ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆಯಡಿ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿನ ಆರು ಪ್ರಮುಖ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಯಿತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ರವಿವಾರ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚಿಟಗುಪ್ಪಿ ಆಸ್ಪತ್ರೆ ಅಭಿವೃದ್ಧಿ ಯೋಜನೆಯಲ್ಲಿ 26.18 ಕೋಟಿ ರೂ. ವೆಚ್ಚದಲ್ಲಿ ಚಿಟಗುಪ್ಪಿ ಆಸ್ಪತ್ರೆ ನಿರ್ಮಾಣ ಹಾಗೂ ನಾಲ್ಕು ಅಂತಸ್ತಿನ ಆಡಳಿತ ವಿಭಾಗ ಕಟ್ಟಡ ನಿರ್ಮಿಸಲಾಗುವುದು. 20.26 ಕೋಟಿ ರೂ. ವೆಚ್ಚದಲ್ಲಿ ನೆಹರು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಈ ಕಾಮಗಾರಿಯಲ್ಲಿ ಜಿ+2 ಕಟ್ಟಡದಲ್ಲಿ ಟೇಬಲ್ ಟೆನಿಸ್ ಕೋರ್ಟ್, ಕಾನ್ಫರೆನ್ಸ್ ಸಭಾಂಗಣ ಮತ್ತು ಸಾಂಸ್ಕೃತಿಕ ಭವನ, ಜಿಮ್ನಾಸ್ಟಿಕ್, ಕ್ರೀಡಾಂಗಣ ನಿರ್ಮಿಸಲಾಗುವುದು. 50.75 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಸ್ಟೇಷನ್ ರಸ್ತೆ ಹಾಗೂ ಸುತ್ತಮುತ್ತಲಿನ 5.08 ಕಿ.ಮೀ. ಮುಖ್ಯರಸ್ತೆಯು ಸ್ಮಾರ್ಟ್ ರಸ್ತೆ ಪ್ಯಾಕೇಜ್-02ರ ಅಭಿವೃದ್ಧಿ ಕಾಮಗಾರಿ ಹೊಂದಿದೆ. ಇವುಗಳಲ್ಲಿ ನೆಹರು ಕ್ರೀಡಾಂಗಣದ ಸುತ್ತಲಿನ ಜೆಸಿ ನಗರ ರಸ್ತೆ, ಕೊಪ್ಪಿಕರ ರಸ್ತೆ, ಕೊಯಿನ್ ರಸ್ತೆ, ವಿಕ್ಟೋರಿಯಾ ರಸ್ತೆ, ಬ್ರಾಡ್‌ವೇ, ಮರಾಠಾ ಗಲ್ಲಿ ಸೇರಿದಂತೆ ಸಿಬಿಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಒಳಗೊಂಡಿವೆ ಎಂದರು.
ಗಣೇಶ ಪೇಟೆಯ ಮೀನು ಮಾರುಕಟ್ಟೆಯನ್ನು 5.38 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. 4.60 ಕೋಟಿ ರೂ. ವೆಚ್ಚದಲ್ಲಿ ಮೇದಾರ ಓಣಿಯ ಪಾರ್ಕಿಂಗ್ ಹಾಗೂ ಡಿಸ್ಪೆನ್ಸರಿ ಕಾಮಗಾರಿ ಕೈಗೊಳ್ಳಲಾಗುವುದು. ಉಣಕಲ್ ಕೆರೆ ಅಭಿವೃದ್ಧಿ ಯೋಜನೆ ಭಾಗ-1ರ ಕಾಮಗಾರಿಯನ್ನು 14.83 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಈ ಯೋಜನೆಯಲ್ಲಿ ಬಯೋರೆಮಿಡಿಯೇಶನ್, ಕೆರೆಯಲ್ಲಿ ಹೂಳು ತೆಗೆಯುವುದು, ನೀರಿನ ಗುಣಮಟ್ಟ, ಸಬ್ ಮರ್ಜಡ್ ಎರಿಯೇಟರ್ಸ್ ಹಾಗೂ ಫ್ಲೋಟಿಂಗ್ ರ್ಯಾಪcರ್ಸ್ ಅಳವಡಿಸಲಾಗುವುದು ಎಂದರು. ಒಟ್ಟು 119 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದಅಬ್ಬಯ್ಯ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ ಅಹಮದ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.