Advertisement

ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಸ್ಮಾರ್ಟ್‌ ಸಿಟಿ ಅನುದಾನ ಬಳಕ

08:19 PM Nov 14, 2020 | Suhan S |

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ಸ್ಮಾರ್ಟ್‌ ಸಿಟಿ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ತಿಳಿಸಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಶಿವಮೊಗ್ಗ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಉಬ್ಬುಗಳ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ಅಗತ್ಯ ಕೆಲಸ ಕಾರ್ಯಗಳನ್ನು ಮಾಡಬೇಕಿದೆ. ಇದಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುದಾನವನ್ನು ಬಳಸಿಕೊಳ್ಳಲಾಗುವುದು. ರಸ್ತೆ ಅಪಘಾತ ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಪೊಲೀಸ್‌ ಇಲಾಖೆಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ತಗ್ಗಿದ ಅಪಘಾತ ಪ್ರಮಾಣ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಘಾತದಿಂದ ಆದ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 328 ಮಾರಣಾಂತಿಕ ಅಪಘಾತಗಳು ಸಂಭವಿಸಿ 365 ಮಂದಿ ಸಾವಿಗೀಡಾಗಿದ್ದರು. ಈ ವರ್ಷ ಇದುವರೆಗೆ 208 ಅಪಘಾತಗಳು ಸಂಭವಿಸಿದ್ದು, 222 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಪರ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಎಚ್‌.ಟಿ.ಶೇಖರ್‌ ಅವರು ಸಭೆಗೆ ಮಾಹಿತಿ ನೀಡಿದರು.

ಸುಪ್ರೀಂಕೋರ್ಟ್‌ ಆದೇಶದಂತೆ ಪ್ರತಿ ವರ್ಷ ಅಪಘಾತ ಮತ್ತು ಮರಣ ಪ್ರಮಾಣ ಶೇ.10ರಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳುವುದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಜವಾಬ್ದಾರಿಯಾಗಿದೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಅಪಘಾತ ಸಂಭವಿಸಿದ ಸ್ಥಳಗಳ ಪರಿಶೀಲನೆ ನಡೆಸಿ, ಮುಂದೆ ಅಪಘಾತಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ತಡೆಗೋಡೆ ನಿರ್ಮಾಣ: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿನ ಸರಪಳಿ 42.75 ಕಿಮೀನಲ್ಲಿ ಬಾಳೆಬರೆ ಘಾಟ್‌ ರಸ್ತೆಯಲ್ಲಿರುವ ಅಪಾಯಕಾರಿತಿರುವಿನಲ್ಲಿ ತುರ್ತಾಗಿ ಸುರಕ್ಷತಾ ಕ್ರಮವಾಗಿ ತಡೆಗೋಡೆ ಕಾಮಗಾರಿ ಕೈಗೊಳ್ಳಬೇಕಾಗಿದೆ. ಕಾಮಗಾರಿಗೆ ಈಗಾಗಲೇ ಅನುಮೋದನೆಯನ್ನು ಸಹ ನೀಡಲಾಗಿದೆ. ಈ ರಸ್ತೆ ಭಾಗದ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಅಗತ್ಯ ಅನುಮೋದನೆಯನ್ನು ಪಡೆದುಕೊಂಡು ಕಾಮಗಾರಿಯನ್ನು ಆದಷ್ಟು ಬೇಗನೆ ಆರಂಭಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

Advertisement

ಮಾಹಿತಿ ಫಲಕ ಅಳವಡಿಕೆ: ಅಪಘಾತಗಳು ಸಂಭವಿಸಿದಾಗ ಮಾಹಿತಿಗಾಗಿ ಹತ್ತಿರದ ಆಸ್ಪತ್ತೆ, ಪೊಲೀಸ್‌ ಠಾಣೆ, ಕಂಟ್ರೋಲ್‌ ರೂಂ, ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಒಳಗೊಂಡ 87 ಮಾಹಿತಿ ಫಲಕಗಳನ್ನು ಅಳವಡಿಸುವ ಕ್ರಿಯಾ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಇದರ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಆರ್‌ಟಿಒ ಲಕ್ಷ್ಮೀ ಕಾಂತ್‌ ನಾಲವಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next