ಮುಂಬಯಿ, ಜು. 16: ಬಹು ನಿರೀಕ್ಷಿತ ಮುಂಬಯಿ ಮೆಟ್ರೋ ಯೋಜನೆಯ 9 ನಿಲ್ದಾಣಗಳನ್ನು ಸ್ಕೈವಾಕ್‌ಗೆ ಸಂಪರ್ಕಿಸುವ ಯೋ ಜನೆಗೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಮುಂದಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಒಂದು ನಿಲ್ದಾಣದಿಂದ ಮತ್ತೂಂದು ನಿಲ್ದಾಣಕ್ಕೆ ಸುಲಭವಾಗಿ ತಲುಪಲು ಈ ಸ್ಕೈವಾಕ್‌ಗಳು ಸಹಾಯಕವಾಗಿರಲಿದೆ. ಮೆಟ್ರೊ -1ರ ಡಿಎನ್ ನಗರ ನಿಲ್ದಾಣ ಮತ್ತು ಮೆಟ್ರೋ -2ಎ, ಮೆಟ್ರೋ -2ಎ ಕಾರಿಡಾರ್‌ನ ಶಾಸ್ತ್ರಿ ನಗರ ನಿಲ್ದಾಣ ಮತ್ತು ಮೆಟ್ರೋ -6 ಕಾರಿಡಾರ್‌ನ ಆದರ್ಶ್ ನಗರ ನಿಲ್ದಾಣದ ನಡುವೆ ಎಂಎಂಆರ್ ಡಿಎ ಸ್ಕೈವಾಕ್ ನಿರ್ಮಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೆಟ್ರೋ -7ರ ಅಂಧೇರಿ (ಪೂರ್ವ) ಮತ್ತು ಮೆಟ್ರೊ -1 ರ ಡಬ್ಲ್ಯುಇಎಚ್ ನಿಲ್ದಾಣ, ಮೆಟ್ರೋ -6ರ ಜೆವಿಎಲ್ ಆರ್ ನಿಲ್ದಾಣ ಮತ್ತು ಮೆಟ್ರೋ -7 ಅನ್ನು ಸ್ಕೈವಾಕ್ ಗೆ ಸಂಪರ್ಕಿಸಲಾಗುವುದು. ಮೊನೊ ರೈಲಿನ ಪ್ರಯಾಣಿಕರನ್ನು ಸುಲಭವಾಗಿ ಮೆಟ್ರೋ ನಿಲ್ದಾಣಕ್ಕೆ ಕರೆತರಲು ಸಹ ಯೋಜಿಸಲಾಗಿದೆ. ಇದರ ಅಡಿಯಲ್ಲಿ ಮೆಟ್ರೊ -2ಬಿ ಯ ಚೆಂಬೂರ್ ನಿಲ್ದಾಣ ಮತ್ತು ಮೊನೊದ ಆರ್‌ಸಿ ಮಾರ್ಗ ನಿಲ್ದಾಣವನ್ನು ಸೇತುವೆಯ ಮೂಲಕ ಸಂಪರ್ಕಿಸಲಾಗುವುದು. ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾಧಿಕಾರವು ಟೆಂಡರ್ ಘೋಷಿಸಿದೆ.
300 ಕಿ.ಮೀ. ಉದ್ದದ ಮೆಟ್ರೋ ನೆಟ್‌ವರ್ಕ್ : ಎಂಎಂಆರ್‌ಡಿಎ ಮುಂಬಯಿ
ಮೆಟ್ರೋ ಪಾಲಿಟನ್ ಪ್ರದೇಶದ 13 ಮೆಟ್ರೋ ಕಾರಿಡಾರ್‌ಗಳ ಯೋಜನೆಗಳನ್ನು ರೂಪಿಸುತ್ತಿದೆ. ಇದರ ಅಡಿಯಲ್ಲಿ 300 ಕಿ.ಮೀ. ಗಿಂತ ಹೆಚ್ಚು ಪ್ರದೇಶದಲ್ಲಿ ಮೆಟ್ರೋ ನೆಟ್‌ವರ್ಕ್ ಹಾಕಲಾಗುವುದು. ಪ್ರಯಾಣಿಕರನ್ನು ಮೆಟ್ರೊದಿಂದ ಸ್ಥಳೀಯ ರೈಲು, ಮೊನೊ ರೈಲು ಅಥವಾ ಮೆಟ್ರೋದ ಇತರ ಕಾರಿಡಾರ್ ನಿಲ್ದಾಣಗಳಿಗೆ ಕರೆದೊಯ್ಯಲು ಅನೇಕ ನಿಲ್ದಾಣಗಳಲ್ಲಿ ಇಂಟರ್ ಚೇಂಜ್ ಸೌಲಭ್ಯ ಲಭ್ಯವಿರುತ್ತದೆ. ಪ್ರಾಧಿಕಾರದ ಪ್ರಕಾರ, ಮೆಟ್ರೊ ಎಲ್ಲ ಕಾರಿಡಾರ್ ಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಮೆಟ್ರೊ ಮೂಲಕ ಪ್ರಯಾಣಿಸುತ್ತಾರೆ ಎನ್ನಲಾಗಿದೆ.
ಯೋಜನೆಗಾಗಿ ಟೆಂಡರ್ ಪ್ರಕ್ರಿಯೆ : ಆಸಕ್ತ ಅರ್ಜಿದಾರರು ಜುಲೈ 29ರ ವರೆಗೆ ಅರ್ಜಿ ಸಲ್ಲಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ವಿವಿಧ ಮೆಟ್ರೋ ಕಾರಿಡಾರ್ ಗಳು ಮತ್ತು ಇಂಟರ್ಚೇಂಜ್ ಸೌಲಭ್ಯಕ್ಕಾಗಿ ಆಯ್ಕೆ ಮಾಡಲಾದ ನಿಲ್ದಾಣಗಳ ಮಾಹಿತಿಯನ್ನು ಎಂಎಂಆರ್‌ಡಿಎ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಅರ್ಜಿದಾರರ ಪ್ರಶ್ನೆಗಳಿಗೆ ಉತ್ತರಿಸಲು ಜುಲೈ 14ರಂದು ಪೂರ್ವ ಬಿಡ್ಡಿಂಗ್ ಸಭೆಯನ್ನು ಆನ್‌ಲೈನ್‌ನಲ್ಲಿ ಆಯೋಜಿಸಲಾಗಿದೆ. ಅರ್ಹರಿಗೆ ಜುಲೈ 31ರಂದು ಟೆಂಡರ್ ನೀಡಲಾಗುವುದು.