Advertisement

ನಿಧಾನಗತಿಯ ಕಾಮಗಾರಿ: ಜನ ಸಂಚಾರಕ್ಕೆ ತೊಂದರೆ 

10:48 AM Nov 22, 2018 | Team Udayavani |

ಸಸಿಹಿತ್ಲು: ಸಸಿಹಿತ್ಲುವಿನಲ್ಲಿ ಎನ್‌ಸಿಆರ್‌ಎಂಪಿ ಯೋಜನೆ ಅನ್ವಯ ಪ್ರವಾಸೋದ್ಯಮ ಇಲಾಖೆಯಿಂದ 4.5 ಕೋ. ರೂ. ವೆಚ್ಚದಲ್ಲಿ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಸಿಹಿತ್ಲು ಬೀಚ್‌ನಿಂದ ದರ್ಗಾದವರೆಗೆ ಸುಮಾರು 6.1 ಕಿ.ಮೀ. ಉದ್ದದ ರಸ್ತೆಗೆ 4 ಮೀ. ಅಗಲದಲ್ಲಿ ಕಾಂಕ್ರೀಟ್‌ ಹಾಕಲಾಗುತ್ತಿದೆ. ಈ ರಸ್ತೆಯನ್ನು ಮೂರು ಹಂತಗಳಾಗಿ ನಿರ್ಮಾಣ ಮಾಡಲಾಗುತ್ತಿದೆ.

Advertisement

ಭಗವತೀ ದ್ವಾರದ ಬಳಿಯ ರಸ್ತೆಯ 1.5 ಕಿ.ಮೀ.ನ ಒಂದು ಭಾಗವನ್ನು ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ರಸ್ತೆಯು ಸೂಕ್ತವಾದ ಕ್ಯೂರಿಂಗ್‌ ಆಗಬೇಕು ಎಂದು ಹೇಳಿ ಕೊಂಡು ಕಾಮಗಾರಿಯನ್ನು ಬೆರಳೆಣಿಕೆಯ ಕಾರ್ಮಿಕರಿಂದ ನಿಧಾನಗತಿಯಲ್ಲಿ ಮಾಡುತ್ತಿರುವುದರಿಂದ ಇಲ್ಲಿನ ನಾಗರಿಕರು ಸಂಚಾರಕ್ಕೆ ಬಹಳಷ್ಟು ಅಡೆತಡೆಯನ್ನು ಅನುಭವಿಸುತ್ತಿದ್ದಾರೆ.

ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಮುಂಡ ಬೀಚ್‌ ಪ್ರದೇಶಕ್ಕೂ ಆಗಮಿಸುವ ಪ್ರವಾಸಿಗರ ಕೊರತೆ ಇದರಿಂದ ತೀವ್ರವಾಗಿ ಕಾಡಿದೆ.

ಸಮಸ್ಯೆಗಳು
ರಸ್ತೆ ನಿರ್ಮಾಣ ಕಾರ್ಯದಿಂದ ಮುಕ್ಕ ಪ್ರದೇಶಕ್ಕೆ ತೆರಳಬೇಕಾದವರು ಸಸಿಹಿತ್ಲು ಭಗವತೀ ದೇವಸ್ಥಾನದ ರಸ್ತೆಯನ್ನು ಬಳಸಿಕೊಂಡು ಹಳೆಯಂಗಡಿ ಮೂಲಕ ಸುತ್ತು ಬಳಸಿ ಮುಕ್ಕವನ್ನು ತಲುಪಬೇಕಾಗಿದೆ. ಇದ್ದ ಬಸ್‌ ವ್ಯವಸ್ಥೆಯನ್ನು ಸಹ ಮೊಟಕುಗೊಳಿಸಲಾಗಿದೆ.

ಆಟೋ ದರ ದುಪ್ಪಟ್ಟು
ಇಲ್ಲಿನ ಜನರು ಸಂಚಾರಕ್ಕೆ ಈಗ ಆಟೋವನ್ನೇ ಅವಲಂಬಿಸಬೇಕಾಗಿದೆ. ಹಳೆಯಂಗಡಿ, ಕದಿಕೆ ಮೂಲಕ ದುಪ್ಪಟ್ಟು ಬಾಡಿಗೆ ನೀಡಿ ಅನಿವಾರ್ಯವಾಗಿ ಸುತ್ತುಬಳಸಿಕೊಂಡು ಪೇಟೆಯನ್ನು ತಲುಪಬೇಕಾದ ಅನಿವಾರ್ಯತೆ ಇದೆ. ಆಟೋ ಚಾಲಕರು ಕೂಡ ನಿಯಮಗಳನ್ನು ತೂರಿ ದುಪ್ಪಟ್ಟು ದರ ಕೇಳುತ್ತಿದ್ದಾರೆ. ಇನ್ನು ಮುಕ್ಕದಿಂದ ಸಸಿಹಿತ್ಲು ಹೋಗುವವ ರದ್ದು ಕೂಡ ಇದೇ ಸ್ಥಿತಿಯಾಗಿದೆ.

Advertisement

ಇಲ್ಲಿನ ಜನರು ಪೇಟೆಯ ಸಂಪರ್ಕ ಪಡೆಯಲು ಸಂಕಷ್ಟಪಡುತ್ತಿದ್ದರೂ ಯಾವ ಇಲಾಖೆಗಳೂ ಸ್ಪಂದಿಸುತ್ತಿಲ್ಲ. ಶಾಲಾ ಮಕ್ಕಳಿಗೆ, ಉದ್ಯೋಗಿಗಳಿಗೆ ಪೇಟೆಗೆ ತೆರಳಲು ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲಾಖೆಯ ನಿಯಮಗಳೇ ಕಾರಣ
ಜನಸಂದಣಿ ಇರುವ ಕಡೆಗಳಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ನಿಯಮದಂತೆ ತುರ್ತಾಗಿ ಮಾಡಿ ಮುಗಿಸಬೇಕು. ಈ ನಿಯಮ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದೆ. ಆದರೆ ಲೋಕೋಪಯೋಗಿ ಇಲಾಖೆಯು ಇಲ್ಲಿನ ಕಾಮಗಾರಿ ನಡೆಸುವಾಗ ಒಂದು ವರ್ಷದ ಅವಧಿಯ ಕಾಲಾವಕಾಶ ನೀಡಿರುವುದರಿಂದ ಯಾವುದೇ ರೀತಿಯಲ್ಲೂ ಪ್ರಶ್ನಿಸುವಂತಿಲ್ಲ. ಇದರಿಂದ ಗುತ್ತಿಗೆದಾರರು ಪಂಚಾಯತ್‌ ಮಾತನ್ನೂ ಕೇಳದ ರೀತಿಯಲ್ಲಿದ್ದಾರೆ. 

ತಿಂಗಳೊಳಗೆ ಮುಕ್ತ
ಇದು ವಿಶ್ವಬ್ಯಾಂಕ್‌ ಸಂಬಂಧಿತ ಯೋಜನೆಯಾದುದರಿಂದ ಒಂಬ್ಬತ್ತು ತಿಂಗಳ ಅವಧಿಯನ್ನು ಟೆಂಡರ್‌ನಲ್ಲಿ ನಿಯಮದಂತೆ ನೀಡಲಾಗಿದೆ. ಈ ನಡುವೆ ಮರಳಿನ ಅಭಾವ ಬಂದಾಗ ಸ್ವತಃ ಜಿಲ್ಲಾಧಿಕಾರಿಗಳ ಮೂಲಕ ಗುತ್ತಿಗೆ ದಾರರಿಗೆ ಮರಳಿನ ವ್ಯವಸ್ಥೆ ಮಾಡಿದ್ದೇವೆ. ಸಿಮೆಂಟ್‌ ಮಿಶ್ರಿತ ಕಾಂಕ್ರೀಟ್‌ ಆದುದರಿಂದ ಕ್ಯೂರಿಂಗ್‌ಗೆ ಅವಕಾಶ ಮಾಡಿಕೊಡಲೇಬೇಕು. ಇಲ್ಲದಿದ್ದಲ್ಲಿ ರಸ್ತೆ ಬಿರುಕು ಬಿಡುತ್ತದೆ. ಮುಂದಿನ ಒಂದು ತಿಂಗಳಿನಲ್ಲಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸುತ್ತೇವೆ.
– ರವಿಕುಮಾರ್‌,ಸಹಾಯಕ
ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next