Advertisement

ಸ್ಲೋನ್‌ ಸ್ಟೀಫ‌ನ್ಸ್‌ಗೆ ಯುಎಸ್‌ ಓಪನ್‌ ಪ್ರಶಸ್ತಿ

06:30 AM Sep 11, 2017 | Team Udayavani |

ನ್ಯೂಯಾರ್ಕ್‌: ಎಡ ಪಾದದ ಗಾಯದಿಂದಾಗಿ 11 ತಿಂಗಳು ವಿಶ್ರಾಂತಿಯಲ್ಲಿದ್ದು ಕಳೆದ ಜುಲೈಯಲ್ಲಿ ಟೆನಿಸ್‌ ಅಂಗಣಕ್ಕೆ ಮರಳಿದ್ದ ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಶನಿವಾರ ನಡೆದ ಯುಎಸ್‌ ಓಪನ್‌ನ ವನಿತಾ ಫೈನಲ್‌ನಲ್ಲಿ ತನ್ನ ದೇಶದವರೇ ಆದ ಮ್ಯಾಡಿಸನ್‌ ಕೇಯ್ಸ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ತನ್ನ ಬಾಳ್ವೆಯ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದರು.

Advertisement

ತನ್ನ ಆತ್ಮೀಯ ಗೆಳತಿಯೂ ಆಗಿರುವ ಕೇಯ್ನ ಅವರನ್ನು 6-3, 6-0 ನೇರ ಸೆಟ್‌ಗಳಿಂದ ಉರುಳಿಸಿದ ಸ್ಟೀಫ‌ನ್ಸ್‌ ಪ್ರಶಸ್ತಿ ಜಯಿಸಿದರಲ್ಲದೇ 3.7 ಮಿಲಿಯನ್‌ ಡಾಲರ್‌ ನಗದು ಬಹುಮಾನ ಪಡೆದರು. ಇದು ಸ್ಟೀಫ‌ನ್ಸ್‌ ಅವರ ಟೆನಿಸ್‌ ಬಾಳ್ವೆಯ ಬಲುದೊಡ್ಡ ಗೆಲುವು ಆಗಿದೆ. 2002ರ ಬಳಿಕ ಆತ್ಮೀಯ ಸ್ನೇಹಿತೆಯರಿಬ್ಬರ ನಡುವೆ ನಡೆದ ಮೊದಲ ಯುಎಸ್‌ ಓಪನ್‌ ಫೈನಲ್‌ ಹೋರಾಟವಾಗಿದೆ.

ನಾನಿನ್ನು ನಿವೃತ್ತಿಯಾಗಬಹುದು ಎಂದು ಪಂದ್ಯದ ಬಳಿಕ ಸ್ಟೀಫ‌ನ್ಸ್‌ ತಮಾಷೆಯಾಗಿ ಹೇಳಿದರು. ಇಂತಹ ಉನ್ನತ ಸಾಧನೆಯನ್ನು ನಾನು ಮತ್ತೂಮ್ಮೆ ಸಾಧಿಸಬಹುದೆಂದು ಭಾವಿಸುವುದಿಲ್ಲ. ಕಳೆದ ಆರು ತಿಂಗಳು ನಿಜಕ್ಕೂ ಕಠಿನವಾಗಿತ್ತು ಎಂದವರು ತಿಳಿಸಿದರು.

ಕಳೆದ 17 ಪಂದ್ಯಗಳಲ್ಲಿ 15ರಲ್ಲಿ ಗೆಲುವು ಒಲಿಸಿಕೊಂಡ ಸ್ಟೀಫ‌ನ್ಸ್‌ ವನಿತಾ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದ ಕೇವಲ ಐದನೇ ಶ್ರೇಯಾಂಕರಹಿತ ಆಟಗಾರ್ತಿ ಎಂದೆನಿಸಿಕೊಂಡಿದ್ದಾರೆ. ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಈ ಸಾಧನೆಯನ್ನು ಈ ವರ್ಷದ ಫ್ರೆಂಚ್‌ ಓಪನ್‌ನಲ್ಲಿ ನಿರ್ಮಿಸಿದ್ದರು. ಈ ಹಿಂದೆ ಶ್ರೇಯಾಂಕರಹಿತ ಆಟಗಾರ್ತಿಯಾಗಿ ಕ್ಲಿಮ್‌ ಕ್ಲಿಸ್ಟರ್ ಯುಎಸ್‌ ಓಪನ್‌ ವನಿತಾ ಚಾಂಪಿಯನ್‌ ಆಗಿದ್ದರು. ನಿವೃತ್ತಿ ಘೋಷಿಸಿದ್ದ ಬಳಿಕ ಕಣಕ್ಕೆ ಮರಳಿದ್ದ ಕ್ಲಿಸ್ಟರ್ 2009ರಲ್ಲಿ ಪ್ರಶಸ್ತಿ ಜಯಿಸಿದ್ದರು.

ಇದೊಂದು ಅಸಾಮಾನ್ಯ ಸಾಧನೆ ಎಂದು ಸ್ಟೀಫ‌ನ್ಸ್‌ ಹೇಳಿದರು. ಕಳೆದ ಜನವರಿಯಲ್ಲಿ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಆದರೂ ಯುಎಸ್‌ ಓಪನ್‌ ಪ್ರಶಸ್ತಿ ಪ್ರಶಸ್ತಿ ಗೆದ್ದಿದ್ದಾರೆ ಎಂದು ಹೇಳಿದರೂ ಯಾರು ಕೂಡ ನಂಬಲಿಕ್ಕೆ ಸಾಧ್ಯವಿಲ್ಲ. ಹಾಗಾಗ ಅಸಾಮಾನ್ಯ ಸಾಧನೆಯೆಂದು ಹೇಳಬಹುದು.

Advertisement

ಪ್ರಶಸ್ತಿ ಗೆಲ್ಲುವ ದಾರಿಯಲ್ಲಿ ಸ್ಟೀಫ‌ನ್ಸ್‌ ಕೇವಲ 7 ಅನಗತ್ಯ ತಪ್ಪುಗಳನ್ನು ಮಾಡಿದರೆ ಕೇಯ್ಸ 30 ತಪ್ಪುಗಳನ್ನು ಮಾಡಿದ್ದರು. ಸ್ಟೀಫ‌ನ್ಸ್‌ 18 ವಿಜಯಿ ಹೊಡೆತ ನೀಡಿದ್ದರು.ಪ್ರಶಸ್ತಿ ಗೆಲುವಿನ ಸೆಟ್‌ನಲ್ಲಿ ಎದುರಾಳಿಗೆ ಯಾವುದೇ ಅಂಕ ನೀಡದೇ ಯುಎಸ್‌ ಓಪನ್‌ ಗೆದ್ದಿರುವುದು 1976ರ ಬಳಿಕ ಇದೇ ಮೊದಲ ಸಲವಾಗಿದೆ. 1976ರಲ್ಲಿ ಕ್ರಿಸ್‌ ಎವರ್ಟ್‌ ಅವರು ಇವೋನಿ ಗೂಲಾಗಾಂಗ್‌ ಅವರನ್ನು 6-3, 6-0 ಸೆಟ್‌ಗಳಿಂದ ಕೆಡಹಿದ್ದರು.

ನನ್ನ ಶ್ರೇಷ್ಠ ಟೆನಿಸ್‌ ಆಟ ಆಡಿಲ್ಲ. ನನಗೆ ಅತೀವ ನಿರಾಸೆಯಾಗಿದೆ. ಆದರೆ ಸ್ಲೋನ್‌ ಬಹಳಷ್ಟು ಬೆಂಬಲ ನೀಡುವ ಗೆಳತಿಯಾಗಿದ್ದಾರೆ. ಅವರ ವಿರುದ್ಧ ಸೋತಿರುವುದು ಖುಷಿ ನೀಡಿದೆ. ಅವರು ನನ್ನ ನೆಚ್ಚಿನ ಗೆಳತಿ ಎಂದು ಕೇಯ್ಸ ತಿಳಿಸಿದರು.

ಡ್ರಾ ಆಗಿದ್ದರೆ ಚೆನ್ನಾಗಿತ್ತು
ಟೆನಿಸ್‌ ರಂಗದಲ್ಲಿ ಮ್ಯಾಡಿ ನನ್ನ ಶ್ರೇಷ್ಠ ಗೆಳತಿ. ಒಂದು ವೇಳೆ ಡ್ರಾ ಆಗಲು ಸಾಧ್ಯವಾಗುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವಳಲ್ಲಿ ನಾನು ಹೇಳಿದ್ದೆ. ಏನೇ ಆದರೂ ನಾನು ಅವಳಿಗೆ ಯಾವಾಗಲೂ ಬೆಂಬಲ ನೀಡುತ್ತೇನೆ ಮತ್ತು ಅವಳೂ ನನಗೆ ಬೆಂಬಲ ನೀಡುತ್ತಾಳೆ ಎಂಬ ಭರವಸೆಯಿದೆ ಎಂದು ಸ್ಟೀಫ‌ನ್ಸ್‌ ತಿಳಿಸಿದರು.

ವಿಂಬಲ್ಡನ್‌ನಲ್ಲಿ ಆಡುವ ಮೂಲಕ ಟೆನಿಸ್‌ಗೆ ಮರಳಿದ್ದ ಸ್ಟೀಫ‌ನ್ಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 957ನೇ ಸ್ಥಾನದಲ್ಲಿದ್ದರು. ಯುಎಸ್‌ ಓಪನ್‌ನ ಪೂರ್ವಭಾವಿ ಕೂಟಗಳಾದ ಟೊರೊಂಟೊ ಮತ್ತು ಸಿನ್ಸಿನಾಟಿಯಲ್ಲಿ ಸೆಮಿಫೈನಲ್‌ ತಲುಪಿದ್ದ ಸ್ಟೀಫ‌ನ್ಸ್‌ ಈಗ ಪ್ರಶಸ್ತಿ ಗೆಲ್ಲುವ ಮೂಲಕ ಮುಂದಿನ ರ್‍ಯಾಂಕಿಂಗ್‌ನಲ್ಲಿ 17ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ರನ್ನರ್‌ ಅಪ್‌ ಪ್ರಶಸ್ತಿ ಮತ್ತು 1.825 ಡಾಲರ್‌ ನಗದು ಪಡೆದ ಕೇಯ್ನ 12ನೇ ಸ್ಥಾನಕ್ಕೇರಲಿದ್ದಾರೆ.

22ರ ಹರೆಯದ ಕೇಯ್ನ ಅಥವಾ 24ರ ಹರೆಯದ ಸ್ಟೀಫ‌ನ್ಸ್‌ ಇಷ್ಟರವರೆಗೆ ಯಾವುದೇ ಗ್ರ್ಯಾನ್‌ ಸ್ಲಾಮ ಕೂಟದ ಫೈನಲಿಗೇರಿದವರಲ್ಲ. ಕೇವಲ ಏಳನೇ ಬಾರಿ ವನಿತಾ ಗ್ರ್ಯಾನ್‌ ಸ್ಲಾಮ್‌ ಕೂಟದ ಫೈನಲ್‌ನಲ್ಲಿ ಇದೇ ಮೊದಲ ಬಾರಿ ಫೈನಲಿಗೇ ರಿದ ಆಟಗಾರ್ತಿಯರಿಬ್ಬರು ಹೋರಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next