Advertisement

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

04:28 PM Apr 19, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಅಷ್ಟೇ ಅಲ್ಲದೇ ಎಲ್ಲ ತಂತ್ರಜ್ಞಾನಗಳು ಮಾನವ ಜೀವನವನ್ನು
ಸುಲಭಗೊಳಿಸುವ ಸಾಧನಗಳಾಗಿವೆ. ಅವುಗಳ ಜ್ಞಾನವನ್ನು ಸಂಪೂರ್ಣವಾಗಿ ಅರಿತು ನಮ್ಮ ದಿನನಿತ್ಯದ ಕಾರ್ಯ ಮತ್ತು ವೃತ್ತಿಪರತೆಯನ್ನು ವೃದ್ಧಿಸಿಕೊಳ್ಳಲು ಬಳಸಬಹುದಾಗಿದೆ ಎಂದು ಬೆಳಗಾವಿ ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ ಹೇಳಿದರು.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ
“ನವ ಜ್ಞಾನ ಉತ್ಪತ್ತಿ ಮತ್ತು ಕೃತಕ ಬುದ್ಧಿಮತ್ತೆ’ ಕುರಿತು ಗುರುವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನವು ಮಾನವ ನಿರ್ಮಿತವಾಗಿದ್ದರೂ ಅವು ಪ್ರಸಕ್ತ ದಿನಗಳಲ್ಲಿ ಮಾನವನಿಗೆ ಆರ್ಥಿಕ, ಔದ್ಯೋಗಿಕ ಮತ್ತು ಮಾನಸಿಕವಾಗಿ ಹಾನಿ ಉಂಟು ಮಾಡುತ್ತಿವೆ. ಆದರೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅರಿತುಕೊಂಡು ಸದ್ಬಳಕೆ ಮಾಡಿಕೊಂಡಾಗ ಸಮಾಜ ಪ್ರಗತಿಯಾಗಲಿದೆ. ಕೃತಕ ಬುದ್ಧಿಮತ್ತೆ ಮುಂಬರುವ ದಿನಗಳಲ್ಲಿ ಬಹಳಷ್ಟು ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಚರ್ಚೆ ಶುರುವಾಗಿದೆ.

ಈ ಹಿಂದಿನ ಕೈಗಾರಿಕೆ ಕ್ರಾಂತಿಯಿಂದ ಇತ್ತೀಚಿನ ಎರಡು ದಶಕಗಳ ಹಿಂದಿನ ಕಂಪ್ಯೂಟರ್‌ ಬಳಕೆವರೆಗೆ ಅನೇಕ ಹೊಸ ಹೊಸ ಆವಿಷ್ಕಾರಗಳು ಉದ್ಯೋಗ ಕಸಿದುಕೊಳ್ಳುತ್ತವೆ ಎಂಬ ಆತಂಕ ಸೃಷ್ಟಿಸಿದ್ದವು ಎಂಬುದು ಇತಿಹಾಸ. ಕೃತಕ ಬುದ್ಧಿಮತ್ತೆಯೂ ಉದ್ಯೋಗ ಕಸಿಯುವ ರಾಕ್ಷಸನಂತೆ ಬಿಂಬಿತಗೊಂಡಿರುವುದು ಸಾಮಾನ್ಯವಾಗಿದೆ ಎಂದರು.

ಈವರೆಗೆ ಪ್ರಪಂಚದಲ್ಲಿ ಅಂದಾಜು 15 ಕೋಟಿ ಪುಸ್ತಕಗಳಿವೆ. ಆದರೆ ಮುಂದೆ ಕೃತಕ ಬುದ್ಧಿಮತ್ತೆ ಸಹಾಯದಿಂದ ಪುಸ್ತಕ ಬರೆಯುವುದು ಸುಲಭ. ಹೀಗಾಗಿ ಮುಂಬರುವ ಮೂರು ದಶಕಗಳಲ್ಲಿ ಪುಸ್ತಕಗಳ ಸಂಖ್ಯೆ 50 ಕೋಟಿ ದಾಟಲಿದೆ ಎಂದು
ಅಂದಾಜಿಸಿದರು.

Advertisement

ಕೃತಕ ಬುದ್ಧಿಮತ್ತೆ ಸಾಧನದಲ್ಲಿ ಪರಿಣಿತಿ ಪಡೆದಲ್ಲಿ ಮುಂಬರುವ ದಿನಗಳಲ್ಲಿ ಅದು ಉದ್ಯೋಗ ಕಸಿಯುವ ರಾಕ್ಷಸನಾಗದೆ, ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಮತ್ತು ಹೆಚ್ಚಿನ ವೇತನ ನೀಡುವ ಮಿತ್ರನಾಗುವುದು ಖಂಡಿತ. ಹೀಗಾಗಿ ಶಿಕ್ಷಕರು ಕೃತಕ ಬುದ್ಧಿಮತ್ತೆಯನ್ನು ಕಲಿಯುವ ಅವಶ್ಯಕತೆಯಿದೆ. ಒಬ್ಬ ಶಿಕ್ಷಕ ಕೃತಕ ಬುದ್ಧಿಮತ್ತೆ ಕಲಿತರೆ, ಆ ಶಿಕ್ಷಕ ನೂರಾರು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕಲಿಯಲು ಪ್ರೇರೇಪಿಸುವ ಮತ್ತು ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬಹುದು ಎಂದು ಹೇಳಿದರು.

ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ಕಲಿಕೆ ನಿರಂತರ. ಹೀಗಾಗಿ ಔದ್ಯೋಗಿಕ ಕ್ಷೇತ್ರದ ಉದ್ಯೋಗ ಬೇಡಿಕೆಗಳನ್ನು ಅರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಹೊಸ ಸಂಗತಿಗಳನ್ನು ಪರಿಚಯಿಸಬೇಕು. ಜ್ಞಾನದ ಫಲದಿಂದ ಸಮಾಜ
ಮತ್ತು ಕೈಗಾರಿಕೆಗಳು ಸಮನಾಂತರವಾಗಿ ಪ್ರಗತಿ ಹೊಂದುತ್ತವೆ. ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ ಫೋನ್‌ ಫಲವಾಗಿ ಅನೇಕ ಅದ್ಭುತಗಳನ್ನು ಕಂಡಿರುವ ನಾವು ಮುಂಬರುವ ದಶಕದಲ್ಲಿ ಕೃತಕ ಬುದ್ಧಿಮತ್ತೆಯಿಂದ ಹೊಸ ಹೊಸ ಚಮತ್ಕಾರಗಳನ್ನು ಕಾಣಲು ಸಿದ್ಧರಾಗಬೇಕಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next