Advertisement

Mangaluru; ಹೊಸ ವಾಹನಕ್ಕೆ 3 ತಿಂಗಳಾದರೂ ಸ್ಮಾರ್ಟ್‌ ಕಾರ್ಡ್‌ ಅಲಭ್ಯ!

12:23 AM Feb 22, 2024 | Team Udayavani |

ಮಂಗಳೂರು: ಹೊಸ ವಾಹನ ಖರೀದಿ ಮಾಡಿ ಎರಡರಿಂದ ಮೂರು ತಿಂಗಳಾದರೂ ಕೆಲವರಿಗೆ ಇನ್ನೂ ಸ್ಮಾರ್ಟ್‌ ಕಾರ್ಡ್‌ ಬಂದಿಲ್ಲ! ಆರ್‌ಟಿಒ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಕಾರ್ಡ್‌ ವಿತರಣೆ ವಿಳಂಬವಾದ ಕಾರಣದಿಂದ ಆರ್‌ಸಿ ವಿತರಣೆ ಕಳೆದ ಕೆಲವು ತಿಂಗಳಿನಿಂದ ಅಲಭ್ಯವಾಗಿದೆ.

Advertisement

ಸ್ಮಾರ್ಟ್‌ ಕಾರ್ಡ್‌ಗಾಗಿ ಕಾಯುವವರು ಆರ್‌ಟಿಒ ಕಚೇರಿಗೆ ಆಲೆದಾಡುವ ಪ್ರಮೇಯ ಎದುರಾಗಿದೆ.
ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆರ್‌ಸಿ, ಡಿಎಲ್‌ ಸ್ಮಾರ್ಟ್‌ ಕಾರ್ಡ್‌ ಗಳು ಸಿಗದೆ ವಾಹನ ಮಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹೊಸ ವಾಹನಗಳನ್ನು ಖರೀದಿಸಿದ ಗ್ರಾಹಕರು ನೋಂದಣಿ ಪತ್ರಕ್ಕಾಗಿ ಎದುರು ನೋಡುತ್ತಿದ್ದು, ಈ ಬಗ್ಗೆ ಸಮರ್ಪಕ ಮಾಹಿತಿಯೂ ಸಿಗದೆ ಕಂಗಾಲಾಗಿದ್ದಾರೆ. ಅಧಿಕಾರಿಗಳನ್ನು ಕೇಳಿದಾಗ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎನ್ನುವ ಉತ್ತರ ಕೆಲವರು ನೀಡಿದರೆ, ಮತ್ತೆ ಕೆಲವರು ಸಮಸ್ಯೆ ಇರುವುದು ನಿಜ ಎನ್ನುತ್ತಿದ್ದಾರೆ.

ಸಮಸ್ಯೆ ಏತಕ್ಕೆ?
ರಾಜ್ಯದ ಆರ್‌ಟಿಒ ಕಚೇರಿಗಳ ಸ್ಮಾರ್ಟ್‌ ಕಾರ್ಡ್‌ಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಖಾಸಗಿ ಕಂಪೆನಿ “ರೋಸ್ಮಾಟ’ಗೆ ವಹಿಸಲಾಗಿದೆ. ಪ್ರಸ್ತುತ ಸಾಫ್ಟ್‌ವೇರ್‌ ವರ್ಗಾವಣೆ ಮಾಡಲಾಗಿದ್ದು ಈ ಸಂದರ್ಭದಲ್ಲಿ ಸಮಸ್ಯೆ ತಲೆದೋರಿದೆ. ಕೆಲವೊಂದು ಕಾರ್ಡ್‌ಗಳ ಮಾಹಿತಿ ಸಮರ್ಪಕ ದಾಖಲೆಗಳು ಸಿಗದ ಕಾರಣ ಪ್ರಿಂಟಿಂಗ್‌ ವಿಳಂಬವಾಗುತ್ತಿದೆ.

ಸಂದೇಶ ಬಂದರೂ
ಕೈ ಸೇರುತ್ತಿಲ್ಲ ಸ್ಮಾರ್ಟ್‌ ಕಾರ್ಡ್‌!
ಮೂರ್ನಾಲ್ಕು ತಿಂಗಳ ಹಿಂದೆ ಹೊಸ ವಾಹನ ಖರೀದಿಸಿದವರಿಗೆ ಇಲ್ಲಿಯ ತನಕ ಸ್ಮಾರ್ಟ್‌ ಕಾರ್ಡ್‌ ಸಿಕ್ಕಿಲ್ಲ. ಈ ನಡುವೆ ಕಾರ್ಡ್‌ ಪೋಸ್ಟ್‌ ಮಾಡಲಾಗಿದೆ ಎಂದು ಮೊಬೈಲ್‌ಗೆ ಸಂದೇಶ ಬರುತ್ತದೆ. ಒಂದೆರಡು ತಿಂಗಳಾದರೂ ಸ್ಮಾರ್ಟ್‌ ಕಾರ್ಡ್‌ ತಲುಪಿಲ್ಲ ಎಂದು ಕೆಲವು ವಾಹನ ಮಾಲಕರು ಆರೋಪಿಸುತ್ತಿದ್ದಾರೆ. ಮೆಸೇಜ್‌ ಮೂಲಕ ಬಂದಿರುವ ಟ್ರ್ಯಾಕಿಂಗ್‌ ಸಂಖ್ಯೆಯನ್ನು ಪರಿಶೀಲಿಸಿದ ವೇಳೆ ಇಂತಹ ದಾಖಲೆಗಳಿಲ್ಲ ಎನ್ನುವ ಮಾಹಿತಿ ಸಿಗುತ್ತದೆ.

ನೊಂದಣಿ ಪತ್ರ ಅತೀ ಅಗತ್ಯ!
ಸಾರ್ವಜನಿಕ ಸಾರಿಗೆ ಸೇರಿದಂತೆ ಗೂಡ್ಸ್‌ ವಾಹನಗಳಿಗೆ ನೊಂದಣಿ ಪತ್ರ ಅತೀ ಅಗತ್ಯ. ನೊಂದಣಿ ಪತ್ರವಿಲ್ಲದೆ ಪರವಾನಿಗೆ, ಎಫ್‌ಸಿ ಸಿಗುವುದಿಲ್ಲ. ವಾಹನ ಖರೀದಿಸಿದ ಬಳಿಕ ರಸ್ತೆಗಿಳಿಯಲು ಇವುಗಳು ಅಗತ್ಯದ ದಾಖಲೆಗಳಾಗಿವೆ. ಇವುಗಳನ್ನು ಪಡೆಯಲು ಆರ್‌ಸಿ ಅಗತ್ಯವಾಗಿದ್ದು, ಸದ್ಯ ವಿತರಣೆಯಾಗದಿರುವುದು ನಾಗರಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ದಿನಕ್ಕೆ 400 ಕಾರ್ಡ್‌
ಸ್ಮಾರ್ಟ್‌ ಕಾರ್ಡ್‌ಗಳ ತಯಾರಿಯ ಜವಾಬ್ದಾರಿ “ರೋಸ್ಮಾಟ’ ಕಂಪೆನಿಗೆ ನೀಡಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿದ್ದ ವಾಹನಗಳ ಮಾಹಿತಿಯನ್ನು ರೋಸ್ಮಾಟ ಕಂಪೆನಿಗೆ ಹಸ್ತಾಂತರ ಮಾಡಲಾಗುತ್ತಿದೆ. ಈ ಮಾಹಿತಿ ಹಸ್ತಾಂತರ ಪ್ರಕ್ರಿಯೆ ನಿಧಾನವಾಗಿದೆ. ಕಾರ್ಡ್‌ ಗಳ ಪ್ರಿಂಟಿಂಗ್‌ಗೆ ಸಂಬಂಧಿಸಿದಂತೆ ಸಮಸ್ಯೆಯಾಗಿತ್ತು. ಇದರಿಂದ ಕಳೆದ ಕೆಲವು ತಿಂಗಳಿಂದ ಸ್ಮಾರ್ಟ್‌ ಕಾರ್ಡ್‌ಗಳು ವಿತರಣೆಯಾಗಿಲ್ಲ. ಕಾರ್ಡ್‌ಗಳನ್ನು ಪ್ರಿಂಟ್‌ ಮಾಡಿದ ಬಳಿಕ ಅವುಗಳಿಗೆ ಆಯಾ ವಾಹನದ ಮಾಹಿತಿಯನ್ನು ಶೇಖರಿಸುವ ಪ್ರಕ್ರಿಯೆ(ನೋಲೆಡ್ಜ್ ಮ್ಯಾನೇಜ್ಮೆಂಟ್ ಸಿಸ್ಟಂ)ಗೆ ಕಾಲಾವಕಾಶ ಅಗತ್ಯವಾಗಿದ್ದು, ಒಂದು ಕೇಂದ್ರದಲ್ಲಿ ದಿನವೊಂದಕ್ಕೆ 300ರಿಂದ 400 ಕಾರ್ಡ್‌ಗಳಷ್ಟೇ ರೆಡಿಯಾಗುತ್ತದೆ.

ಸಮಸ್ಯೆ ಇದ್ದದ್ದು ನಿಜ. ಪ್ರಸ್ತುತ ಅದನ್ನು ಬಗೆಹರಿಸಲಾಗುತ್ತಿದೆ. ಕಾರ್ಡ್‌ಗಳ ವಿತರಣೆ ಮತ್ತೆ ಸುಸೂತ್ರವಾಗಿ ನಡೆಯುತ್ತಿದೆ. ವರ್ಷದಲ್ಲಿ ಒಂದೆರಡು ಬಾರಿ ಸಣ್ಣಪುಟ್ಟ ಗೊಂದಲಗಳಾಗುತ್ತಿದ್ದು, ಇಲಾಖೆ ತತ್‌ಕ್ಷಣ ಬಗೆಹರಿಸುತ್ತದೆ.
-ಯೋಗೀಶ್‌ ಎ.ಎಂ.,
ರಾಜ್ಯ ಸಾರಿಗೆ ಆಯುಕ್ತರು

ಮಂಗಳೂರಿನಲ್ಲಿ ಸರಿ
ಸುಮಾರು 5700 ಮಂದಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆಗೆ ಬಾಕಿ ಇದೆ. ಬಹುತೇಕ ಸ್ಮಾರ್ಟ್‌ ಕಾರ್ಡ್‌ಗಳು ಸಿದ್ಧಗೊಳ್ಳುತ್ತಿವೆ. ಮುಂದಿನ ಒಂದೆರಡು ವಾರಗಳಲ್ಲಿ ಸಮಸ್ಯೆ ಸಂಪೂರ್ಣ ಬಗೆಹರಿಯಲಿದ್ದು, ಸ್ಮಾರ್ಟ್‌ ಕಾರ್ಡ್‌ಗಳು ವಾಹನ ಮಾಲಕರ ಕೈ ಸೇರಲಿದೆ.
-ಶ್ರೀಧರ್‌ ಮಲ್ಲಾಡ್‌,
ಮಂಗಳೂರು ಉಪ ಸಾರಿಗೆ ಆಯುಕ್ತರು

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next