ಬಾರ್ಬಡೋಸ್: ಆಂಟಿಗುವಾದ ಕೂಲಿಡ್ಜ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ ಅಂಡರ್-19 ಏಕದಿನ ವಿಶ್ವಕಪ್ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 96 ರನ್ ಗಳ ಭರ್ಜರಿ ಜಯಗಳಿಸಿ ಫೈನಲ್ ಪ್ರವೇಶಿಸಿದೆ. ಫೈನಲ್ ನಲ್ಲಿ ಇಂಗ್ಲೆಂಡ್ ತಂಡ ದೊಂದಿಗೆ ಹಣಾಹಣಿ ನಡೆಸಲಿದೆ.
ಭಾರತ ತಂಡದ ನಾಯಕ-ಉಪನಾಯಕ ಜೋಡಿಯಾದ ಯಶ್ ಧುಲ್ ಮತ್ತು ಶೇಕ್ ರಶೀದ್ ಅಮೋಘ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾವನ್ನು ಸ್ಪರ್ಧೆಯಿಂದ ಹೊರ ಹೋಗುವಂತೆ ಮಾಡಿದರು.
13 ಓವರ್‌ಗಳಲ್ಲಿ ಕೇವಲ 37 ರನ್ ಆಗುವಷ್ಟರಲ್ಲಿ ಆರಂಭಿಕರಾದ ರಘುವಂಶಿ (6) ಮತ್ತು ಹರ್ನೂರ್ ಸಿಂಗ್ (16) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಭಾರತವನ್ನು ರಶೀದ್-ಧುಲ್ ಜೋಡಿ ಸೇರಿಕೊಂಡು ಮೇಲೆತ್ತಿತು. ಯಶ್ ಧುಲ್ ಅಮೋಘ ಶತಕ ಸಿಡಿಸಿದರು (110) ಹಾಗೂ ಉಪನಾಯಕ ಶೇಖ್ ರಶೀದ್ ಅವರ 94 ರನ್ ಸಾಹಸದಿಂದ ಭಾರತ 5 ವಿಕೆಟಿಗೆ 290 ರನ್ ಪೇರಿಸಿತು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯವನ್ನು 41.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಮಾಡಲು ಭಾರತದ ಬೌಲರ್‌ಗಳು ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಲಚ್ಲಾನ್ ಶಾ ಅವರ 51 ಆಸ್ಟ್ರೇಲಿಯದ ಗರಿಷ್ಟ ಸ್ಕೋರ್ ಆಗಿತ್ತು.
ಭಾರತದ ಅಂಡರ್ 19 ನ ಸತತ ನಾಲ್ಕನೇ ಫೈನಲ್ ಪ್ರವೇಶ ಇದಾಗಿದೆ.
ಫೆಬ್ರವರಿ 05 ರಂದು ಇಂಗ್ಲೆಂಡ್ ಎದುರು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್ ನ ಲ್ಲಿ ಭಾರತ ಫೈನಲ್ ಹಣಾಹಣಿ ನಡೆಸಲಿದೆ.
ಸೆಮಿ-ಫೈನಲ್ ಸ್ಕೋರ್:
ಭಾರತ ಅಂಡರ್ 19- 290/5 (50)
ಆಸ್ಟ್ರೇಲಿಯಾ ಅಂಡರ್- 194/10 (41.5)