿಣಾಮಗಳ ಬಗ್ಗೆಯೂ ತಿಳಿಸಿದ್ದರು. ಅವರಿಬ್ಬರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವಿಷಾದ ವ್ಯಕ್ತಪಡಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಐಎಸ್‌ಎಸ್‌ನಲ್ಲಿದ್ದ ಕೆಮರಾವೊಂದರಿಂದ ಇಡೀ ದೃಶ್ಯವನ್ನು ನೋಡುತ್ತಿದ್ದೆ. ಜತೆಗೆ ವೀಡಿಯೋ ಕೆಮರಾವೊಂದರಲ್ಲಿ ಎಲ್ಲವೂ ಸೆರೆಯಾಗುತ್ತಿತ್ತು. “ವಿಶ್ವ ವ್ಯಾಪಾರ ಕೇಂದ್ರದ ಒಂದು ಕಾಲಂನಿಂದ ಹೊಗೆಯು ವಿಚಿತ್ರ ಹೂವಿನ ರೀತಿ ಹೊರಬಂದು ನಗರದ ದಕ್ಷಿಣ ದಿಕ್ಕಿಗೆ ಹರಿಯುತ್ತಿದ್ದ ಹಾಗೆ ದೃಶ್ಯವಿತ್ತು’. ಇದು ಏನೆಂಬುದು ಗೊತ್ತಾಗಿದ್ದು, ತತ್‌ಕ್ಷಣವೇ ಬಂದ ಸುದ್ದಿಯಿಂದ. ಅದಾದ ಅನಂತರವೇ ನ್ಯೂಯಾರ್ಕ್‌ನ ಪ್ರಮುಖ ಕಟ್ಟಡದ ಮೇಲೆ ದಾಳಿಯಾಗಿದೆ, ನಾವು ನೋಡಿದ್ದು ಒಂದು ಕಟ್ಟಡ ಬಿದ್ದಿದ್ದನ್ನು ಎಂಬುದು ಗೊತ್ತಾಯಿತು. ಹಾಗೆಯೇ ನೋಡನೋಡುತ್ತಲೇ ಇನ್ನೊಂದು ಕಟ್ಟಡವೂ ಸಂಪೂರ್ಣವಾಗಿ ಕುಸಿದು ಬಿತ್ತು. ಇಡೀ ದೃಶ್ಯ ಭಯಾನಕವಾಗಿತ್ತು. ಇದಾದ ಅನಂತರ ಪರಿಸ್ಥಿತಿ ಹೇಗಿರುತ್ತದೆ ಎಂಬ ಬಗ್ಗೆ ಊಹೆ ಮಾಡುವುದು ಕಷ್ಟವಾಗಿತ್ತು. ಎರಡರಿಂದ ಮೂರು ನೂರು ಮೈಲು ದೂರದಿಂದ ಈ ಘಟನೆ ನೋಡುವುದು ಮಹತ್ವದ್ದಾಗಿತ್ತು. ಆದರೆ ಘಟನೆ ನಡೆದ ಸ್ಥಳದಲ್ಲಿನ ದುರಂತ ಕ್ಷಣಗಳನ್ನು ನಾನು ಕಲ್ಪನೆ ಮಾಡಲಾರೆ ಎಂದು ಕಲ್ಬರ್ಟ್‌ಸನ್ ಬರೆದುಕೊಂಡಿದ್ದರು.
“ನಮ್ಮ ದೇಶದ ಮೇಲಿನ ದಾಳಿ ಮತ್ತು ಸಾವಿರಾರು ನಾಗರಿಕರು ಹಾಗೂ ಬಹುಶಃ ನನ್ನ ಕೆಲವು ಸ್ನೇಹಿತರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ನನಗೆ ತೀರಾ ಭಾವನಾತ್ಮಕ ಸಂಗತಿಯಾಗಿತ್ತು. ಹಾಗೆಯೇ ಈ ಸಂದರ್ಭದಲ್ಲಿ ನಾನೊಬ್ಬನೇ ಏಕಾಂಗಿಯಾಗಿದ್ದೇನೆ ಎಂಬುದೂ ಇನ್ನೂ ಭಾವನಾತ್ಮಕ ವಿಚಾರವಾಗಿತ್ತು’ ಎಂದು ಅವರು ವಿವರಿಸಿದ್ದರು.
9/11 ಪ್ರಮುಖ ದಾಳಿಕೋರರು :
ಒಸಾಮ ಬಿನ್ ಲಾಡೆನ್:
ಇಡೀ ಘಟನೆಯ ಸೂತ್ರದಾರ. ಅಲ್‌ಕಾಯಿದಾ ಸ್ಥಾಪಕ. ಕಾಲಿದ್ ಶೇಕ್ ಮೊಹಮ್ಮದ್ ಜತೆ ಸೇರಿ ಅಮೆರಿಕದ ಮೇಲೆ ವಿಮಾನಗಳ ಮೂಲಕ ದಾಳಿ ಮಾಡುವ ಸಂಚು ರೂಪಿಸಿದ. 2001ರಲ್ಲಿನ ವಿಶ್ವ ವ್ಯಾಪಾರ ಕೇಂದ್ರಗಳ ಮೇಲಿನ ದಾಳಿಗೆ 10 ವರ್ಷಗಳಾದ ಹೊತ್ತಿನಲ್ಲೇ ಪಾಕಿಸ್ಥಾನದಲ್ಲಿ ಸಿಐಎ ಈತನನ್ನು ಕೊಂದು ಹಾಕಿತು.
ಖಾಲಿದ್ ಶೇಕ್ ಮೊಹಮ್ಮದ್ :
ಮೂಲತಃ ಪಾಕಿಸ್ಥಾನದ ಈತ ಅಮೆರಿಕಕ್ಕೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿಯಲು ಹೋಗಿದ್ದ. ಅಲ್ಲೇ ಧಾರ್ಮಿಕ ಮತಾಂಧತೆ ಬೆಳೆಸಿಕೊಂಡಿದ್ದ ಈತ 1990ರಲ್ಲೇ ಏಷ್ಯಾದಲ್ಲಿ 12 ವಿಮಾನಗಳನ್ನು ಅಪಹರಿಸಿ ದಾಳಿ ನಡೆಸುವ ಸಂಚು ರೂಪಿಸಿದ್ದ. ಇವು ವಿಫಲವಾಗಿದ್ದವು. ಕಡೆಗೆ ಒಸಾಮಾ ಬಿನ್ ಲಾಡೆನ್ ಜತೆಗೂಡಿ ಅಮೆರಿಕದ ಮೇಲಿನ ದಾಳಿಗೆ ಸಂಚು ರೂಪಿಸಿದ. ಸದ್ಯ ಅಮೆರಿಕದ ಜೈಲಿನಲ್ಲಿದ್ದಾನೆ.
ಮೊಹಮ್ಮದ್ ಆತೀಫ್ :
ಈತ ಅಲ್‌ಕಾಯಿದಾದ ಮಿಲಿಟರಿ ಕಮಾಂಡರ್. ಈತನ ಮೂಲಕವೇ ಖಾಲಿದ್ ಶೇಕ್ ಮೊಹಮ್ಮದ್ ಲಾಡೆನ್‌ನನ್ನು ಭೇಟಿ ಮಾಡಿದ್ದು. ಲಾಡೆನ್, ಖಾಲಿದ್, ಆತೀಫ್ ಸೇರಿಯೇ ಅಮೆರಿಕದ ಮೇಲೆ ದಾಳಿಗೆ ಸಂಚು ರೂಪಿಸಿದ್ದರು. 1999ರಲ್ಲೇ ಯೋಜನೆ ಸಿದ್ಧವಾಗಿತ್ತು. 2001ರ ನವೆಂಬರ್‌ನಲ್ಲಿ ಅಮೆರಿಕ ಅಫ್ಘಾನಿಸ್ಥಾನದಲ್ಲಿ ಅಲ್‌ಕಾಯಿದಾ ಉಗ್ರರ ಮೇಲೆ ದಾಳಿ ಶುರು ಮಾಡಿದಾಗ ಈತ ಹತನಾದ.
ಮೊಹಮ್ಮದ್ ಅಟ್ಟಾ :
ವಿಶ್ವ ವ್ಯಾಪಾರ ಕೇಂದ್ರದ ಮೇಲೆ ವಿಮಾನ ನುಗ್ಗಿಸಿದ ಮೊದಲ ದಾಳಿಕೋರ. ಈಜಿಪ್ಟ್ ನಿವಾಸಿ. ಮೊದಲಿಗೆ ದಾಳಿಕೋರರಲ್ಲಿ ಈತನ ಹೆಸರೇ ಇರಲಿಲ್ಲ. ಆದರೆ ಲಾಡೆನ್ ಈತನಿಗೇ ನಾಯಕತ್ವ ಕೊಟ್ಟು ದಾಳಿ ಮಾಡಲು ಆದೇಶಿಸಿದ್ದ.
ಮಾರ್ವಲ್ ಅಲ್ ಶೇಹಿ :
ವಿಶ್ವ ವ್ಯಾಪಾರ ಕೇಂದ್ರದ ಮೇಲೆ ವಿಮಾನ ನುಗ್ಗಿಸಿದ ಎರಡನೇ ದಾಳಿಕೋರ. ಈತ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಈತ ಜರ್ಮನಿಗೆ ತೆರಳಿ, ಅಲ್ಲಿ ಕೆಲವು ದಾಳಿಕೋರರ ಪರಿಚಯ ಮಾಡಿಕೊಂಡಿದ್ದ.
ಝೈದ್ ಜರ್ಹಾ :
ಈತ ಅಮೆರಿಕದ ಕ್ಯಾಪಿಟೋಲ್ ಮೇಲೆ ದಾಳಿ ಮಾಡುವ ಸಲುವಾಗಿ ವಿಮಾನ ತೆಗೆದುಕೊಂಡು ಹೋಗಿದ್ದ. ಆದರೆ, ಅಲ್ಲಿದ್ದ ಪ್ರಯಾಣಿಕರು ಇದಕ್ಕೆ ಅಡ್ಡಿಪಡಿಸಿದ್ದರು. ಕಡೆಗೆ ಪೆನ್ಸುಲ್ವೇನಿಯಾದಲ್ಲಿ ವಿಮಾನ ಬಿದ್ದಿತ್ತು. ಈತ ಮೂಲತಃ ಲೆಬೆನಾನ್‌ನವನು.
ಹನಿ ಹಂಜೂರ್:
ಈತ ಪೆಂಟಗಾನ್ ಮೇಲೆ ದಾಳಿ ನಡೆಸಿದ ವಿಮಾನದ ಪೈಲಟ್. ಈತನೂ ಸೌದಿ ಅರೆಬಿಯಾದವನು. 1991ರಲ್ಲೇ ಅಮೆರಿಕಕ್ಕೆ ಓದುವ ಸಲುವಾಗಿ ತೆರಳಿದ್ದ. 1990ರಲ್ಲೇ ವಾಣಿಜ್ಯ ವಿಮಾನದ ಪೈಲಟ್ ಆಗಲು ಹೋಗಿ ವೈಫಲ್ಯ ಹೊಂದಿದ್ದ.