Advertisement

ಪಾಕ್‌ ಪತನ: ಲಂಕಾ ಮುಡಿಗೆ ಏಷ್ಯಾ ಕಪ್ ಕಿರೀಟ

11:37 PM Sep 11, 2022 | Team Udayavani |

ದುಬಾೖ: ಪಾಕಿಸ್ಥಾನವನ್ನು 23 ರನ್ನುಗಳಿಂದ ಬಗ್ಗುಬಡಿದ ಶ್ರೀಲಂಕಾ 6ನೇ ಸಲ ಏಷ್ಯಾ ಕಪ್‌ ಕಿರೀಟ ಏರಿಸಿಕೊಂಡಿದೆ.

Advertisement

ರವಿವಾರದ ಫೈನಲ್‌ನಲ್ಲಿ ತೀವ್ರ ಆರಂಭಿಕ ಕುಸಿತಕ್ಕೆ ಸಿಲುಕಿದರೂ ಭನುಕ ರಾಜಪಕ್ಸ ಅವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಲಂಕಾ 6 ವಿಕೆಟ್‌ ನಷ್ಟಕ್ಕೆ 170 ರನ್‌ ಪೇರಿಸಿತು. ಜವಾಬಿತ್ತ ಪಾಕಿಸ್ಥಾನ ಭರ್ತಿ 20 ಓವರ್‌ಗಳಲ್ಲಿ 147 ರನ್ನಿಗೆ ಸರ್ವಪತನ ಕಂಡಿತು.

ಚೇಸಿಂಗ್‌ ವೇಳೆ ಪ್ರಮೋದ್‌ ಮದು ಶನ್‌ (4 ವಿಕೆಟ್‌) ಮತ್ತು ವನಿಂದು ಹಸರಂಗ (3 ವಿಕೆಟ್‌) ಪಾಕಿಸ್ಥಾನವನ್ನು ತೀವ್ರವಾಗಿ ಕಾಡಿದರು. ಆರಂಭಕಾರ ಮೊಹಮ್ಮದ್‌ ರಿಜ್ವಾನ್‌ 55 ರನ್‌ ಹೊಡೆದರೂ ಉಳಿದವರಿಂದ ಲಂಕಾ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ.

ರಾಜಪಕ್ಸ ಅರ್ಧ ಶತಕ
ಭನುಕ ರಾಜಪಕ್ಸ-ವನಿಂದು ಹಸರಂಗ 6ನೇ ವಿಕೆಟಿಗೆ ಜತೆಗೂಡಿದ ಬಳಿಕವೇ ಶ್ರೀಲಂಕಾ ಚೇತರಿಕೆ ಕಂಡದ್ದು. ಈ ಜೋಡಿಯಿಂದ 36 ಎಸೆತಗಳಿಂದ 58 ರನ್‌ ಹರಿದು ಬಂತು. 21 ಎಸೆತಗಳಿಂದ 36 ರನ್‌ ಸಿಡಿಸಿದ ಹಸರಂಗ ಅವರನ್ನು ಔಟ್‌ ಮಾಡುವ ಮೂಲಕ ರವೂಫ್ ಈ ಜೋಡಿಯನ್ನು ಬೇರ್ಪಡಿಸಿದರು.

ತಂಡ ತೀರಾ ಸಂಕಷ್ಟದಲ್ಲಿದ್ದಾಗ ನೆರವಿಗೆ ನಿಂತ ಭನುಕ ರಾಜಪಕ್ಸ ಅರ್ಧ ಶತಕ ಬಾರಿಸಿ ಪಾಕಿಸ್ಥಾನದ ಸಂಪೂರ್ಣ ಮೇಲುಗೈಗೆ ತಡೆಯೊಡ್ಡಿದರು. ಈ ಹಂತದಲ್ಲಿ ಪಾಕ್‌ ಕ್ಷೇತರ್ರರಕ್ಷಣೆ ಕೂಡ ಕಳಪೆಯಾಗಿ ಕಂಡಿತು. ರಾಜಪಕ್ಸ 45 ಎಸೆತಗಳಿಂದ ಅಜೇಯ 71 ರನ್‌ ಬಾರಿಸಿದರು. ಸಿಡಿಸಿದ್ದು 6 ಫೋರ್‌, 3 ಸಿಕ್ಸರ್‌.

Advertisement

ಆರಂಭದಲ್ಲೇ ಪಾಕ್‌ ಘಾತಕ
ನಸೀಮ್‌ ಶಾ ಮೊದಲ ಓವರ್‌ನಲ್ಲೇ ಶ್ರೀಲಂಕಾಕ್ಕೆ ಬಲವಾದ ಆಘಾತ ವಿಕ್ಕಿದರು. ಕುಸಲ್‌ ಮೆಂಡಿಸ್‌ “ಗೋಲ್ಡನ್‌ ಡಕ್‌’ ಅವಮಾನಕ್ಕೆ ಸಿಲುಕಿದರು. ಅಷ್ಟೇ ಅಲ್ಲ, ಟಿ20ಯಲ್ಲಿ 26 ಸೊನ್ನೆ ಸುತ್ತಿ ದ್ವಿತೀಯ ಸ್ಥಾನಕ್ಕೂ ಏರಿಬಂದರು. 27 ಸಲ ಖಾತೆ ತೆರೆಯದ ಜಾನಿ ಬೇರ್‌ಸ್ಟೊ ಅಗ್ರಸ್ಥಾನದಲ್ಲಿದ್ದಾರೆ.

ಪಾಕಿಸ್ಥಾನಕ್ಕೆ ದ್ವಿತೀಯ ಯಶಸ್ಸು ತಂದಿ ತ್ತವರು ಹ್ಯಾರಿಸ್‌ ರವೂಫ್. ಉತ್ತಮ ಫಾರ್ಮ್ನಲ್ಲಿದ್ದ ಪಥುಮ್‌ ನಿಸ್ಸಂಕ (8) ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಅಲ್ಲಿಗೆ ಲಂಕಾ ಆರಂಭಿಕರಿಬ್ಬರೂ 23 ರನ್‌ ಆಗುವಷ್ಟರಲ್ಲಿ ಆಟ ಮುಗಿಸಿ ವಾಪಸಾದಂತಾಯಿತು.

ಮಧ್ಯಮ ಕ್ರಮಾಂಕದ ಬ್ಯಾಟರ್‌ ದನುಷ್ಕ ಗುಣತಿಲಕ ಅವರ ಆಟ ವನ್ನು ಹ್ಯಾರಿಸ್‌ ರವೂಫ್ ಒಂದೇ ರನ್ನಿಗೆ ಮುಗಿಸಿದರು. 36ಕ್ಕೆ 3 ವಿಕೆಟ್‌ ಕಳೆದುಕೊಂಡ ಲಂಕೆ ಚಡಪಡಿಸ ತೊಡಗಿತು. ಪವರ್‌ ಪ್ಲೇ ಮುಕ್ತಾಯಕ್ಕೆ ಲಂಕಾ ಸ್ಕೋರ್‌ 3ಕ್ಕೆ 42 ರನ್‌ ಆಗಿತ್ತು.

ಧನಂಜಯ ಡಿಸಿಲ್ವ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರೂ ಇದಕ್ಕೆ ಆಫ್ಸ್ಪಿನ್ನರ್‌ ಇಫ್ತಿಕಾರ್‌ ಅಹ್ಮದ್‌ ಅವಕಾಶ ಕೊಡಲಿಲ್ಲ. ತಮ್ಮ ಮೊದಲ ಓವರ್‌ನಲ್ಲೇ ಕಾಟ್‌ ಆ್ಯಂಡ್‌ ಬೌಲ್ಡ್‌ ಮೂಲಕ ಈ ಮಹತ್ವದ ವಿಕೆಟ್‌ ಹಾರಿ ಸಿದರು. ಡಿಸಿಲ್ವ ಗಳಿಕೆ 21 ಎಸೆತಗಳಿಂದ 28 ರನ್‌ (4 ಬೌಂಡರಿ). 53 ರನ್ನಿಗೆ ಲಂಕೆಯ 4 ವಿಕೆಟ್‌ ಉರುಳಿತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-6 ವಿಕೆಟಿಗೆ 170 (ರಾಜಪಕ್ಸ ಔಟಾಗದೆ 71, ಹಸರಂಗ 36, ಧನಂಜಯ 28, ರವೂಫ್ 29ಕ್ಕೆ 3). ಪಾಕಿಸ್ಥಾನ-20 ಓವರ್‌ಗಳಲ್ಲಿ 147 (ರಿಜ್ವಾನ್‌ 55, ಇಫ್ತಿಕಾರ್‌ 32, ಮದುಶನ್‌ 34ಕ್ಕೆ 4, ಹಸರಂಗ 27ಕ್ಕೆ 3, ಕರುಣಾರತ್ನೆ 33ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next