Advertisement

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ

11:58 PM Nov 02, 2019 | Lakshmi GovindaRaju |

ಬೆಂಗಳೂರು: ನಿರುದ್ಯೋಗಿ ಯುವಕ/ ಯುವತಿಯರು, ಶಾಲಾ- ಕಾಲೇಜುಗಳಿಂದ ಹೊರಗುಳಿದವರು, ಎಂಜಿನಿಯರಿಂಗ್‌ ಹಾಗೂ ಇತರೆ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಕೌಶಲ್ಯ ತರಬೇತಿ ಸೌಲಭ್ಯ ಕಲ್ಪಿಸಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಿದ್ಯಾವಂತ ಯುವಕ/ ಯುವತಿಯರು ಹಾಗೂ ಶಾಲಾ- ಕಾಲೇಜು ಶಿಕ್ಷಣದಿಂದ ಹೊರಗುಳಿದವರು ಕೌಶಲ್ಯ ತರಬೇತಿ ಪಡೆದು ಉದ್ಯೋಗ ಪಡೆಯಲು ಅನುಕುಲವಾಗುವಂತೆ ಉದ್ಯೋಗ ಕೇಂದ್ರಿತವಾಗಿ ಯೋಜನೆ ಜಾರಿಯಾಗಿದ್ದು, ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ತ್ವರಿತ ತಾಂತ್ರಿಕ ಹಾಗೂ ಯಾಂತ್ರಿಕತೆಯ ಬದಲಾವಣೆಯಿಂದಾಗಿ ಉದ್ಯೋಗ ಕಡಿತ ಹೆಚ್ಚಾಗುತ್ತಿದೆ. ಮುಂದೆ “ರೋಬೋಟಿಕ್ಸ್‌’ ಹಾಗೂ ‘ಆರ್ಟಿಫಿಶಿಯೆಲ್‌ ಇಂಟೆಲಿಜೆನ್ಸ್‌’ನಂತಹ ಸುಧಾರಿತ ತಂತ್ರಜ್ಞಾನಗಳು ನಿರ್ವಹಿಸಿದ ಕೆಲಸಗಳನ್ನು ಮಾನವ ಸಂಪನ್ಮೂಲ ನಿರ್ವಹಿಸುವ ರೀತಿಯಲ್ಲಿ ಕೌಲಶ್ಯ ಕಲ್ಪಿಸಬೇಕಿದೆ ಎಂದು ಹೇಳಿದರು.

ವಿಶ್ವ ಬ್ಯಾಂಕ್‌ನ ಪ್ರಕಾರ ವರ್ಷದಿಂದ ವರ್ಷಕ್ಕೆ ಯಾಂತ್ರಿಕತೆಯ ಬೆಳವಣಿಗೆಯಿಂದ ಕೆಲಸ ಕಳೆದುಕೊಳ್ಳುವ ಸಂಭವ ಪ್ರಮಾಣ ಶೇ.69ರಷ್ಟಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದು, ಈ ಯುವಜನತೆ ಕೌಶಲ್ಯ ತರಬೇತಿ ಪಡೆದರೆ ಸುಸ್ಥಿರ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. ಮುಂದಿನ ಐದು ವರ್ಷಗಳ್ಲಲಿ ಹೊಸ ತಾಂತ್ರಿಕತೆಗಳ ಆವಿಷ್ಕಾರಕ್ಕೆ ಹೊಂದಿಕೊಳ್ಳಲು ನ್ಯಾಸ್ಕಾಂನ ಒಂದು ವರದಿ ಪ್ರಕಾರ ಶೇ.40ರಷ್ಟು ಅಭ್ಯರ್ಥಿಗಳಿಗೆ ಕೌಶಲ್ಯತೆಯ ಅಗತ್ಯವಿದೆ ಎಂದು ಅಂದಾಜಿಸಿದೆ ಎಂದು ಮಾಹಿತಿ ನೀಡಿದರು.

ದೇಶದ ಒಟ್ಟು ಮಾನವ ಸಂಪನ್ಮೂಲ 50 ಕೋಟಿಯಷ್ಟಿದ್ದು, ಈ ಪೈಕಿ 20 ಕೋಟಿ ಮಾನವ ಸಂಪನ್ಮೂಲಕ್ಕೆ ಮರು ಕೌಶಲ್ಯ ಕಲ್ಪಿಸದಬೇಕಾದ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಅದರಂತೆ ಕೇಂದ್ರ ಸರ್ಕಾರವು “ಎಂಎಸ್‌ಡಿಇ’ ಮಂತ್ರಾಲಯ ಎಲ್ಲ ಜಿಲ್ಲೆಗಳಲ್ಲಿ ಮಾದರಿ ತರಬೇತಿ ಕೇಂದ್ರಗಳನ್ನು ಪಿಎಂಕೆಕೆ ಹೆಸರಿನಲ್ಲಿ ಸ್ಥಾಪಿಸಿದ್ದು, ಅಲ್ಪಾವಧಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಎಂದು ಹೇಳಿದರು.

Advertisement

ಫ‌ಲಾನುಭವಿಗಳಿಗೆ ತರಬೇತಿ ಉಚಿತವಾಗಿದ್ದು, ಆ ವೆಚ್ಚವನ್ನು ಕೇಂದ್ರ ಸರ್ಕಾರ ರೂಮನ್‌ ಸಂಸ್ಥೆಗೆ ಭರಿಸಲಿದೆ. ತರಬೇತಿ ಅವಧಿಯಲ್ಲಿ ಪ್ರತಿ ಅಭ್ಯರ್ಥಿಗೆ 2 ಲಕ್ಷ ರೂ.ವರೆಗೆ ಅಪಘಾತ ವಿಮೆ ಕಲ್ಪಿಸಲಾಗುತ್ತದೆ. ಕೇವಲ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ ನೀಡಿ ತರಬೇತಿ ಪಡೆಯಬಹುದು. ಸಂಸ್ಥೆಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾವೇರಿ, ರಾಮನಗರ, ಬೆಳಗಾವಿ, ಕೋಲಾರ, ನೆಲಮಂಗಲ, ಶಿವಮೊಗ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಉಡುಪಿಯಲ್ಲಿ ತರಬೇತಿ ನೀಡಲಿದೆ. ತರಬೇತಿ ಪಡೆಯಲಿಚ್ಛಿಸುವವರು 70220 20000 ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ತಿಳಿಸಿದರು.

ರೂಮನ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನೀಶ್‌ ಕುಮಾರ್‌, ತರಬೇತಿ ಪಡೆಯಬಯಸುವವರಿಗೆ ಶೇ.90ರಷ್ಟು ಹಾಜರಾತಿ ಕಡ್ಡಾಯ. ಇದರಿಂದ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದ್ದು, ಅಂತಹವರಿಗೆ ತ್ವರಿತವಾಗಿ ಉದ್ಯೋಗಾವಕಾಶಗಳು ಸಿಗಲಿವೆ. ಮರು ಕೌಶಲ್ಯ ವೃದ್ಧಿ ಬಯಸುವವರಿಗೆ ಏಳು ದಿನಗಳ ವಿಶೇಷ ತರಬೇತಿ ನೀಡಲಾಗುವುದು. ಮೂರು ತಿಂಗಳ ತರಬೇತಿ ಅವಧಿಯಲ್ಲಿ ಕೇಂದ್ರ ಸರ್ಕಾರವು ಮಾಸಿಕ 1,500 ರೂ.ನಿಂದ 2,500 ರೂ.ವವರೆಗೆ ಪ್ರೋತ್ಸಾಹ ಧನ ಹಾಗೂ ಸಂಸ್ಥೆಯು ಮಾಸಿಕ 500 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದು ಹೇಳಿದರು.

ತರಬೇತಿಗಾಗಿ ನೋಂದಣಿ ಮಾಡಿಕೊಳ್ಳಬಹುದಾದ ವೆಬ್‌ಸೈಟ್‌: www.rooman.com/pmkvy/

Advertisement

Udayavani is now on Telegram. Click here to join our channel and stay updated with the latest news.

Next