ಬೆಂಗಳೂರು: ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಲಲಿತ ಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೋ ಕಾಮಗಾರಿಗೆ ನಿಗದಿಪಡಿಸಿದ್ದ ಅವಧಿ ಮುಗಿದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಕಲಿಕಾ ತರಗತಿ ಸೇರಿದಂತೆ ಇನ್ನಿತರ ಕ್ರಿಯಾ ಯೋಜನೆ ಜಾರಿಗೆ ತೀವ್ರ ಹಿನ್ನಡೆ ಉಂಟಾಗಿದೆ.
ಈ ಹಿಂದೆ ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗಲೇ ಅಕಾಡೆಮಿ ಗ್ರಾಫಿಕ್ ಸ್ಟುಡಿಯೋ ಕಾಮಗಾರಿಗೆ ಶಂಕುಸ್ಥಾಪನೆ ನಡೆದಿತ್ತು. ಹಾಗೆಯೇ ಸ್ಟುಡಿಯೋ ನಿರ್ಮಾಣದ ಸಂಪೂರ್ಣ ನಿರ್ವಹಣೆಯನ್ನು ಪಿಡಬ್ಲ್ಯುಡಿ ಇಲಾಖೆಗೆ ನೀಡಲಾಗಿತ್ತು. ಜತೆಗೆ ಸ್ಟುಡಿಯೋ ನಿರ್ಮಾಣಕ್ಕಾಗಿ 3,60 ಕೋಟಿ ರೂ.ಪಾವತಿ ಮಾಡಲಾಗಿತ್ತು. 2018 ರಲ್ಲಿ ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. 2020ರಲ್ಲಿ ಸ್ಟುಡಿಯೋ ಕಾಮಗಾರಿ ಸಂಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇನ್ನೂ ಕೆಲಸ ಕುಂಟುತ್ತಲೇ ಸಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 4-5 ತಿಂಗಳು ಬೇಕಾಗಬಹುದು ಎಂದು ಲಲಿತ ಕಲಾ ಅಕಾಡೆಮಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇಈಸಂಬಂಧ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಅವರು ಅಕಾಡೆಮಿ ಸದಸ್ಯರ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳ ಪರಿಶೀಲನೆ ನಡೆಸಿರುವ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಗ್ರಾಫಿಕ್ ಸ್ಟುಡಿಯೋ ಕಾಮಗಾರಿ ವಿಳಂಬ ಸಂಬಂಧ ಅಸಮಾಧಾನ ತೊಡಿಕೊಂಡಿದ್ದಾರೆ.
ಕ್ರಿಯಾ ಯೋಜನೆಗೆ ಅಡ್ಡಿ: ಲಲಿತಕಲಾ ಅಕಾಡೆಮಿ ಹಲವು ಕ್ರಿಯಾ ಯೋಜನೆ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳ ಕಲಿಕಾ ತರಗತಿ, ಕಲಾಕೃತಿಗಳ ವಿನ್ಯಾಸ, ಗ್ರಾಫಿಕ್ ಮುದ್ರಣ ಸೇರಿ ಇನ್ನಿತರ ಕಲಿಕಾ ಯೋಜನೆ ರೂಪಿಸಿದೆ. ಆದರೆ, ಇದಕ್ಕೆಲ್ಲಾ ಸ್ಥಳಾವಕಾಶದ ಕೊರತೆ ಇರುವುದರಿಂದ ದೊಡ್ಡ ಪ್ರಮಾಣದ ಕಾರ್ಯಕ್ರಮ ರೂಪಿಸಲು ಆಗದ ಸ್ಥಿತಿಯಲ್ಲಿ ಲಲಿತಕಲಾ ಅಕಾಡೆಮಿ ಇದೆ. ಈ ಹಿಂದೆ ಸಿ.ಟಿ.ರವಿ ಅವರು ಕನ್ನಡ ಮತ್ತುಸಂಸ್ಕೃತಿಇಲಾಖೆಸಚಿವರಾಗಿದ್ದಾಗಲೇ ಡಿಸೆಂಬರ್ ಅಂತ್ಯದ ಒಳಗೆ ಗ್ರಾಫಿಕ್ ಸ್ಟುಡಿಯೋ ಕಾಮಗಾರಿ ಪೂರ್ಣಗೊಳಿಸುವ ಗಡುವು ನೀಡಿದ್ದರು. ಆದರೆ ಗಡುವು ಮುಗಿದರೂ ಕೆಲಸ ಮುಗಿದಿಲ್ಲ ಎಂದು ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಸ್ಥಿತಿಗತಿ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ : ಗ್ರಾಫಿಕ್ ಸ್ಟುಡಿಯೋ ಕಾಮಗಾರಿ ಸಕಾಲದಲ್ಲಿ ನಡೆಯುತ್ತಿಲ್ಲ. ಜತೆಗೆ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ ಎಂಬುವುದೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಕ್ಕೆ ಬಂದಿದೆ. ಹೀಗಾಗಿ ಶೀಘ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಅವರು ಲೋಕೋಪಯೋಗಿ ಇಲಾಖೆಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಎಸ್.ರಂಗಪ್ಪ ಹೇಳಿದ್ದಾರೆ.
ಲಲಿತ ಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೋ ನಿರ್ಮಾಣದ ಸಂಬಂಧಈಗಾಗಲೇಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಲೋಕೋಪಯೋಗಿ ಇಲಾಖೆಗೆ ಸಂಪೂರ್ಣ ಅನುದಾನ ಪಾವತಿಮಾಡಿದೆ.ಆದರೆ ನೀಡಿರುವ ಗಡುವು ಮುಗಿದರೂ ಇನ್ನೂ ಕೆಲಸ ಪೂರ್ಣವಾಗಿಲ್ಲ.ಕೋವಿಡ್ ನೆಪ ನೀಡಲಾಗುತ್ತಿದೆ.
–ಎಸ್.ರಂಗಪ್ಪ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
–ದೇವೇಶ ಸೂರಗುಪ್ಪ