Advertisement

ಒಡೆಯರ್‌ರಿಂದ ಮಂದಸ್ಮಿತನ ಮಸ್ತಕಾಭಿಷೇಕ

08:15 AM Feb 24, 2018 | Team Udayavani |

ಹಾಸನ: ಮಹಾಮಸ್ತಕಾಭಿಷೇಕದ 7ನೇ ದಿನವಾದ ಶುಕ್ರವಾರ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಶ್ರವಣಬೆಳಗೊಳದ ವಿಂಧ್ಯಗಿರಿಯನ್ನೇರಿ ವೈರಾಗ್ಯಮೂರ್ತಿಗೆ ಅಭಿಷೇಕ ನೆರವೇರಿಸಿದರು. ವಿಂಧ್ಯಗಿರಿಯ ವಿಐಪಿ ಪ್ರವೇಶ ದ್ವಾರದಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಮೆಟ್ಟಿಲುಗಳ ಮೂಲಕ ಬಾಹುಬಲಿ ಮೂರ್ತಿಯ ಸನ್ನಿಧಿಗೆ ತಲುಪಿದ ಅವರನ್ನು
ಶ್ರವಣಬೆಳಗೊಳದ ಜೈನ ಮಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿದರು. ಬಳಿಕ, ಬಾಹುಬಲಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಲು ಸಹಕರಿಸಿದರು. 

Advertisement

ನಂತರ ಕೆಲಹೊತ್ತು ವಿಂಧ್ಯಗಿರಿಯ ಮೇಲೆಯೇ ಕುಳಿತು ಜಲಾಭಿಷೇಕ ವೀಕ್ಷಣೆ ಮಾಡಿ ಅಪರೂಪದ ಸನ್ನಿವೇಶವನ್ನು
ಕಣ್ತುಂಬಿಕೊಂಡರು. ಮೆಟ್ಟಿಲುಗಳ ಮೂಲಕ ಬೆಟ್ಟ ಏರಿ-ಇಳಿದ ಯದುವೀರ ಅವರು, ತಮಗೆ ಇದೊಂದು ವಿಶೇಷ ಅನುಭವ ಎಂದು ಸಂತಸ ಹಂಚಿಕೊಂಡರು. ಬಹಳ ಹಿಂದಿನಿಂದಲೂ ಮೈಸೂರಿನ ರಾಜವಂಶ ಮತ್ತು ಶ್ರವಣಬೆಳಗೊಳ ನಡುವೆ ಅವಿನಾಭಾವ ಸಂಬಂಧ ಇದೆ. ಚಿಕ್ಕದೇವರಾಜ ಒಡೆಯರ್‌ ಶ್ರವಣಬೆಳಗೊಳದ ಕಲ್ಯಾಣಿಯನ್ನು ನಿರ್ಮಿಸಿ ಶ್ರವಣಬೆಳಗೊಳಕ್ಕೆ ಕೊಡುಗೆ ನೀಡಿದ್ದರು ಎಂದರು.

ಮೂರನೇ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌, ತಾತ ಜಯ ಚಾಮರಾಜೇಂದ್ರ ಒಡೆಯರ್‌ ಹಾಗೂ ತಮ್ಮ ತಂದೆಯವರು ಮಸ್ತಕಾಭಿಷೇಕದಲ್ಲಿ ಭಾಗಿಯಾಗಿದ್ದರು. ಆ ಸಂಬಂಧಹೀಗೆಯೇ ಮುಂದುವರಿಯಬೇಕೆಂಬ ಆಶಯದಿಂದ ತಾವೂ ಕೂಡ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದೇನೆ. ಈ ಸನ್ನಿವೇಶ ತಮಗೆ ಖುಷಿ ಕೊಟ್ಟಿದೆ ಎಂದರು.

ಪ್ರಮೋದಾದೇವಿಯವರು ಮಸ್ತಕಾಭಿಷೇಕದಲ್ಲಿ ಭಾಗಿಯಾಗುವ ವಿಚಾರವನ್ನು ತಾವು ಖಚಿತಪಡಿಸಿಕೊಂಡಿಲ್ಲ. ತಮ್ಮ ಸುಪುತ್ರನ ನಾಮಕರಣ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆ ದಿನಾಂಕವನ್ನು ಪ್ರಮೋದಾದೇವಿಯವರು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಜೈನಕಾಶಿಗೆ ನಾಳೆ ರಾಜನಾಥ್‌
ಹಾಸನ: ಕೇಂದ್ರ ಗೃಹಮಂತ್ರಿ ರಾಜನಾಥ್‌ಸಿಂಗ್‌ ಅವರು ಫೆ.25 ರಂದು ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ 88ನೇ ಮಹಾಮಸ್ತಾಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಶ್ರವಣಬೆಳಗೊಳದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು,
ಮಧ್ಯಾಹ್ನ 2 ಗಂಟೆಗೆ ಬಾಹುಬಲಿ ಮೂರ್ತಿಯ ಮಹಾಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next