Advertisement

ಬೆಳಗಾವಿ:  ಹೈಟೆಕ್‌ ಸಿಟಿಗೆ ಒಗ್ಗಿಕೊಂಡ ಜವಾರಿ ಹಳ್ಳಿಗಳು

01:39 PM Sep 02, 2021 | Team Udayavani |

ವರದಿ: ಭೈರೋಬಾ ಕಾಂಬಳೆ

Advertisement

ಬೆಳಗಾವಿ: ಕುಂದಾನಗರಿಯ ವ್ಯಾಪ್ತಿಗೆ ಒಳಪಡುವ ಈ ವಾರ್ಡ್‌ಗಳು ಪಕ್ಕಾ ಹಳ್ಳಿಗಾಡಿನ ಜವಾರಿ ಪ್ರದೇಶಗಳು ಒಂದೆಡೆಯಾದರೆ, ಇನ್ನೊಂದೆಡೆ ಬೆಳೆಯುತ್ತಿರುವ ಮಹಾನಗರದ ಅಪಾರ್ಟಮೆಂಟ್‌ ಸಂಸ್ಕೃತಿಯನ್ನು ಹೊಂದಿವೆ.

ಕೃಷಿ ಚಟುವಟಿಕೆಗಳಿಂದ ಕೂಡಿರುವ ಈ ಪ್ರದೇಶಗಳಿಗೆ ಇನ್ನೂ ನಗರದ ಜನಜೀವನ ಸುತಾರಾಂ ಒಪ್ಪುತ್ತಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯ ಈ ವಾರ್ಡುಗಳು ಉತ್ತರದ ತುದಿಗೆ ಕೆಲವೊಂದಿದ್ದು, ದಕ್ಷಿಣದ ತುದಿವರೆಗೆ ವ್ಯಾಪಿಸಿಕೊಂಡಿವೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 41 ರಿಂದ 58 ವಾರ್ಡುಗಳ ಒಟ್ಟಾರೆ ಚಿತ್ರಣದಲ್ಲಿ ಕೆಲವು ಹಳ್ಳಿಗಳು ಸೇರ್ಪಡೆಯಾದರೆ ಇನ್ನೂ ಕೆಲ ವಾರ್ಡುಗಳಲ್ಲಿ ನಗರ ಜನಜೀವನ ಹಾಸುಹೊಕ್ಕಿದೆ. ಇಲ್ಲಿರುವ ಸಮಸ್ಯೆಗಳು, ಸವಾಲುಗಳು ಈ ವಾರ್ಡುಗಳನ್ನು ಪ್ರತಿ ಚುನಾವಣೆಯಲ್ಲಿ ಕಾಡುತ್ತಿರು ವುದನ್ನು ಅಲ್ಲಗಳೆಯುವಂತಿಲ್ಲ.

ಉತ್ತರ ಕ್ಷೇತ್ರದಲ್ಲಿಯ ಹಳ್ಳಿಗಳನ್ನು ಸುತ್ತವರಿದಿರುವ ಈ ವಾರ್ಡುಗಳು ಪಾಲಿಕೆ ವ್ಯಾಪ್ತಿಯಲ್ಲಿವೆ. ಹಳ್ಳಿಗಾಡಿನ ಸಂಪೂರ್ಣ ಚಿತ್ರಣ ಇಲ್ಲಿದೆ. ನಗರವೆಂಬ ಹಳ್ಳಿಗಳಲ್ಲಿ ಹೆ„ಟೆಕ್‌ ಸ್ಪರ್ಶವಿಲ್ಲದೇ ತನ್ನಷ್ಟಕ್ಕೆ ಈ ಹಳ್ಳಿಗಳು ಕೃಷಿ ಜೀವನ ನಡೆಸುತ್ತಿವೆ. ರೈತರು, ಕಾರ್ಮಿಕರು ಹೆಚ್ಚಿರುವ ಈ ಪ್ರದೇಶಗಳಲ್ಲಿ ಇನ್ನೂ ಅಭಿವೃದ್ಧಿ ಮರಿಚೀಕೆ ಆಗಿದೆ. ಕಣಬರ್ಗಿ, ಮುತ್ತ್ಯಾನಟ್ಟಿ, ಅಲಾರವಾಡ, ಬಸವನ ಕುಡಚಿ ಸೇರಿದಂತೆ ಕೆಲವು ಹಳ್ಳಿಗಳು ಈ ವಾರ್ಡ್‌ ವ್ಯಾಪ್ತಿಗೆ ಸೇರುತ್ತವೆ. ದಕ್ಷಿಣ ಭಾಗದ ಕೆಲವೊಂದು ವಾರ್ಡುಗಳಲ್ಲಿ ಸುಂದರ ರಸ್ತೆಗಳು, ಅಚ್ಚುಕಟ್ಟಾದ ಚರಂಡಿ ವ್ಯವಸ್ಥಿತ ಸುಂದರ ಉದ್ಯಾನವನಗಳು ತಲೆ ಎತ್ತಿವೆ. ಸಿರಿವಂತರು ವಾಸಿಸುವ ಪ್ರದೇಶಗಳಲ್ಲಿ ಬಹುತೇಕ ಎಲ್ಲ ಸೌಕರ್ಯಗಳು ಇವೆ. ಕೆಲವು ವರ್ಷಗಳ ಹಿಂದೆಯೇ ಮಾಸ್ಟರ್‌ ಪ್ಲ್ಯಾನ್‌ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಈಗ ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಇನ್ನೂ ಅರ್ಧಕ್ಕಿಂತ ಹೆಚ್ಚು ಕಾಮಗಾರಿಗಳು ಪ್ರಗತಿಯಲ್ಲಿವೆ. ದಕ್ಷಿಣ ಮತಕ್ಷೇತ್ರದ ವಾರ್ಡುಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಭರದಿಂದ ಸಾಗಿವೆ.

ಬೀದಿ ದೀಪಗಳು, ರಸ್ತೆಗಳ ಇಕ್ಕೆಲಗಳಲ್ಲಿ ಫುಟ್‌ಪಾತ್‌ ನಿರ್ಮಾಣ, ಸೈಕಲ್‌ ಟ್ರ್ಯಾಕ್‌ ಹೀಗೆ ಹಲವು ಕಾಮಗಾರಿಗಳು ನಡೆದಿವೆ. ಈ ಭಾಗ ಹೈಟೆಕ್‌ ಆಗಿದ್ದರೂ ಇನ್ನೂ ಕೆಲವೊಂದಿಷ್ಟು ಪ್ರದೇಶಗಳು ನಿರ್ಲಕ್ಷ್ಯಕ್ಕೂ ಒಳಗಾಗಿವೆ. ವ್ಯಾಕ್ಸಿನ್‌ ಡಿಪೋ ಸುತ್ತಲೂ ಬೆಳೆದಿರುವ ಅಪಾರ್ಟಮೆಂಟ್‌ಗಳು, ದೊಡ್ಡ ಬಡಾವಣೆಗಳು ನಗರದ ಚಿತ್ರಣವನ್ನೇ ಬದಲಿಸಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ ಗಮನಹರಿಸಬೇಕಾದ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next