Advertisement

ನೆಂಚಿಕೊಳ್ಳಲು ಸೈಡ್ಸ್‌ ಇದ್ಯಾ?

12:30 AM Feb 27, 2019 | |

“ಏನು ಅಡುಗೆ ಮಾಡಿದ್ದೀಯ?’ ಅಂತ ಗಂಡ-ಮಕ್ಕಳು ಕೇಳುತ್ತಿದ್ದಾರೆಂದರೆ, ಅದರ ಹಿಂದೆ, ನೆಂಚಿಕೊಳ್ಳೋಕೆ ಏನಿದೆ ಎಂಬ ಇನ್ನೊಂದು ಪ್ರಶ್ನೆಯೂ ಇದೆ ಅಂತಲೇ ಅರ್ಥ. ಸಾರು-ಸಾಂಬಾರು ಏನಿರಲಿ, ಜೊತೆಗೆ ಸೈಡ್ಸ್‌ ಇರಲೇಬೇಕು. ಅದು ಚಟ್ನಿ, ಪಲ್ಯ, ಗೊಜ್ಜು, ಮಜ್ಜಿಗೆಹುಳಿ ಏನೂ ಆಗಬಹುದು. ಅಂಥ ಕೆಲವು ನೆಂಚಿಕೊಳ್ಳುವ ಐಟಂಗಳ ರೆಸಿಪಿ ಇಲ್ಲಿದೆ.

Advertisement

1. ಬೆಂಡೆಕಾಯಿ ಮೊಸರು ಪಚಡಿ
ಬೇಕಾಗುವ ಸಾಮಗ್ರಿ:
ಮೊಸರು, ಎಳೆಯ ಬೆಂಡೆಕಾಯಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಸಳು, ಇಂಗು, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಬೆಂಡೆಕಾಯಿಯನ್ನು ಸ್ವತ್ಛಗೊಳಿಸಿ, ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಸಿಡಿಸಿ, ಅದಕ್ಕೆ ಇಂಗು, ಹೆಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವಿನ ಎಸಳುಗಳ ಜೊತೆ ಹೆಚ್ಚಿದ ಬೆಂಡೆಕಾಯಿಯನ್ನು ಹಾಕಿ ಚೆನ್ನಾಗಿ ಬಾಡಿಸಿ. ಬೆಂಡೆಕಾಯಿ ಬೇಯುತ್ತಲೇ ಉಪ್ಪು ಹಾಕಿ ಬೆರೆಸಿ, ಉರಿ ಆರಿಸಿ. ಇನ್ನೊಂದು ಪಾತ್ರೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಮೊಸರು ಹಾಕಿ, ಅದಕ್ಕೆ ಬೆಂಡೆಕಾಯಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಮೊಸರಲ್ಲಿ ಬೆರೆತ ಬೆಂಡೆ ತಿನ್ನಲು ಬಲು ರುಚಿಯಾಗಿ ಇರುತ್ತದೆ. 

2. ಅವರೆಕಾಳು ಮೊಸರು ಪಚಡಿ
ಬೇಕಾಗುವ ಸಾಮಗ್ರಿ:
ಮೊಸರು, ಅವರೆಕಾಳು, ಒಣ ಮೆಣಸಿನಕಾಯಿ, ಕರಿಬೇವಿನ ಎಸಳು, ಇಂಗು, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಕುಕ್ಕರ್‌ಗೆ ಸ್ವಲ್ಪ ಉಪ್ಪು ಹಾಕಿ, ಅವರೆಕಾಳನ್ನು ಬೇಯಿಸಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಸಿಡಿಸಿ,ಇಂಗು,ಒಣ ಮೆಣಸಿನಕಾಯಿ,ಕರಿಬೇವಿನ ಎಸಳುಗಳ  ಜೊತೆ ಬೆಂದ ಅವರೆಕಾಳನ್ನು ಸ್ವಲ್ಪ ಕಿವುಚಿ, ( ಈಗಾಗಲೇ ಹಾಕಿರುವ ಉಪ್ಪ ಕಡಿಮೆ ಎನ್ನಿಸಿದಲ್ಲಿ  ಸ್ವಲ್ಪ ಉಪ್ಪು ಚಿಮುಕಿಸಿ ) ಹಾಕಿ ಐದು ನಿಮಿಷ  ಬಾಡಿಸಿ ಉರಿ ಆರಿಸಿ ತಣಿಯಲು ಬಿಡಿ. ನಂತರ ಕಡೆದ ಮೊಸರಿಗೆ ಸೇರಿಸಿ, ಹೊಂದಿಸಿ. ಅವರೆಕಾಳು ಮೊಸರು ಸವಿಯಲು ಸಿದ್ಧ. 
 
3. ಚಪ್ಪರದವರೆ ಫ್ರೈ 
ಬೇಕಾಗುವ ಸಾಮಗ್ರಿ:
ಎಳೆಯ ಚಪ್ಪರದವರೆ, ರಸಂ ಪುಡಿ/ಸಾರಿನ ಪುಡಿ, ಉದ್ದಿನಬೇಳೆ, ತೆಂಗಿನ ತುರಿ, ಇಂಗು, ಉಪ್ಪು.  

Advertisement

ಮಾಡುವ ವಿಧಾನ: ಚಪ್ಪರದವರೆಯ ಎರಡೂ ತುದಿ, ನಾರು,  ತೆಗೆದು ಚೆನ್ನಾಗಿ ತೊಳೆದು, ಮಧ್ಯಕ್ಕೆ ಸೀಳಿ ಅಣಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನಬೇಳೆ ಹಾಕಿ, ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಚಪ್ಪರದವರೆ ಕಾಯಿ ಹಾಕಿ ಒಂದೈದು ನಿಮಿಷ ಬಾಡಿಸಿ. ಅವರೆಕಾಯಿ ಅರ್ಧ ಬೆಂದ ನಂತರ, ರಸಂ ಪುಡಿ ಅಥವಾ ಸಾರಿನ ಪುಡಿ, ತೆಂಗಿನ ತುರಿ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಿ, ಬಾಣಲೆಯನ್ನು ಮುಚ್ಚಿ. ಮಿಶ್ರಣವನ್ನು ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಿಸಿ. ಅವರೆಕಾಯಿ ಬೆಂದ ನಂತರ ಮತ್ತೂಮ್ಮೆ ಕೈಯಾಡಿಸಿ, ಉರಿ ಆರಿಸಿ ತಣಿಯಲು ಬಿಟ್ಟರೆ ಘಮ್ಮೆನ್ನುವ ಚಪ್ಪರದವರೆ ಫ್ರೈ ರೆಡಿ.     
 
4. ಪುದೀನಾ, ಹೀರೆಕಾಯಿ ಸಿಪ್ಪೆ ಚಟ್ನಿ 
ಬೇಕಾಗುವ ಸಾಮಗ್ರಿ:
ಪುದೀನಾ ಎಲೆ, ಹೀರೇಕಾಯಿ ಸಿಪ್ಪೆ, ಕಡಲೆಬೇಳೆ, ಒಣ ಮೆಣಸಿನಕಾಯಿ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಇಂಗು. 

ಮಾಡುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಒಂದು ಚಮಚ ಕಡಲೆಬೇಳೆ, ನಾಲ್ಕೈದು ಒಣ ಮೆಣಸಿನಕಾಯಿ, ಸಣ್ಣ ಗಾತ್ರದ ಹುಣಸೆಹಣ್ಣು ಹಾಕಿ, ಹೊಂಬಣ್ಣ ಬರುವವರೆಗೆ ಚೆನ್ನಾಗಿ ಬಾಡಿಸಿ. ನಂತರ ಎಲ್ಲವನ್ನೂ ಒಂದು ತಟ್ಟೆಗೆ ವರ್ಗಾಯಿಸಿ, ಆರಲು ಬಿಡಿ. ಬಿಸಿಯಿರುವ ಬಾಣಲೆಯಲ್ಲಿ ಎಣ್ಣೆ ಹಾಕದೆಯೇ  ಪುದೀನಾ ಸೊಪ್ಪು ಮತ್ತು ಹೀರೆಕಾಯಿ ಸಿಪ್ಪೆಗಳನ್ನು ಬಿಡಿಬಿಡಿಯಾಗಿ ಹುರಿದುಕೊಳ್ಳಿ. ತಟ್ಟೆಯಲ್ಲಿ ತಣ್ಣಗಾದ ಬೇಳೆ ಮತ್ತು ಇತರ ಪದಾರ್ಥಗಳೊಂದಿಗೆ, ಹುರಿದ ಪುದೀನಾ ಸೊಪ್ಪು, ಹೀರೇ ಕಾಯಿ ಸಿಪ್ಪೆ, ಕಲ್ಲುಪ್ಪು ಸೇರಿಸಿ ಅರೆದರೆ ಚಟ್ನಿ ಸಿದ್ಧ. ಇದಕ್ಕೆ ಸಾಸಿವೆ ಒಗ್ಗರಣೆಯನ್ನು ಕೊಟ್ಟರೆ ರುಚಿ ಹೆಚ್ಚುತ್ತದೆ.

ಕೆ.ವಿ.ರಾಜಲಕ್ಷ್ಮಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next