ಸೇಡಂ: ದೇಶವನ್ನು ಕಾಯುವ ಯೋಧರ ಮೇಲಾಗಿರುವ ಉಗ್ರರ ದಾಳಿ ಖಂಡನೀಯವಾಗಿದ್ದು, ಯೋಧರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲೇಬೇಕು. ಕೇಂದ್ರ ಸರ್ಕಾರ ಕೂಡಲೇ ದಿಟ್ಟ ಹೆಜ್ಜೆಯನ್ನಿಟ್ಟು ಉಗ್ರರಿಗೆ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಬೆಳಗಿನ ಜಾವ ಜಮ್ಮು-ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ನಡೆದ ಯೋಧರ ಮೇಲಿನ ದಾಳಿಯನ್ನು ಖಂಡಿಸಿ ಮಾತನಾಡಿದರು.
ಇದೊಂದು ದೊಡ್ಡ ದುರಂತವಾಗಿದ್ದು, ಉಗ್ರರ ಸಂಚಿನ ಬಗ್ಗೆ ಮೊದಲೇ ಗುಪ್ತಚರ ಇಲಾಖೆಗೆ ಮಾಹಿತಿ ಇರಬೇಕಾಗಿತ್ತು. ಯಾವುದೇ ಕಾರಣಕ್ಕೂ ಹಿಂಜರಿಯದೆ ಉಗ್ರರನ್ನು ಸದೆಬಡೆಯಬೇಕು ಎಂದರು.
ಯುವ ಬ್ರಿಗೇಡ್: ಯುವ ಬ್ರಿಗೇಡ್ ವತಿಯಿಂದ ಕ್ಯಾಂಡಲ್ ಮಾರ್ಚ್ ನಡೆಸಿ, ಮೃತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲದೇ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ) ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಸಹಾಯಕ ಆಯುಕ್ತರ ಮುಖಾಂತರ ಪ್ರಧಾನಿ ಮೋದಿಗೆ ಪತ್ರ ಬರೆದು, ಪಾಕಿಸ್ತಾನದಲ್ಲಿರುವ ಉಗ್ರವಾದಿಗಳ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ದಿನೇ ದಿನೇ ಭಾರತವನ್ನು ಕೆಣಕುತ್ತಿರುವ ಹೇಡಿ ರಾಷ್ಟ್ರದ ವಿರುದ್ಧ ನೇರ ದಾಳಿಗೆ ಭಾರತ ಸಜ್ಜಾಗಬೇಕು. ಉಗ್ರರನ್ನು ಬುಡದಿಂದ ಕಿತ್ತೆಸೆಯಬೇಕು ಎಂದು ಆಗ್ರಹಿಸಿದ್ದಾರೆ.
ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಆವರಣದ ಬಾರ್ ಅಸೋಸಿಯೇಷನ್ ಕಟ್ಟಡದಲ್ಲಿ ಮೃತರ ಯೋಧರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅನಂತಯ್ಯ ಮುಸ್ತಾಜರ್, ಅಶೋಕ ಬಂದಗಿ, ರಮೇಶ ಇಂಜಳ್ಳಿಕರ್, ಸಂಜೀವಕುಮಾರ ಪಾಟೀಲ, ವಸಂತ ಪೂಜಾರಿ, ವಿಭಾಕರ ಪಾಟೀಲ, ರಾಘವೇಂದ್ರ ಮುಸ್ತಾಜರ ಹಾಗೂ ಇನ್ನಿತರರು ಇದ್ದರು.
ಮೋದಿ ಪ್ರತ್ಯುತ್ತರ ನೀಡುವ ನಿರೀಕ್ಷೆ ಇಂತಹ ದೊಡ್ಡ ದುರಂತ ನಡೆಯಬಾರದಿತ್ತು. ಯೋಧರನ್ನು ಕಳೆದುಕೊಂಡು ದೇಶಕ್ಕೆ ಅತೀವ ನಷ್ಟವಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಲೇಬೇಕು. ಪ್ರಧಾನಿ ಮೋದಿ ಕಠಿಣ ನಿರ್ಧಾರ ಕೈಗೊಂಡು ಪ್ರತ್ಯುತ್ತರ ನೀಡುವ ವಿಶ್ವಾಸವಿದೆ. ದೇವರು ಹುತಾತ್ಮ ಯೋಧರ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ನೀಡಲಿ.
ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ, ಸೇಡಂ