Advertisement
ನೀವು ನಗ್ತೀರಾ? ಹೇಗೆ ನಗ್ತೀರಾ? ಒಬ್ಬರೇ ನಗ್ತೀರಾ ಇಲ್ಲಾ ಗುಂಪಿನಲ್ಲಿ ಗೋವಿಂದ ಮಾಡ್ಕೊಂಡು ನಗ್ತೀರಾ? ನಗೋವಾಗ ಢಂ ಢಂ ಅಂತ ಸದ್ದು ಮಾಡ್ತೀರಾ? ಇಲ್ಲಾ ಒಳಗೊಳಗೆ ನಗ್ತೀರಾ? ಎಷ್ಟೇ ಬೇಡ ಅಂದರೂ ಫನ್ನಿ ಇನ್ಸಿಡೆಂಟ್ ಅನ್ನು ನೆನೆಸಿಕೊಂಡಾಗ ನಗು ಬಂದೇ ಬರುತ್ತೆ. ಆಗ ಎಲ್ಲರೂ ಹಾಯಾಗಿ, ಮನಃಪೂರ್ವಕವಾಗಿ, ಹೊಟ್ಟೆ ತುಂಬಾ ನಗ್ತೀವಿ. ಕೆಲವರ ಮುಗುಳುನಗೆಗೆ ಬೇಗನೆ ಬ್ರೇಕ್ ಬೀಳುತ್ತೆ.
Related Articles
Advertisement
ಈ ನಗುವನ್ನೇ ಮುಂದಿಟ್ಟುಕೊಂಡು ಟಾಸ್ಕ್ಗಳನ್ನೂ ಆಯೋಜಿಸಬಹುದು. ನೀವು ನಿತ್ಯ ಹೋಗುವ ಬಸ್ಸಿನಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಹುದು. ಸಹಪ್ರಯಾಣಿಕರೊಬ್ಬರಿಗೆ ಇವತ್ತು ನೀವು ಮೊದಲು ಸ್ಮೈಲ್ ಕೊಟ್ರೆ, ನಾಳೆ ಅವರು ಮೊದಲು ಸ್ಮೈಲ್ ಕೊಡ್ಬೇಕು. ಒಂದಿನ ನೀವು, ಮತ್ತೂಂದು ದಿನ ಅವರು. ದೆಹಲಿಯಲ್ಲಿದ್ದಂತೆ ಸಮ- ಬೆಸ ವ್ಯವಸ್ಥೆ. ಅಲ್ಲಿನ ವಾತಾವರಣದಂತೆ, ನಮ್ಮ ವಾತಾವರಣದಲ್ಲಿನ ನಗುವಿಗೇನೂ ದಕ್ಕೆ ಬಂದಿಲ್ಲ.
ಹೀಗೆ ನಿತ್ಯವೂ ನಗುವಿನ ವಿನಿಮಯವಾದರೆ, ನಿಮ್ಮಿಬ್ಬರ ನಡುವೆ ಸ್ನೇಹದ ಸೇತುವೆಯೊಂದು ನಿರ್ಮಾಣವಾಗುತ್ತದೆ. “ಅಪರಿಚಿತ’ ಪದದ ಮೊದಲ ಅಕ್ಷರ “ಅ’ ಅಳಿಸಿಹೋಗಿ, ಬಾಂಧವ್ಯ ಚಿಗುರುತ್ತದೆ. ಇನ್ನು ಈ ನಗು ಅನೇಕ ಸಲ ಆರ್ಟಿಫಿಶಿಯಲ್ಲು ಅಂತನ್ನಿಸಿಕೊಳ್ಳುವುದೂ ಇದೆ. ವಿಮಾನದಲ್ಲಿ ಗಗನಸಖೀ ನಗುತ್ತಾಳೆ ನೋಡಿ, ಹಾಗೆ. ಆಕೆಗೆ ನಗು ಎನ್ನುವುದು ಕರ್ತವ್ಯದ ಒಂದು ಭಾಗ.
ಅವಳ ಒಂದೊಂದು ನಗುವೂ ಒಳಗೆಷ್ಟೇ ನೋವಿರಲಿ, ಸಂಕಟವಿರಲಿ, ಇಷ್ಟವಿರಲಿ- ಇಲ್ಲದಿರಲಿ, ನಗುತ್ತಲೇ ಇರಬೇಕು. ಇದು ಯಾವತ್ತೂ ನೈಸರ್ಗಿಕ ನಗು ಅಂತನ್ನಿಸಿಕೊಳ್ಳುವುದೇ ಇಲ್ಲ. ಈಗ ಎಲೆಕ್ಷನ್ ಬೇರೆ ಹತ್ತಿರ ಬರುತ್ತಿದೆ. ನಮ್ಮೆಲ್ಲರ ವೋಟ್ ಅನ್ನು ನಿರೀಕ್ಷಿಸುತ್ತಿರುವ ರಾಜಕಾರಣಿ ನಮ್ಮತ್ತ ಕೈಮುಗಿಯುತ್ತಾ ನಗುತ್ತಾನಲ್ಲ, ಆ ನಗು ಕೂಡ ಆರ್ಟಿಫಿಶಿಯಲ್ಲೇ. ಆತನ ನಗುವಿನಲ್ಲಿ ಸ್ವಾರ್ಥ ಮಿಸುಕಾಡುತ್ತಿರುತ್ತದೆ.
ಸದಾಕಾಲ ಮಂದಹಾಸ ಬೀರುವವರನ್ನು ನೋಡಿದಾಗ ನಾವು ಕೂಡ ಅವರ ಹಾಗೆಯೇ ಇರಬೇಕು ಅಂತ ಅನ್ನಿಸುತ್ತೆ. ಆದ್ರೆ ಹುಟ್ಟುಬುದ್ಧಿ ಬೆಟ್ಟ ಹತ್ತಿದರೂ ಹೋಗದೆಂಬಂತೆ ನಾವು ಮೂತಿ ಸಿಂಡರಿಸಿಕೊಳ್ಳುವುದನ್ನು ಎಂದೂ ನಿಲ್ಲಿಸಲ್ಲ. ಐದು ಸೆಕೆಂಡ್ ಸ್ಮೈಲ್ ಕೊಡೋದ್ರಿಂದ ಒಂದು ಫೋಟೋ ಚೆನ್ನಾಗಿ ಬರೋದಾದ್ರೆ, ಲೈಫ್ ಪೂರ್ತಿ ನಗ್ತಾ ಇದ್ರೆ ಜೀವನ ಎಷ್ಟು ಸುಂದರವಾಗಿರಬಹುದು ಅಲ್ವಾ? ಇದನ್ನು ಕೇಳಿದಾಗ ನನಗೂ ನಗೋಣ ಅಂತ ಅನ್ಸುತ್ತೆ. ನನ್ ಜೊತೆ ನೀವೂ ನಗ್ತೀರಿ ತಾನೆ?
* ಸೋನಿಕಾ ಆರ್. ನಾವೇಲ್‌ಕಾರ್