ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ’ ಯೋಜನೆಯಡಿ ಆಯ್ಕೆಗೊಂಡಿರುವ ರಾಜ್ಯದ ಏಳು ನಗರಗಳಲ್ಲಿ ಬಾಕಿ ಉಳಿದಿರುವ 295 ಕಾಮಗಾರಿಗಳನ್ನು 2023ರ ಜೂನ್‌ಗಿಂತ ಮುಂಚಿತವಾಗಿಯೇ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ನೀಡಿದ ಆವರು, ರಾಜ್ಯದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ನಗರ ಆಯ್ಕೆಯಾಗಿದೆ.
ಯೋಜನೆಯ ತೀವ್ರಗತಿಯ ಅನುಷ್ಠಾನಕ್ಕೆ ಪೂರಕವಾಗಿ 2020ರಿಂದ ಇಲ್ಲಿವರೆಗೆ ರಾಜ್ಯದ ಎಲ್ಲಾ 7 ಸ್ಮಾರ್ಟ್ ಸಿಟಿಗಳಿಗೆ ನಗರಾಭಿವೃದ್ಧಿ ಸಚಿವರು 35ಕ್ಕೂ ಹೆಚ್ಚು ಬಾರಿ ಉನ್ನತ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಗರಗಳಲ್ಲಿ 22 ಸಭೆಗಳನ್ನು ನಡೆಸಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ಇದಲ್ಲದೆ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಯಾ ಜಿಲ್ಲಾಧಿಕಾರಿಗಳು ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಕಳೆದ ಏಳು ವರ್ಷಗಳಲ್ಲಿ ಈ ಏಳು ನಗರಗಳಲ್ಲಿ ಒಟ್ಟು 889 ಕಾಮಗಾರಿಗಳ ಪೈಕಿ 590 ಕಾಮಗಾರಿಗಳು ಪೂರ್ಣಗೊಂಡಿದ್ದು, 295 ಕಾಮಗಾರಿಗಳು ಪ್ರಗತಿಯಲ್ಲಿವೆ. ನಾಲ್ಕು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.
ಆರ್ಥಿಕ ಪ್ರಗತಿಯಲ್ಲಿ ರಾಜ್ಯ 3ನೇ ಶ್ರೇಯಾಂಕದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಆರ್ಥಿಕ ವೆಚ್ಚದಲ್ಲಿ ಶೇ.85 ಪ್ರಗತಿ ಸಾಧಿಸಲಾಗಿದೆ. ಸ್ಮಾರ್ಟ್ ಸಿಟಿ ಅನುದಾನ, ಪಿಪಿಪಿ ಹಾಗೂ ಕನ್ವರ್ಜನ್ಸ್ ಸೇರಿ ಒಟ್ಟಾರೆ ಯೋಜನೆಯಡಿ 2022ರ ಜೂನ್ ವೇಳೆ 13,688 ಕೋಟಿ ರೂ. ವೆಚ್ಚದ 889 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.