ಬೆಂಗಳೂರು: ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಸೋಲದೇವನ ಹಳ್ಳಿಯ ಸಿಲ್ವೇಪುರದಲ್ಲಿ ದಾಯಾದಿಗಳ ನಡುವೆ ನಡೆದ ಜಗಳದಲ್ಲಿ 10 ತಿಂಗಳ ಬಾಣಂತಿಯೊಬ್ಬರ ಕೊಲೆಯಾಗಿದೆ. ನಿವಾಸಿ ದಿವ್ಯಜ್ಯೋತಿ (24) ಮೃತರು. ಜ್ಯೋತಿಯ ದೊಡ್ಡಪ್ಪನ ಮಗ ಬಾಲರಾಜ್, ಈತನ ಇಬ್ಬರು ಸಹೋದರಿ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಲ್ವೇಪುರ ಗ್ರಾಮದಲ್ಲಿ ದಿವ್ಯಜ್ಯೋತಿ ಮತ್ತು ಬಾಲರಾಜ್ ಅವರಿಗೆ ಪಿತ್ರಾರ್ಜಿತ ನಿವೇಶನವಿದೆ. ಇದೇ ವಿಚಾರವಾಗಿ ಎರಡು ಮನೆಯವರ ನಡುವೆ ಆಗಾಗ್ಗೆ ವಾಜ್ಯ ಉಂಟಾಗುತ್ತಿತ್ತು. ಜಗಳ ಹಲವು ಬಾರಿ ಪೊಲೀಸ್ ಠಾಣೆ ಮೇಟ್ಟಿಲೇರಿತ್ತು. ಠಾಣಾ ಮಟ್ಟದಲ್ಲೇ ಪೊಲೀಸ್ ಅಧಿಕಾರಿಗಳು ಎರಡು ಕಡೆಯವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ವಿವಾದ ಕೋರ್ಟ್ ಮೇಟ್ಟಿಲನ್ನೂ ಏರಿದೆ.
ಈ ಮಧ್ಯೆ ಜ್ಯೋತಿ ಅವರ ದೊಡ್ಡಪ್ಪನ ಮಕ್ಕಳಾದ ಬಾಲರಾಜ್ ಮತ್ತು ಇಬ್ಬರು ಸಹೋದರಿಯರು ನಿವೇಶನ ವಿಚಾರವಾಗಿ ಶನಿವಾರ ಸಂಜೆ ಜ್ಯೋತಿ ಕುಟುಂಬ ಸದಸ್ಯರ ಜತೆ ಜಗಳ ತೆಗೆದಿದ್ದಾರೆ. ಇದೇ ವೇಳೆ ಮನೆಯಲ್ಲಿದ್ದ ಜ್ಯೋತಿ ಸೋದರ ರವಿ ಹೊರಗೆ ಬಂದು ಬಾಲರಾಜ್ ಮೇಲೆ ಎರಗಿದ್ದಾನೆ. ಇದರಿಂದ ಆಕ್ರೋಶಗೊಂಡ ಬಲರಾಜ್ ಚಾಕುವಿನಿಂದ ರವಿಗೆ ಇರಿಯಲು ಯತ್ನಿಸಿದ್ದ.
ಇದನ್ನು ತಡೆಯಲು ಹೋದ ಜ್ಯೋತಿಗೆ ಆರೋಪಿ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾನೆ. ಹೊಡೆತದಿಂದಾಗಿ ಜ್ಯೋತಿಯ ಕಿವಿ ಮತ್ತು ಮೂಗಿನಿಂದ ರಕ್ತ ಬಂದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಘಟನೆ ಸಂಬಂಧ ಜ್ಯೋತಿ ಅವರ ಸಹೋದರ ರವಿ ದೂರು ನೀಡಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಸೋಲದೇವನ ಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
10 ತಿಂಗಳ ಮಗು ಅನಾಥ: ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಜ್ಯೋತಿಗೆ 10 ತಿಂಗಳ ಮಗು ಇದೆ. ಈಕೆಯ ಸಾವಿನ ನಂತರ ಮಗುವಿನ ಪಾಲನೆ ಮಾಡುವರೇ ಇಲ್ಲವಾಗಿದ್ದು, ಮಗು ಅನಾಥವಾಗಿದೆ. ಜ್ಯೋತಿ ಅವರನ್ನು ಕಳೆದುಕೊಂಡ ಕುಟುಂಬದ ರೋಧನ ಮುಗಿಲು ಮುಟ್ಟಿತ್ತು.