ಬೀದರ: ಗ್ರಾಮ ಪಂಚಾಯತ್ ಎಂದಾಕ್ಷಣ ಹಣ ಲೂಟಿ, ದುರುಪಯೋಗ ಆರೋಪಗಳು ಕೇಳಿ ಬರುವುದೇ ಹೆಚ್ಚು. ಆದರೆ, ತಾಲೂಕಿನ ಅಲಿಯಾಬಾದ್ ಪಂಚಾಯತ್ ಭ್ರಷ್ಟಾಚಾರದ ಕೂಪವಾಗದೇ ವಿದ್ಯಾ ಕೇಂದ್ರವಾಗಿ, ಬಡ ಮಕ್ಕಳಿಗೆ ದಾರಿ ದೀಪವಾಗಿದೆ. ಲಭ್ಯ ಅನುದಾನದಲ್ಲೇ ಸುಸಜ್ಜಿತ ಡಿಜಿಟಲ್ ಜತೆಗೆ ವಿಶೇಷ ಚೇತನ ಸ್ನೇಹಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಈ ಗ್ರಾ.ಪಂ ಮಾದರಿ ಎನಿಸಿಕೊಂಡಿದೆ.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸಾಮಾನ್ಯ. ಆದರೆ, ಪರೀಕ್ಷೆಗಳಿಗೆ ಅಗತ್ಯವಾಗಿ ಬೇಕಾದ ಪುಸ್ತಕಗಳು, ಗ್ರಂಥಾಲಯಗಳ ಲಭ್ಯತೆ ಮಾತ್ರ ಮರೀಚಿಕೆಯಾಗಿರುತ್ತದೆ. ಹೀಗಾಗಿ ಗ್ರಾಮೀಣ ಮಕ್ಕಳ ಜ್ಞಾನ ದಾಹ ತಣಿಸುವ ಉದ್ದೇಶದಿಂದ ಅಲಿಯಾಬಾದ್ ಗ್ರಾ.ಪಂ ಗ್ರಾಮೀಣ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನಸ್ಸು ಮಾಡಿದ್ದರೆ, ನಗರ-ಪಟ್ಟಣದ ಗ್ರಂಥಾಲಯಗಳನ್ನು ಮೀರಿಸುವಂಥ ಕೇಂದ್ರಗಳನ್ನು ತೆರೆಯಬಹುದು ಎಂಬುದನ್ನು ಪಿಡಿಒ ಶರತಕುಮಾರ ಅಭಿಮಾನ್ ಸಾಧಿಸಿ ತೋರಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ “ಓದು ಬೆಳಕು’ ಕಾರ್ಯಕ್ರಮದಡಿ ಹೈಟೆಕ್ ಗ್ರಂಥಾಲಯ ತಲೆ ಎತ್ತಿದೆ. ಪಂಚಾಯಿತಿಯ 15ನೇ ಹಣಕಾಸು ಮತ್ತು ಸ್ಥಳೀಯ ಯೋಜನೆಯಡಿ 4.50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ ಆವರಣದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗಿದ್ದು, ಸುಸಜ್ಜಿತ ಮತ್ತು ವಿಶಿಷ್ಟ ವಿನ್ಯಾಸದ ಕೇಂದ್ರ ಓದುಗ ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ. ಗ್ರಂಥಾಲಯದಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ 4600 ಪುಸ್ತಕಗಳನ್ನು ಇಡಲಾಗಿದೆ.
ಶಾಲಾ ಪಠ್ಯ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗಾಗಿನ ಪುಸ್ತಕಗಳು, ವಿವಿಧ ಸಾಹಿತ್ಯದ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಪುಸ್ತಕಗಳು, ದಿನ ಪತ್ರಿಕೆಗಳು ಲಭ್ಯ ಇವೆ. ಜತೆಗೆ 4 ಕಂಪ್ಯೂಟರ್, 1 ಲ್ಯಾಪ್‌ಟಾಪ್, 2 ಮೊಬೈಲ್, ಕಲಿಕಾ ಸಾಮಗ್ರಿಗಳನ್ನು ಇಡಲಾಗಿದೆ. ಮುಖ್ಯವಾಗಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕ್ಯೂಆರ್ ಕೋಡ್ ಮೂಲಕ ಹತ್ತಾರು ಸಾವಿರ ಪುಸ್ತಕಗಳನ್ನು ಮೊಬೈಲ್‌ನಲ್ಲಿ ಓದುವಂಥ ವ್ಯವಸ್ಥೆ ಮಾಡಿರುವುದು ವಿಶೇಷ. ಇನ್ನೂ ಈ ಗ್ರಂಥಾಲಯವನ್ನು ವಿಶೇಷ ಚೇತನ ಸ್ನೇಹಿಯಾಗಿಸಿರುವುದು ಗಮನ ಸೆಳೆಯುವಂತಿದೆ.
ವಿಶೇಷ ಚೇತನರಿಗಾಗಿ ಬ್ರೈಲ್ ಲಿಪಿಯ ಪುಸ್ತಕಗಳು, ವ್ಹಿಲ್ ಚೇರ್ ಸೇರಿ ವಿಶೇಷ ಉಪಕರಣಗಳನ್ನು ಹಾಕಲಾಗಿದೆ. ಜತೆಗೆ ಡಾಲ್‌ಫಿಯೋಗಳನ್ನು ಸಹ ಇಟ್ಟಿರುವುದು ಅಂಗನವಾಡಿ ಮಕ್ಕಳು, ಚಿಣ್ಣರಿಗೆ ಸೆಳೆಯುವಂತೆ ಮಾಡಿದೆ. ಬೆಳಗ್ಗೆ 8ರಿಂದ 10ರವರೆಗೆ ಸಾರ್ವಜನಿಕರಿಗೆ ಹಾಗೂ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಶಾಲಾ ಮಕ್ಕಳಿಗೆ ಮತ್ತು ಸಂಜೆ ವೇಳೆ ಗ್ರಾಮಸ್ಥರಿಗೆ ಗ್ರಂಥಾಲಯದಲ್ಲಿ ಓದಲು ಅವಕಾಶ ನೀಡಲಾಗಿದ್ದರೆ, ರವಿವಾರ ದಿನವೀಡಿ ಗ್ರಂಥಾಲಯ ಓದಿಗೆ ಮುಕ್ತವಾಗಿರಲಿದೆ.
ಗ್ರಾಮೀಣ ಮಕ್ಕಳಿಗೆ ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಓದಲು ಅನುಕೂಲ ಆಗಬೇಕೆಂಬ ಉದ್ದೇಶದಿಂದ ಅಲಿಯಾಬಾದ್ ಗ್ರಾಪಂನಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದೆ. ಲಭ್ಯ ಅನುದಾನದಲ್ಲೇ ಕೇಂದ್ರದಲ್ಲಿ ಪುಸ್ತಕಗಳು ಮತ್ತು ಅಗತ್ಯ ಸೌಲತ್ತುಗಳನ್ನು ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ಕ್ಯೂಆರ್ ಕೋಡ್ ಮೂಲಕ ಪುಸ್ತಕಗಳು ಓದುವ ಮತ್ತು ವಿಶೇಷ ಚೇತನ ಸ್ನೇಹಿ ಕೇಂದ್ರ ಸ್ಥಾಪನೆಯ ಹೊಸ ಪ್ರಯೋಗ ಜಿಲ್ಲೆಯಲ್ಲಿ ಇದೇ ಮೊದಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.
–ಶರತಕುಮಾರ ಅಭಿಮಾನ್, ಪಿಡಿಒ, ಅಲಿಯಾಬಾದ್
-ಶಶಿಕಾಂತ ಬಂಬುಳಗೆ