ಬೆಂಗಳೂರು: ರಾಜ್ಯದ ಎಂಟು ಕಡೆ ಸಣ್ಣ ಕೈಗಾರಿಕಾ ಹಬ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪೂರ್ ತಿಳಿಸಿದರು.
ಪತ್ರಕರ್ತರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ 17ರಂದು ಸಣ್ಣ ಕೈಗಾರಿಕೆ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ 700 ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಒಳಗಾಗಿವೆ. ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ ಸೇರಿದಂತೆ 7-8 ಕಡೆಗಳಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸುವ ಉದ್ದೇಶವಿದೆ. ಪ್ರತಿ ಕೈಗಾರಿಕಾ ವಸಾಹತುವಿಗೆ ಕನಿಷ್ಠ 50 ಎಕರೆ ಜಮೀನು ಬೇಕು. ಹುಬ್ಬಳ್ಳಿ ಹೊರತುಪಡಿಸಿ ಉಳಿದೆಡೆ ನಮ್ಮ ಇಲಾಖೆಯ 15- 20 ಎಕರೆ ಜಮೀನು ಇದೆ. 50ರಿಂದ 100 ಎಕರೆ ಜಮೀನು ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ 100 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ವಸಾಹತನ್ನು ಸುಸಜ್ಜಿತವಾಗಿ ಸ್ಥಾಪಿಸಿದ್ದೇವೆ. ಅಲ್ಲಿ ನೀರು ಸಂಸ್ಕರಣ ಘಟಕ ಇರುವ ಕಾರಣದಿಂದ ಕೈಗಾರಿಕೆ ಸ್ಥಾಪನೆಗೆ ನಿರೀಕ್ಷಿಸಿದಷ್ಟು ಉದ್ಯಮಿಗಳು ಬರುತ್ತಿಲ್ಲ. ಒಂದು ಸಾವಿರ ಎಕರೆಯಲ್ಲಿ ಕೈಗಾರಿಕಾ ವಸಾಹತು ಇದೆ. ಈಗ ಸದ್ಯ 500 ಮಂದಿ ಸಣ್ಣ ಉದ್ಯಮ ಸ್ಥಾಪಿಸಲು ಮುಂದೆ ಬಂದಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವನ್ನು ನೀಡುತ್ತೇವೆ ಎಂದರು.
ಬಳ್ಳಾರಿಯಲ್ಲಿ ಸೋಲಾರ್ ಬ್ರ್ಯಾಂಡ್ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಸಾರ್ವಜನಿಕ ಉದ್ದಿಮೆ ಹಣಕಾಸು ಇಲಾಖೆಯಲ್ಲಿರುವುದರಿಂದ ಸ್ಪಷ್ಟನೆ ಕೋರಿ ಪತ್ರ ಬರೆಯಲಾಗಿದೆ. ಸಣ್ಣ ಕೈಗಾರಿಕೆಗಳ ಸಮಸ್ಯೆ ಸಂಬಂಧ ಸದ್ಯದಲ್ಲೇ ಸಣ್ಣ ಕೈಗಾರಿಕೋದ್ಯಮಿಗಳ ಸಭೆ ನಡೆಸುತ್ತೇನೆ. ವಿದ್ಯುತ್ ದರ ಏರಿಕೆಯಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಕಲಬುರಗಿ ಜಿಲ್ಲೆಯ ಸಣ್ಣ ಕೈಗಾರಿಕೆ ಉದ್ಯಮಿಗಳು ಮನವಿ ಸಲ್ಲಿಸಿದ್ದಾರೆ. ಎಲ್ಲ ವಿಚಾರಗಳ ಬಗ್ಗೆಯೂ ಸಣ್ಣ ಕೈಗಾರಿಕೋದ್ಯಮಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.