ಹುಬ್ಬಳ್ಳಿ: ಒಂದೆಡೆ ಆಮೆಗತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆ ರಸ್ತೆ ಕಾಮಗಾರಿಗಳು, ಇನ್ನೊಂದೆಡೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಯ ಎರಡು ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳ ನಿಲುಗಡೆ. ಸಂಚಾರ ವ್ಯವಸ್ಥೆಗೆ ಒಂದಿಷ್ಟು ಶಿಸ್ತು ಮೂಡಿಸಿದ್ದ ಟೋಯಿಂಗ್ ವ್ಯವಸ್ಥೆ ಸ್ಥಗಿತಗೊಂಡಿರುವುದು ಪ್ರಮುಖ ಮಾರುಕಟ್ಟೆಗಳ ಕಡೆ ಹೋಗುವುದೇ ಬೇಡ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ವಾಣಿಜ್ಯ ನಗರಿಯ ಪ್ರಮುಖ ಸಮಸ್ಯೆಗಳ ಪೈಕಿ ಪಾರ್ಕಿಂಗ್, ಹೆಚ್ಚುತ್ತಿರುವ ವಾಹನಗಳಿಗೆ ಪೂರಕವಾಗಿ ರಸ್ತೆಗಳ ಕೊರತೆ ಸಾಕಷ್ಟಿದೆ. ವರ್ಷದಿಂದ ವರ್ಷಕ್ಕೆ ಮಾರುಕಟ್ಟೆ ಬೆಳೆಯುತ್ತಿದ್ದರೂ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳು ದೊರೆಯುತ್ತಿಲ್ಲ. ಇನ್ನೂ ತಾತ್ಕಾಲಿಕ ಮಾರ್ಗೋಪಾಯಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ ಜ್ವಲಂತ ಸಮಸ್ಯೆಯಾಗಿ ಪರಿಣಿಮಿಸಿದೆ. ಸ್ಮಾರ್ಟ್‌ಸಿಟಿಯಿಂದ ನಡೆಯುತ್ತಿರುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದು ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ. ಅಲ್ಲಲ್ಲಿ ರಸ್ತೆಗಳನ್ನು ಅಗೆದಿದ್ದು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ದಟ್ಟಣೆ ಸಂದರ್ಭದಲ್ಲಿಯೇ ಭಾರೀ ವಾಹನಗಳ ಲೋಡಿಂಗ್, ಅನ್‌ಲೋಡಿಂಗ್ ನಡೆಯುತ್ತಿರುವುದರಿಂದ ಮಾರುಕಟ್ಟೆ ರಸ್ತೆಗಳು ಕಾಲ್ನಡಿಗೆ ತಪ್ಪಿದರೆ ದ್ವಿಚಕ್ರ ವಾಹನ ಸೂಕ್ತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಮೆಗತಿ ರಸ್ತೆ ಕಾಮಗಾರಿ: ಸ್ಮಾರ್ಟ್‌ಸಿಟಿ ಕಂಪನಿ ಮೂಲಕ ದಾಜಿಬಾನ್ ಪೇಟೆ, ಕೊಪ್ಪಿಕರ್ ರಸ್ತೆ, ಕೋಯಿನ್ ರಸ್ತೆ, ಜೆಸಿ ನಗರ, ನೆಹರು ಮೈದಾನ ಸುತ್ತಮುತ್ತ, ಪದ್ಮಾ ಟಾಕೀಸ್ ರಸ್ತೆ ಸೇರಿದಂತೆ ಈ ಭಾಗದ ಒಳರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಕಾಂಕ್ರೀಟೀಕರಣ ನಡೆಯುತ್ತಿದೆ. ಆದರೆ ಏಕಕಾಲಕ್ಕೆ ಎಲ್ಲಾ ರಸ್ತೆಗಳಲ್ಲಿ ಕಾಮಗಾರಿ ಕೈಗೊಂಡಿರುವುದು ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಉಲ್ಬಣಿಸಿದೆ. ಹಗಲು ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಕಾಮಗಾರಿ ನಿಗದಿತ ವೇಗದಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮಳೆ, ಗಟಾರು ನೀರು ರಸ್ತೆ ಮೇಲೆ ಹರಿದು ಓಡಾಡದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದರಿಂದ ನಿತ್ಯವೂ ಜನರು ಶಾಪ ಹಾಕುವಂತಾಗಿದೆ.
ಟೋಯಿಂಗ್ ವಾಹನ ಬರಲ್ಲ; ವಾಹನ ಎತ್ತಲ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳ ನಿಲ್ಲಿಸಿದರೆ ಈ ಹಿಂದೆ ಪೊಲೀಸರು ಟೋಯಿಂಗ್ ವಾಹನಗಳ ಮೂಲಕ ದ್ವಿಚಕ್ರಗಳನ್ನು ಠಾಣೆಗೆ ತೆಗೆದುಕೊಂಡು ಹೋಗುತ್ತಿದ್ದರು. ಒಂದು ದ್ವಿಚಕ್ರ ವಾಹನ ಠಾಣೆಗೆ ಹೋದರೆ 1650 ರೂ. ದಂಡ ಬೀಳುತ್ತಿತ್ತು. ಇದರಿಂದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಒಂದಿಷ್ಟು ಶಿಸ್ತು ಮೂಡಿತ್ತು. ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಕಡಿಮೆಯಾಗಿತ್ತು. ಆದರೆ ಕಳೆದ ಜುಲೈ ತಿಂಗಳಿನಿಂದ ಈ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನ ಸವಾರರಲ್ಲಿ ನೋ ಪಾರ್ಕಿಂಗ್ ಭಯ ಇಲ್ಲದಂತಾಗಿದೆ.
ಟೋಯಿಂಗ್ ವಾಹನ ಗುತ್ತಿಗೆ ಮುಗಿದಿರುವ ಕಾರಣ ಈ ವ್ಯವಸ್ಥೆ ಸ್ಥಗಿತಗೊಂಡಿದ್ದು, ಪುನಃ ಟೆಂಡರ್ ಕಾರ್ಯ ನಡೆದಿಲ್ಲ ಎನ್ನಲಾಗುತ್ತಿದೆ. ದುಬಾರಿ ದಂಡ ವಿಧಿಸುವ ಮೊದಲು ಮಹಾನಗರದ ಜನತೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆಯೇ ಪೊಲೀಸ್ ಇಲಾಖೆ ಅಂಧಾ ದರ್ಬಾರ್ ನಡೆಸುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ಅಂಬೋಣವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಮಗಾರಿಗಳಿಂದ ಓಡಾಡಲು ರಸ್ತೆಗಳೇ ಇಲ್ಲದ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳ ದೂರದ ಮಾತು. ಹೀಗಾಗಿ ಜನರಿಗೆ ವಿನಾಕಾರಣ ತೊಂದರೆ ಕೊಡಬಾರದು ಎನ್ನುವ ಕಾರಣ ಹು-ಧಾ ಕಮಿಷನರೇಟ್ ಈ ವ್ಯವಸ್ಥೆಗೆ ತಾತ್ಕಾಲಿಕ ತಡೆ ನೀಡಿದೆ ಎನ್ನಲಾಗಿದೆ.
ನಿಂತಿಲ್ಲನೋ ಪಾರ್ಕಿಂಗ್ ದಂಡ
ಟೋಯಿಂಗ್ ವಾಹನ ಇಲ್ಲದಿದ್ದರೂ ಸಂಚಾರ ಠಾಣೆ ಪೊಲೀಸರು ನೋ ಪಾರ್ಕಿಂಗ್ ಸ್ಥಳಗಳ ಬಗ್ಗೆ ನಿಗಾ ವಹಿಸಿದ್ದು, ಮೊಬೈಲ್ ಮೂಲಕ ಫೂಟೋ ತೆಗೆದು ಟಿಎಂಸಿ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ದಂಡದ ಚಲನ್ ರವಾನಿಸುವ ಕೆಲಸ ನಡೆಯುತ್ತಿದೆ. ಪೆಟ್ರೋಲಿಂಗ್‌ನಲ್ಲಿರುವ ಪೊಲೀಸರು ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಅಲ್ಲಲ್ಲಿ ನಿಲ್ಲುವ ಪೊಲೀಸರು ವಾಹನಗಳನ್ನು ನಿಲ್ಲಿಸಿ ಹಳೆಯ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡುತ್ತಿದ್ದಾರೆ. ಅಲ್ಲಲ್ಲಿ ನಿಂತಿರುವ ವಾಹನಗಳ ಮೇಲಿನ ಹಳೇ ಪ್ರಕರಣಗಳ ತಪಾಸಣೆ ಕಾರ್ಯ ಕೈಗೊಂಡಿದ್ದಾರೆ. ಫೂಟೋ ಹಾಗೂ ವಾಹನಗಳ ಗಾಲಿಗೆ ಲಾಕ್ ಮಾಡುವ ಮುನ್ನ ನಿಯಮದ ಪ್ರಕಾರ ಮೈಕ್ ಮೂಲಕ ಸೂಚನೆ ನೀಡುವ ಕೆಲಸ ತಪ್ಪದೇ ಆಗಲಿ ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.