Advertisement

4 ವರ್ಷಗಳಿಂದ ನಡೆಯುತ್ತಲೇ ಇದೆ ಮೋರಿ ಕಾಮಗಾರಿ!

06:38 AM Jan 02, 2019 | Team Udayavani |

ಅರಂತೋಡು : ಅರಂತೋಡು – ತೊಡಿಕಾನ ಮುಖ್ಯ ರಸ್ತೆಯ ಕಲ್ಲಂಬಳ ಎಂಬಲ್ಲಿ ಮೋರಿಗಳೆರಡು ಕುಸಿತಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ನಾಲ್ಕು ವರ್ಷಗಳ ಹಿಂದೆ ರಸ್ತೆ ಕಾಮಗಾರಿಗಳ ಸಮಯದಲ್ಲಿ ಮೋರಿಗಳ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಹೀಗಾಗಿ, ಕಳೆದ ವರ್ಷವೇ ಇಲ್ಲಿಯ ಮೋರಿಗಳು ಕುಸಿದಿದ್ದು, ಈ ಬಗ್ಗೆ ಜಿ.ಪಂ.ಗೆ ಸ್ಥಳೀಯರು ಮಾಹಿತಿ ನೀಡಿ, ದುರಸ್ತಿಪಡಿಸುವಂತೆ ತಿಳಿಸಿದ್ದರು.ಆದರೆ ಈ ತನಕ ಈ ಎರಡು ಮೋರಿಗಳನ್ನು ತೆರವುಗೊಳಿಸಿ ನೂತನ ಮೋರಿ ನಿರ್ಮಾಣ ಕಾರ್ಯ ನಡೆದಿಲ್ಲ.

Advertisement

ಜಿಲ್ಲಾ ಪಂಚಾಯತ್‌ ರಸ್ತೆ
ಅರಂತೋಡಿನಿಂದ ತೊಡಿಕಾನದ ದ.ಕ. ಕೊಡಗು ಗಡಿಭಾಗದ ತನಕ ಇದು ಜಿ.ಪಂ. ರಸ್ತೆಯಾಗಿದ್ದು, ನಾಲ್ಕು ವರ್ಷಗಳ ಹಿಂದೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಡಾಮರು ಕಾಮಗಾರಿ, ಸೇತುವೆ, ಮೋರಿ ಹಾಗೂ ಇತರ ಕೆಲಸಗಳನ್ನು ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗಿತ್ತು. ಆದರೆ, ಎಸ್ಟಿಮೇಟ್‌ ಪ್ರಕಾರ ಗುತ್ತಿಗೆದಾರರು ಕೆಲಸ ಮಾಡಿಲ್ಲ ಎಂಬ ಆರೋಪ ಜನರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಎಸ್ಟಿಮೇಟ್‌ ಪ್ರಕಾರ ಈಗ ಕುಸಿತಗೊಂಡಿರುವ ಎರಡು ಮೋರಿಗಳನ್ನು ತೆಗೆದು ಹೊಸ ಮೋರಿಗಳನ್ನು ನಿರ್ಮಾಣ ಮಾಡಬೇಕಾಗಿತ್ತು. ಆದರೆ, ಮೋರಿ ನಿರ್ಮಾಣ ಮಾಡಿದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಗುತ್ತಿಗೆದಾರರು ಕಾಮಗಾರಿ ಮುಗಿದ ಬಳಿಕ ಎರಡು ವರ್ಷಗಳ ಕಾಲ ರಸ್ತೆಯ ನಿರ್ವಹಣೆಯನ್ನು ನೋಡಿಕೊಳ್ಳಬೇಕಾಗಿತ್ತು. ಅದನ್ನೂ ಮಾಡಿಲ್ಲ. ಅಲ್ಲದೆ ತೊಡಿಕಾನ ದೇವಾಲಯದ ಬಳಿ ಒಂದು ಬಸ್‌ ಬೇ ಮಾಡಬೇಕಾಗಿತ್ತು. ಕಳೆದ ವರ್ಷ ಮೋರಿಗಳು ಕುಸಿತಗೊಂಡಿದ್ದು, ಅವುಗಳನ್ನು ಬದಲಾಯಿಸುವಂತೆ ಜಿಲ್ಲಾ ಪಂಚಾಯತ್‌ಗೆ ಬರೆದರೂ ಕಾಮಗಾರಿ ಪ್ರಾರಂಭಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಧಾರ್ಮಿಕ ಕೇಂದ್ರದ ಸಂಪರ್ಕ ರಸ್ತೆ
ಅರಂತೋಡು – ತೊಡಿಕಾನ ರಸ್ತೆ ಸುಳ್ಯ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ದಿನ ನಿತ್ಯ ನೂರಾರು ಭಕ್ತಾರು, ಉತ್ಸವ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಈ ರಸ್ತೆ ಮೂಲಕವೇ ಆಗಮಿಸುತ್ತಾರೆ. ಅಂಥ ಸಂದರ್ಭಗಳಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುತ್ತದೆ. ಕುಸಿದು ನಿಂತಿರುವ ಮೋರಿಗಳು ಯಾವ ಸಮಯದಲ್ಲಾದರೂ ಪೂರ್ಣವಾಗಿ ಕುಸಿದು ರಸ್ತೆ ಸಂಪರ್ಕ ಕಡಿತವಾದೀತು ಎಂಬ ಆತಂಕದಲ್ಲೇ ಜನರು ದಿನ ಕಳೆಯುವಂತಾಗುತ್ತದೆ.

ಡಾಮರು ರಸ್ತೆಗೆ ಮಣ್ಣು
ಇತ್ತೀಚೆಗೆ ತೊಡಿಕಾನದಲ್ಲಿ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನ ನಡೆದಿತ್ತು. ಆ ಸಂದರ್ಭದಲ್ಲಿ ಕುಸಿದು ಒಳ ಹೋಗಿರುವ ಮೋರಿಯ ಭಾಗಕ್ಕೆ ಹಾಗೂ ಕಿತ್ತು ಹೋದ ಡಾಮರಿನ ಗುಂಡಿಗೆ ಊರವರು ಅಪಾಯ ತಡೆಗಟ್ಟುವ ಉದ್ದೇಶದಿಂದ ಮಣ್ಣು ಹಾಕಿ ಸಮತಟ್ಟು ಮಾಡಿದ್ದಾರೆ. ಈಗ ಅದರಿಂದ ಧೂಳು ಚಿಮ್ಮುತ್ತಿದೆ.

Advertisement

ತಿರುವುಗಳಿಂದ ಕೂಡಿದ ರಸ್ತೆ
ಅರಂತೋಡು- ತೊಡಿಕಾನ ರಸ್ತೆ ತಿರುವುಗಳಿಂದ ಕೂಡಿದೆ. ವಾಹನಗಳ ಸರಾಗ ಸಂಚಾರಕ್ಕೆ ಇದರಿಂದ ಸಮಸ್ಯೆಯಾಗುತ್ತಿದ್ದು, ರಸ್ತೆಯನ್ನು ನೇರಗೊಳಿಸಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ.

ಕೊಡಗು ಸಂಪರ್ಕ ರಸ್ತೆ
ಈ ರಸ್ತೆ ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ತೊಡಿಕಾನದಿಂದ ತೊಡಿಕಾನ -ಪಟ್ಟಿ ಭಾಗಕ್ಕೆ ಹತ್ತಿರದ ರಸ್ತೆಯಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲವನ್ನು ಸೇರಬಹುದಾಗಿದೆ. ತೊಡಿಕಾನಕ್ಕೆ ದೇವಾಲಯಕ್ಕೆ ಭೇಟಿ ನೀಡುವ ಕೆಲವು ಭಕ್ತರು ಈ ರಸ್ತೆಯ ಮೂಲಕ ತಲಕಾವೇರಿ, ಭಾಗಮಂಡಲಕ್ಕೆ ಪ್ರಯಾಣ ಬೆಳೆಸುತ್ತಾರೆ.

ದುರಸ್ತಿಗೆ ಪತ್ರ
ರಸ್ತೆಯ ಮೋರಿ ಕುಸಿದಿದ್ದು, ದುರಸ್ತಿ ಮಾಡಿಸುವಂತೆ ಶಾಸಕರಿಗೆ ಹಾಗೂ ಜಿ.ಪಂ.ಗೆ ಗ್ರಾ.ಪಂ. ವತಿಯಿಂದ ಪತ್ರ ಬರೆದಿದ್ದೇವೆ. ಕಾಮಗಾರಿ ಅಪೂರ್ಣಗೊಂಡಿದೆ ಎಂಬ ದೂರು ಕೇಳಿ ಬರುತ್ತಿದೆ. ಗುತ್ತಿಗೆದಾರರ ರಸ್ತೆ ನಿರ್ವಹಣೆ ಅವಧಿಯ ಬಗ್ಗೆ ಖಚಿತ ಪಡಿಸಿಕೊಳ್ಳಬೇಕಷ್ಟೆ.
– ಶಿವಾನಂದ ಕುಕ್ಕುಂಬಳ,
ಉಪಾಧ್ಯಕ್ಷರು, ಅರಂತೋಡು ಗ್ರಾ.ಪಂ.

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next