Advertisement

ವಿದ್ಯುತ್‌ ಹೊರೆ ಇಳಿಕೆಗೆ “ಸ್ಮಾರ್ಟ್‌’ಐಡಿಯಾ

02:35 PM Aug 18, 2018 | Team Udayavani |

ಬೆಂಗಳೂರು: “ಪೀಕ್‌ ಅವರ್‌’ನಲ್ಲಿ ಉಂಟಾಗುವ ವಿದ್ಯುತ್‌ ಹೊರೆಯನ್ನು ನಿಭಾಯಿಸಲು “ಸ್ಮಾರ್ಟ್‌ ಐಡಿಯಾ’ ಮಾಡಿರುವ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಈ ನಿಗದಿತ ಅವಧಿಯಲ್ಲಿ ಬಳಸುವ ವಿದ್ಯುತ್‌ಗೆ ಹೆಚ್ಚುವರಿ ದರ ವಿಧಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಸುಧಾರಿತ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಉದ್ದೇಶಿಸಿದೆ.

Advertisement

ಇದು ವಿದ್ಯುತ್‌ ಲೋಡ್‌ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದ್ದು, “ಪೀಕ್‌ ಅವರ್‌’ನಲ್ಲಿ (ಹೆಚ್ಚು ಲೋಡ್‌ ಇರುವ ಅವಧಿ) ಬಳಸುವ ವಿದ್ಯುತ್‌ ಬಗ್ಗೆ ಗ್ರಾಹಕರಿಗೆ ಮುನ್ಸೂಚನೆ ನೀಡಲಿದೆ. ನಂತರ ಆ ಅವಧಿಯಲ್ಲಿ ಬಳಸುವ ವಿದ್ಯುತ್‌ ಅನ್ನು ಲೆಕ್ಕಹಾಕಿ, ಹೆಚ್ಚುವರಿ ದರ ವಿಧಿಸಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯೋಗ ನಡೆಯುತ್ತಿದೆ. ಪೀಕ್‌ ಅವರ್‌ನಲ್ಲಿ ವಿದ್ಯುತ್‌ ದರ ಹೆಚ್ಚಾಗುವುದರಿಂದ  ಈ ಅವಧಿಯಲ್ಲಿ ಬಳಕೆಯ ಆಯ್ಕೆ ಗ್ರಾಹಕರಿಗೆ ಬಿಟ್ಟದ್ದು.

ಈ ಮೂಲಕ ಸಾರ್ವಜನಿಕ ಸಹಭಾಗಿತ್ವದಲ್ಲಿ ಯಾವುದೇ ಹೆಚ್ಚುವರಿ ವಿದ್ಯುತ್‌ ಖರೀದಿ ಮತ್ತು ಅದರ ಪೂರೈಕೆಗೆ ತಗಲುವ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುವ ವಿನೂತನ ಪ್ರಯೋಗಕ್ಕೆ ಬೆಸ್ಕಾಂ ಮುಂದಾಗಿದ್ದು, ನಗರ ಮತ್ತು ಗ್ರಾಮಾಂತರಕ್ಕೆ ಹೊಂದಿಕೊಂಡ ಚಂದಾಪುರ ಉಪವಿಭಾಗದಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ. 

ಉದಾಹರಣೆಗೆ ಬೆಂಗಳೂರಿನಲ್ಲಿ “ಪೀಕ್‌ ಅವರ್‌’ನಲ್ಲಿ ವಿದ್ಯುತ್‌ ಬೇಡಿಕೆ 3,700 ಮೆ.ವಾ. ಇರುತ್ತದೆ. ಬೇಸಿಗೆಯಲ್ಲಿ ಅದು ಏಕಾಏಕಿ 4 ಸಾವಿರ ಮೆ.ವಾ. ತಲುಪಬಹುದು. ಆಗ ಹೆಚ್ಚುವರಿ ವಿದ್ಯುತ್‌ ಅನ್ನು ಸರಿದೂಗಿಸಲು ಖರೀದಿ ಮಾಡಬೇಕು. ಅದರ ಪೂರೈಕೆಗೆ ಮೂಲಸೌಕರ್ಯ ವೆಚ್ಚ ಬೇರೆ.

ಆದರೆ ಸ್ಮಾರ್ಟ್‌ ಮೀಟರ್‌ ಮೂಲಕ ಗ್ರಾಹಕರಿಗೆ ಮುನ್ಸೂಚನೆ ನೀಡಿದಾಗ, ಬಳಕೆ ಕಡಿಮೆ ಮಾಡುವ ಸಾಧ್ಯತೆ ಇದೆ. ಎಷ್ಟು ಹೊರೆ ತಗ್ಗಿಸಬಹುದು ಎಂಬುದು ಗ್ರಾಹಕರ ಸಹಭಾಗಿತ್ವವನ್ನು ಅವಲಂಬಿಸಿದೆ. ಅಂದಾಜಿನ ಪ್ರಕಾರ ಶೇ. 25-30ರಷ್ಟು ಹೊರೆ ನೀಗಿಸಬಹುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸುತ್ತಾರೆ. 

Advertisement

ಕೇವಲ ಲೋಡ್‌ ಮ್ಯಾನೇಜ್‌ಮೆಂಟ್‌ ಅಲ್ಲ; ಕುಳಿತಲ್ಲಿಂದಲೇ ವಿದ್ಯುತ್‌ ಕಳ್ಳತನ, ವಿದ್ಯುತ್‌ ಲೆಕ್ಕಪರಿಶೋಧನೆ, ಬಿಲ್‌ ಪಾವತಿ ಮಾಡದ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತ, ಮರುಸಂಪರ್ಕ ಕಲ್ಪಿಸುವುದು, ದರ ಮುನ್ಸೂಚನೆ, ಪ್ರಿಪೇಯ್ಡ, ನೆಟ್‌ ಮೀಟರಿಂಗ್‌ ಸೇರಿದಂತೆ ಏಳರಿಂದ ಎಂಟು ಸೌಲಭ್ಯಗಳನ್ನು ಈ ಸ್ಮಾರ್ಟ್‌ ಮೀಟರ್‌ ಒಳಗೊಂಡಿದೆ.

ಏಕಕಾಲದಲ್ಲಿ ಈ ಎಲ್ಲವನ್ನೂ ನಿರ್ವಹಣೆ ಮಾಡುವ ಸಾಮರ್ಥ್ಯವೂ ಈ ವ್ಯವಸ್ಥೆಗೆ ಇದ್ದು, ಐಐಟಿ ವಾರಣಾಸಿಯ ಬನಾರಸ್‌ ವಿಶ್ವವಿದ್ಯಾಲಯ ಇದನ್ನು ಅಭಿವೃದ್ಧಿಪಡಿಸಿದ್ದು, ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ 2.35 ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಬೆಸ್ಕಾಂನ ಸ್ಮಾರ್ಟ್‌ಗ್ರಿಡ್‌ ಮತ್ತು ವಿದ್ಯುತ್‌ ಚಾಲಿತ ವಾಹನ ಉಪ ಪ್ರಧಾನ ವ್ಯವಸ್ಥಾಪಕ ಶ್ರೀನಾಥ್‌ ತಿಳಿಸಿದರು. 

ವಸತಿ, ವಾಣಿಜ್ಯ ಮತ್ತು ಕೈಗಾರಿಕೆಗಳು ಇರುವ ಚಂದಾಪುರದ 1,200 ವಿದ್ಯುತ್‌ ಸಂಪರ್ಕಗಳಿಗೆ ಮತ್ತು 43 ಟ್ರಾನ್ಸ್‌ಫಾರ್ಮರ್‌ಗಳಿಗೆ ಈ ಸ್ಮಾರ್ಟ್‌ ಮಿಟರ್‌ ಅಳವಡಿಸಲಾಗುತ್ತಿದೆ. ಈ ಪೈಕಿ ಈಗಾಗಲೇ 500 ಮನೆಗಳು ಮತ್ತು 11 ಟ್ರಾನ್ಸ್‌ಫಾರ್ಮರ್‌ಗಳಿಗೆ ಅಳವಡಿಕೆ ಮಾಡಲಾಗಿದೆ. ಸೆಪ್ಟೆಂಬರ್‌ ಅಂತ್ಯಕ್ಕೆ ಇದು ಪ್ರಯೋಗಕ್ಕೆ ಸಿದ್ಧಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು. 

“ಪೀಕ್‌ ಅವರ್‌’ನಲ್ಲಿ ಹೆಚ್ಚುವರಿ ದರ ಎಷ್ಟಿರಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಪ್ರಯೋಗ ಯಶಸ್ವಿಯಾದ ನಂತರ ದರ ನಿಗದಿಪಡಿಸಿ, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದೂ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಕಾರ್ಯವಿಧಾನ ಹೀಗೆ: ಉದ್ದೇಶಿತ ಸ್ಮಾರ್ಟ್‌ ಮೀಟರ್‌ನಿಂದ ಸಂವಹನ ಜಾಲ (ಕಮ್ಯುನಿಕೇಷನ್‌ ನೆಟ್‌ವರ್ಕ್‌)ಕ್ಕೆ ದತ್ತಾಂಶಗಳು ರವಾನೆ ಆಗುತ್ತವೆ. ಅದನ್ನು ವಿಶ್ಲೇಷಣೆ ಮಾಡಿ, ನಿಯಂತ್ರಣ ಕೊಠಡಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಪ್ರತಿಯೊಬ್ಬ ಗ್ರಾಹಕರ ಪ್ರತ್ಯೇಕ ಮಾಹಿತಿ ಲಭ್ಯವಾಗುತ್ತದೆ.

ನಗರದಲ್ಲಿ ಸುಮಾರು 28 ಲಕ್ಷ ಗ್ರಾಹಕರಿದ್ದಾರೆ. ಎಲ್ಲ ಕಡೆ ಏಕಕಾಲದಲ್ಲಿ ಜಾರಿ ಕಷ್ಟ. ಹಾಗಾಗಿ, ಪ್ರಯೋಗ ಯಶಸ್ವಿಯಾದ ನಂತರ ಒಂದು ವಿಭಾಗವನ್ನು ಆಯ್ಕೆ ಮಾಡಿ, ಅಲ್ಲಿ ಜಾರಿಗೊಳಿಸಲಾಗುವುದು. ಆಮೇಲೆ ವಿವಿಧೆಡೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. 

ಈ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಗ್ರಾಹಕರು ಯಾವುದೇ ಹಣ ಪಾವತಿಸಬೇಕಿಲ್ಲ. ಬದಲಿಗೆ ಬೆಸ್ಕಾಂ, ಮೀಟರ್‌ಗಳ ಕಾರ್ಯವೈಖರಿ ಸಮರ್ಪಕವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರ ಗುತ್ತಿಗೆ ಪಡೆದ ಕಂಪೆನಿಗೆ ಹಣ ನೀಡುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು. 

ಮೀಟರ್‌ ಅಳವಡಿಕೆಗೆ ಅಪಸ್ವರ: ಈ ಹಿಂದೆ ನಗರದಲ್ಲಿ ಹಲವು ಬಾರಿಗೆ “ಸ್ಮಾರ್ಟ್‌ ಮೀಟರ್‌’ ಸ್ವರ ಕೇಳಿಬಂದಿದೆ. ಮೂರು ವರ್ಷಗಳ ಹಿಂದೆ ಇಂದಿರಾನಗರದಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸುವುದಾಗಿ ಹೇಳಲಾಗಿತ್ತು. ಆದರೆ, ಗ್ರಾಹಕರಿಂದ ಇದಕ್ಕೆ ವಿರೋಧ ಮತ್ತು ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿತ್ತು. ಈ ಮಧ್ಯೆ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. 

ಸ್ಮಾರ್ಟ್‌ ಮೀಟರ್‌ ಕಡ್ಡಾಯ!: ಕೇಂದ್ರದ “ಉದಯ’ ಯೋಜನೆ ಅಡಿ ಯಾವುದೇ ಗ್ರಾಹಕರು ಮಾಸಿಕ 200 ಮೆ.ವಾ.ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುತ್ತಿದ್ದರೆ, ಅಂತಹ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next