ಉಡುಪಿ: ಶುದ್ಧ ನೀರು ಸಕಲ ಜೀವಿಗಳಿಗೆ ಆಧಾರ ಹಾಗೂ ಅತ್ಯಮೂಲ್ಯ. ಇದನ್ನು ಅರಿತ ಬ್ರಹ್ಮಾವರ ಹಂದಾಡಿಯ ಸಹೋದರರಾದ ಪ್ರದ್ಯುಮ್ನ ಅಡಿಗ ಮತ್ತು ಸಿದ್ಧಾರ್ಥ್ ಅಡಿಗ ಅವರು ಆಧುನಿಕ ಶೌಚಾಲಯ ಗಳಲ್ಲಿ ನೀರು ಅತಿಯಾಗಿ ಪೋಲಾಗದಂತೆ ತಡೆಯಲು ಸ್ಮಾರ್ಟ್ ಫ್ಲಶ್ ರೆಟ್ರೋಫಿಟ್ ಎಂಬ ಮರು ಸುಧಾರಣಾ ಸಾಧಕವನ್ನು ಆವಿಷ್ಕರಿಸಿ ಕೇಂದ್ರ ಸರಕಾರದ ವತಿಯಿಂದ ಹಕ್ಕು ಪತ್ರ(ಪೇಟೆಂಟ್) ಪಡೆದಿದ್ದಾರೆ. ರಾಜ್ಯದ ಅತೀ ಕಿರಿಯ ಪೇಟೆಂಟ್ ಸಾಧಕರೆಂಬ ಹೆಗ್ಗಳಿಕೆಗೆ ಈ ಸಹೋದರರು ಪಾತ್ರರಾಗಿದ್ದಾರೆ.
ಭಾರತದಲ್ಲಿ ಹೆಚ್ಚಾಗಿ ಈಗಾಗಲೇ ಬಳಕೆಯಲ್ಲಿರುವ ಏಕ / ಸಿಂಗಲ್ ಫ್ಲಶ್ ವ್ಯವಸ್ಥೆಯನ್ನು (ಅಂದರೆ ದ್ರವ ಹಾಗು ಘನ ತ್ಯಾಜ್ಯಗಳಿಗೆ ಒಂದೇ ಪ್ರಮಾಣದ ನೀರನ್ನು ಬಳಸಿ ಸ್ವಚ್ಛಗೊಳಿಸುವ ವ್ಯವಸ್ಥೆಯನ್ನು) ಅತೀ ಸುಲಭವಾಗಿ, ಕಡಿಮೆ ಖರ್ಚಿನಲ್ಲಿ, ಯಾವುದೇ ದೊಡ್ಡ ಬದಲಾವಣೆ ಇಲ್ಲದೆ, ದ್ವಂದ್ವ/ಡ್ಯುಯಲ್ ಫ್ಲಶ್ ವ್ಯವಸ್ಥೆಗೆ (ಅಂದರೆ ದ್ರವ ಹಾಗೂ ಘನ ತ್ಯಾಜ್ಯಗಳಿಗೆ ಪ್ರತ್ಯೇಕ ಪ್ರಮಾಣದ ನೀರನ್ನು ಒದಗಿಸುವ ವ್ಯವಸ್ಥೆಗೆ) ಬದಲಾಯಿಸುವ, ಉನ್ನತೀಕರಿಸುವ ಸಾಧನವೇ ಈ ಸ್ಮಾರ್ಟ್ ಫ್ಲಶ್ ರೆಟ್ರೋಫಿಟ್ ಎಂಬ ಆವಿಷ್ಕಾರ. ಈ ಸಾಧನದ ಅಳವಡಿಕೆಯಿಂದ ಆಧುನಿಕ ಶೌಚಾಲಯಗಳಲ್ಲಿ ಸುಲಭವಾಗಿ ನೀರನ್ನು ಸಂರಕ್ಷಿಸುವುದು ಸಾಧ್ಯವಾಗಲಿದೆ.
ಪ್ರದ್ಯುಮ್ನ ಅಡಿಗ ಮತ್ತು ಸಿದ್ಧಾರ್ಥ್ ಅಡಿಗ ಸಹೋದರರು ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ಕ್ರಮವಾಗಿ 3ನೇ ಹಾಗೂ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಮಣಿಪಾಲ ವಿ.ವಿ.ಯ ಆಯುರ್ವೇದ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ| ಶ್ರೀಪತಿ ಅಡಿಗ ಹಾಗೂ ಡಾ| ರಮ್ಯಾ ಅಡಿಗ ಅವರ ಪುತ್ರರು.
ಬೆಂಗಳೂರಿನ ಪ್ರತಿಷ್ಠಿತ ಒಎಂಎಸ್ ಪೇಟೆಂಟ್ ಸರ್ವೀಸಸ್ ಸಂಸ್ಥೆಯ ನಿರ್ದೇಶಕ ಓಂಪ್ರಕಾಶ್ ಶೃಂಗೇರಿ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಈ ಪೇಟೆಂಟ್ ಪಡೆದಿದ್ದಾರೆ.