ಮೈಸೂರು: ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಹೊಸ ಉದ್ಯಮಿಗಳಿಗೆ ಕೌಶಲ್ಯಾಭಿವೃದ್ಧಿ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸ್ಕಿಲ್ ಆನ್ ವ್ಹೀಲ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಕೌಶಲಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗ್ಡೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಯಮ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡುವ ಉದ್ಯಮಿಗಳು ಹಾಗೂ ಹೊಸ ಆಲೋಚನೆ ಹೊಂದಿರುವ ಆಸಕ್ತಿ ಹೊಂದಿರುವರಿಗೆ ಅಗತ್ಯವಿರುವ ಮಾಹಿತಿ, ಮಾಗದರ್ಶನ ನೀಡುವ ನಿಟ್ಟಿನಲ್ಲಿ ಸ್ಕಿಲ್ ಆನ್ ವ್ಹೀಲ್ಸ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು, ಉದ್ಯಮ ಕ್ಷೇತ್ರದ ಬಗ್ಗೆ ಆಸಕ್ತಿ ತೋರುವವರಿಗೆ ಎಲ್ಲಾ ರಂಗಗಳಿಗೆ ಅಗತ್ಯವಿರುವ ಮಾಹಿತಿ, ಮಾರ್ಗದರ್ಶನ ನೀಡುವ ಜತೆಗೆ ಅಗತ್ಯ ತರಬೇತಿ ನೀಡಲಾಗುವುದು ಎಂದು ಹೇಳಿದರು.
100 ಕಡೆ ಆಯೋಜನೆ: ರಾಜ್ಯದಲ್ಲಿ 100 ಕಡೆ ಸ್ಕಿಲ್ ಆನ್ ವ್ಹೀಲ್ಸ್ ನಡೆಸುವ ಮೂಲಕ ಕೌಶಲ್ಯ ತರಬೇತಿ ನೀಡುವ ಜತೆಗೆ ನಮ್ಮ ಮಂತ್ರಾಲಯ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಜನರಿಗೆ ತಿಳಿಸಲಾಗುವುದು. ಕೈಗಾರಿಕೆ, ನವಯುಗದ ತಂತ್ರಜಾnನ, ಉದ್ಯಮಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುವುದು. ಇದರೊಂದಿಗೆ ಸಾಂಪ್ರದಾಯಿಕ ಉದ್ಯೋಗಸ್ಥರನ್ನು ಗುರುತಿಸಿ, ಪ್ರಮಾಣಪತ್ರ ನೀಡಲಾಗುವುದು. ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಗಳು ಹೇಗೆ ಕೆಲಸ ಮಾಡಲಿದೆ ಎಂಬ ಬಗ್ಗೆಯೂ ಮಾಹಿತಿ ನೀಡಲಿದ್ದು, ಇದರ ಮೊದಲ ಪ್ರಯತ್ನ ಮೈಸೂರಿನಿಂದ ಆರಂಭವಾಗಿದೆ ಎಂದರು.
ಅಪ್ರಂಟಿಸ್‌ಗೆ ಆದ್ಯತೆ: ದೇಶದಲ್ಲಿ 1.96 ಕೋಟಿ ಮಂದಿಗೆ ತರಬೇತಿ ನೀಡುವ ಅಗತ್ಯವಿದ್ದು, ಈವರೆಗೂ 1.5 ಕೋಟಿ ಜನರಿಗೆ ತರಬೇತಿ ನೀಡಲಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ಸಂಕಲ್ಪ ಯೋಜನೆಯಡಿ ಐಟಿಐ, ಪಾಲಿಟೆಕ್ನಿಕ್ ಉತ್ತೇಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ಅಪ್ರಂಟಿಸ್ ತರಬೇತಿಗೆ ಒತ್ತು ನೀಡಲಿದ್ದು, ಇದಕ್ಕಾಗಿ ಅಂತಾರಾಷ್ಟ್ರೀಯ ಕೌಶಲ್ಯ ತರಬೇತಿಗೆ ಪೂರಕ ವ್ಯವಸ್ಥೆ ಕಲ್ಪಿಸಲಿದ್ದೇವೆ.
ರಾಜ್ಯದಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆರಂಭಿಸಲು ಅಗತ್ಯ ಸ್ಥಳ ನೀಡಿದರೆ ಶೀಘ್ರ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು. ದೇಶದ 545 ಕ್ಷೇತ್ರಗಳಲ್ಲಿ ಕೌಶಲ್ಯ ಕೇಂದ್ರ ಆರಂಭಿಸಬೇಕಿತ್ತು. ಆದರೆ ಈವರೆಗೆ 282 ಕ್ಷೇತ್ರಗಳಲ್ಲಿ ತೆರೆಯಲಾಗಿದ್ದು, ಮುಂದಿನ 2018ರ ಅಂತ್ಯದೊಳಗೆ ದೇಶದ ಎಲ್ಲಾ ಕಡೆ ಕೌಶಲ್ಯ ಕೇಂದ್ರಗಳನ್ನು ಆರಂಭಿಸಲು ವೇಗ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಹೊಸ ಉದ್ಯಮಿಗಳು, ಹೊಸ ಆಲೋಚನೆಗಳನ್ನು ಹೊಂದಿರುವವರೊಂದಿಗೆ ಸಚಿವರು ಸಭೆ ನಡೆಸಿ, ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಿದರು. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಜಿಎಸ್‌ಎಸ್ ಫೌಂಡೇಷನ್ ಶ್ರೀಹರಿ, ಶ್ರೀನಿವಾಸ್‌ಭಟ್ ಇದ್ದರು.