Advertisement

ಕೌಶಲ-ನೈತಿಕತೆ ಆದ್ಯತೆಯ ಶಿಕ್ಷಣ ಅನಿವಾರ್ಯ

10:06 AM Feb 04, 2020 | Lakshmi GovindaRaj |

ಹುಬ್ಬಳ್ಳಿ: “ಕೇವಲ ಅಂಕ-ಪದವಿಯಾಧಾರಿತ ಶಿಕ್ಷಣದ ಬದಲಾಗಿ ಕೌಶಲ ಹಾಗೂ ನೈತಿಕತೆ ಅಂಶಗಳ ಆದ್ಯತೆಯ ಶಿಕ್ಷಣ ಇಂದಿನ ಅನಿವಾರ್ಯ ವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯ ಪುನರ್‌ಪರಿಶೀಲನೆ ಅತ್ಯಗತ್ಯ’ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

Advertisement

ನಗರದ ದೇಶಪಾಂಡೆ ಪ್ರತಿಷ್ಠಾನದ ದೇಶಪಾಂಡೆ ಎಜುಕೇಶನ್‌ ಟ್ರಸ್ಟ್‌ ಆವರಣದಲ್ಲಿ ನಿರ್ಮಿಸಲಾಗಿರುವ ದೇಶದ ಅತಿ ದೊಡ್ಡ ಕೌಶಲಾಭಿವೃದ್ಧಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪದವಿ, ಉದ್ಯೋಗ ಪಡೆಯುವುದಷ್ಟೇ ಅಲ್ಲ. ವ್ಯಕ್ತಿತ್ವದ ಪರಿಪೂ ರ್ಣತೆ, ಸಬಲೀಕರಣ ಹಾಗೂ ಸಂಸ್ಕಾರದ ರೂಪವಾಗಿದೆ ಎಂದರು.

ಶಿಕ್ಷಣ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಕೊಠಾರಿ ಆಯೋಗ ಹಾಗೂ ಡಾ|ಕಸ್ತೂರಿ ರಂಗನ್‌ ಆಯೋಗ ವರದಿ ನೀಡಿದ್ದು, ಹಲವು ಮಹತ್ವದ ಶಿಫಾರಸು ಮಾಡಿವೆ. ಮಕ್ಕಳು ಆಂಗ್ಲರ ಪ್ರೇರಿತ ಇತಿಹಾಸ ಓದುತ್ತಿ ರುವುದರಿಂದಲೇ ಬಸವೇಶ್ವರ, ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಲ್ಲೂರಿ ಸೀತಾರಾಮರಾಜು, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಸಾಧನೆ, ಜೀವನ, ತತ್ವಗಳೇನು ಎಂಬುದರ ಸ್ಪಷ್ಟ ಚಿತ್ರಣ ಇಲ್ಲವಾಗಿದೆ.

ಇದಕ್ಕಾಗಿಯೇ ಕೌಶಲ ಹಾಗೂ ನೈತಿಕತೆ, ಮೌಲ್ಯಗಳು, ಸಂಸ್ಕೃತಿ- ಸಂಪ್ರದಾಯ ಮನವರಿಕೆಯ ಶಿಕ್ಷಣ ಅವಶ್ಯವಾಗಿದೆ ಎಂದು ಹೇಳಿದರು. ಜಾಗತೀಕರಣ ಹಲವು ಅವಕಾಶ ಸೃಷ್ಟಿಸಿದೆ. ಇಂದಿನ ಪೈಪೋಟಿ ಯುಗದಲ್ಲಿ ಕೌಶಲ ಇಲ್ಲದೆ ಉದ್ಯೋಗ ದೊರೆಯದು. 21ನೇ ಶತಮಾನದ ಬೇಡಿಕೆಗೆ ತಕ್ಕಂತೆ ನಾವು ಸಜ್ಜಾಗಬೇಕಾಗಿದೆ. ಇದಕ್ಕೆ ಉದ್ಯಮ ಕ್ಷೇತ್ರವೂ ವಿಶ್ವವಿದ್ಯಾಲಯಗಳೊಂದಿಗೆ ಕೈಜೋಡಿಸಬೇಕು ಎಂದರು.

ದೇಶಪಾಂಡೆ ಪ್ರತಿಷ್ಠಾನ ದೇಶದಲ್ಲೇ ಅತಿದೊಡ್ಡ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಿ, ಕೌಶಲಯುತ ಮಾನವ ಸಂಪನ್ಮೂಲ ಸೃಷ್ಟಿಗೆ ಮುಂದಾಗಿರುವುದು ಶ್ಲಾಘನೀಯ. ಯುವತಿಯರಿಗೂ ಆದ್ಯತೆ ನೀಡಲಾಗಿದೆ. ಮಹಿಳೆಯರನ್ನು ನಿರ್ಲಕ್ಷಿಸಿ ದೇಶದ ಅಭಿವೃದ್ಧಿ ಅಸಾಧ್ಯ. ಕೇಂದ್ರ ಸರಕಾರ 2015ರಲ್ಲಿ ರಾಷ್ಟ್ರೀಯ ಕೌಶಲ ಉದ್ಯಮ ನೀತಿ ಘೋಷಿಸಿತ್ತು. ಇದರಡಿ ಸುಮಾರು 40ಕ್ಕೂ ಹೆಚ್ಚು ಯೋಜನೆಗಳನ್ನು ನಿರ್ವಹಿಸಲಾಗುತ್ತಿದೆ. ವರ್ಷಕ್ಕೆ ಒಂದು ಕೋಟಿಗೂ ಹೆಚ್ಚು ಜನ ತರಬೇತಿ ಹೊಂದಬೇಕಾಗಿದೆ.

Advertisement

ದೇಶದಲ್ಲಿ 87 ಪ್ರಧಾನಮಂತ್ರಿ ಕೌಶಲ ತರಬೇತಿ ಕೇಂದ್ರಗಳು, 128 ಪ್ರಧಾನಮಂತ್ರಿ ಕೌಶಲ ವಿಕಾಸ ತರಬೇತಿ ಕೇಂದ್ರಗಳಿದ್ದು, ಇವು ಸಾಲದು. ಇನ್ನಷ್ಟು ಹೆಚ್ಚಬೇಕು ಎಂದರು. ಕೇಂದ್ರ-ರಾಜ್ಯಗಳೇ ಎಲ್ಲವನ್ನೂ ಮಾಡಬೇಕು ಎಂಬ ಮನೋಭಾವ ತೊಲಗಬೇಕು. ಸರಕಾರಿ ಯೋಜನೆಗಳಲ್ಲಿ ಫ‌ಲಾನುಭವಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯವಾಗಿದ್ದು, ಯೋಜನೆಗಳು ಜನಾಂದೋಲನ ರೂಪ ಪಡೆಯಬೇಕಾಗಿದೆ. ತಿನ್ನಲು ಮೀನು ನೀಡುವ ಬದಲು ಮೀನು ಹಿಡಿಯು ವುದನ್ನು ಕಲಿಸುವ ಅವಶ್ಯಕತೆ ಇದೆ. ದೇಶದ ಸುಸ್ಥಿರತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಪಂಚಸೂತ್ರ ಬೋಧನೆ: ತಂದೆ-ತಾಯಿ, ಜನ್ಮಭೂಮಿ, ಮಾತೃಭಾಷೆ, ಸಂಸ್ಕೃತಿ-ಪರಂಪರೆ, ಗುರು ಈ 5 ಅಂಶಗಳನ್ನು ಯಾರೊಬ್ಬರೂ ಕಡೆಗಣಿಸ ಬಾರದು ಎಂದು ಹೇಳುವ ಮೂಲಕ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಯುವ ಸಮೂಹಕ್ಕೆ ಬದುಕಿನ ಪಾಠ ಮಾಡಿದರು. ಮಾತೃಭಾಷೆಗೆ ಒತ್ತು ಕೊಡಿ, ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಿ, ಮಾತೃಭಾಷೆ ಎಂಬುದು ಕಣ್ಣು ಇದ್ದಂತೆ, ಇಂಗ್ಲಿಷ್‌ ಕನ್ನಡಕ ಇದ್ದಂತೆ, ಕಣ್ಣು ಇಲ್ಲವೆಂದಾದರೆ ಯಾವ ಕನ್ನಡಕ ಬಳಸಿದರೇನು ಪ್ರಯೋಜನ? ಮಾತೃಭಾಷೆಯಲ್ಲಿನ ವ್ಯವಹಾರ ಸರಕಾರ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಳವಾಗಬೇಕಾಗಿದೆ ಎಂದರು.

ಗೂಗಲ್‌ ಬಂದಿದೆ ಎಂದು ಗುರುವನ್ನು ಮರೆಯುವುದು ಸರಿಯಲ್ಲ. ಯುವಕರು ಕನಸು ಕಾಣಬೇಕು. ಅದರ ಸಾಕಾರಕ್ಕೂ ಪರಿಶ್ರಮ ಪಡಬೇಕು. ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳನ್ನು ಎಂದಿಗೂ ಮರೆಯಬಾರದು. ಶಿಕ್ಷಣ ಪಡೆಯಿರಿ, ವಿದೇಶಕ್ಕೆ ಹೋಗಿ ಗಳಿಸಿರಿ. ಆದರೆ, ಮಾತೃನೆಲಕ್ಕೆ ಹಿಂದಿರುಗಿ ನಿಮ್ಮದೇ ಕೊಡುಗೆ ನೀಡಿ. ಯುವಕರು ನಕಾರಾತ್ಮಕ ಚಿಂತನೆ ತೊರೆದು ಸಕಾರಾತ್ಮಕ ಚಿಂತನೆಯಲ್ಲಿ ತೊಡಗಬೇಕು. ಹಿಂಸಾಚಾರಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕ ಆಸ್ತಿ ಹಾನಿ ಮಾಡಿದರೆ ತೆರಿಗೆ ರೂಪದಲ್ಲಿ ನಾವೇ ಅದನ್ನು ಪಾವತಿಸ ಬೇಕಾಗುತ್ತದೆ ಎಂಬ ಸಣ್ಣ ಅರಿವು ಇರಬೇಕು. ಬುಲೆಟ್‌ಗಿಂತಲೂ ಬ್ಯಾಲೆಟ್‌ ಪ್ರಭಾವಶಾಲಿ ಎಂಬುದನ್ನು ಮರೆಯಬೇಡಿ ಎಂದರು.

ದೇಶದ ಅತಿ ದೊಡ್ಡ ಕೇಂದ್ರ: ದೇಶಪಾಂಡೆ ಪ್ರತಿಷ್ಠಾನದ ದೇಶಪಾಂಡೆ ಎಜುಕೇಶನ್‌ ಟ್ರಸ್ಟ್‌ ಆವರಣದಲ್ಲಿ ನಿರ್ಮಿಸ ಲಾಗಿರುವ ಕೌಶಲಾಭಿವೃದ್ಧಿ ಕೇಂದ್ರ ದೇಶದ ಅತಿದೊಡ್ಡ ಕೌಶಲಾಭಿವೃದ್ಧಿ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿ ಪ್ರತಿವರ್ಷ 2,500ಕ್ಕೂ ಅಧಿಕ ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಇದುವರೆಗೆ ಸುಮಾರು 10,000ಕ್ಕೂ ಅಧಿಕ ಜನರು ತರಬೇತಿ ಹೊಂದಿದ್ದು, ಶೇ.90 ಜನರು ಉದ್ಯೋಗ ಪಡೆದಿದ್ದಾರೆ.

ರೈತನ ಮಗನೆಂಬ ಹೆಮ್ಮೆ: ರೈತನ ಮಗ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಕೃಷಿ ಉತ್ಪಾದನೆ ಹೆಚ್ಚಬೇಕಾಗಿದೆ. ಕಡಿಮೆ ಬಡ್ಡಿದರದಲ್ಲಿ ಸಕಾಲಿಕ ಸಾಲ ದೊರೆಯಬೇಕಿದ್ದು, ಹೊಸ ತಂತ್ರಜ್ಞಾನ ಮತ್ತು ಮಾರುಕಟ್ಟೆ, ಸಾರಿಗೆ, ಗೋದಾಮಿನಂತಹ ಸೌಲಭ್ಯಗಳು ಹೆಚ್ಚಬೇಕಿದೆ. ಕೃಷಿಯಿಂದ ಲಾಭವಿದೆ ಎಂದು ಮನವರಿಕೆ ಆಗಬೇಕಿದೆ. ಅನೇಕ ನದಿಗಳನ್ನು ಸಾಯಿಸಿದ್ದೇವೆ, ಜಲಮೂಲಗಳನ್ನು ದುರ್ಬಳಕೆ ಮಾಡಿಕೊಂಡಿದ್ದೇವೆ, ಮರಗಳನ್ನು ಕಡಿದು ಹಾಕಿದ್ದೇವೆ, ಪರಿಸರದ ಜತೆ ಸಂಘರ್ಷಕ್ಕಿಳಿದಿದ್ದೇವೆ, ಇದರಿಂದಾಗಿಯೇ ಕರ್ನಾಟಕ ಸೇರಿದಂತೆ ಅನೇಕ ಕಡೆ ನೆರೆ-ಬರವನ್ನು ಏಕಕಾಲಕ್ಕೆ ಅನುಭವಿಸುವಂತಾಗಿದೆ. ನಿಸರ್ಗಸ್ನೇಹಿ ಕೃಷಿ-ಬದುಕು ನಮ್ಮದಾಗಬೇಕಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನುಡಿದರು.

ಮಹದಾಯಿ: ಉಪರಾಷ್ಟ್ರಪತಿಗೆ ಮನವಿ
ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಹಲವು ರೈತರು ಮನವಿ ಸಲ್ಲಿಸಿದ್ದಾರೆ. ಆದರೆ, ಸಾಂವಿಧಾನಿಕ ಸ್ಥಾನದಲ್ಲಿರುವುದರಿಂದ ಆ ವಿಷಯದಲ್ಲಿ ಏನನ್ನೂ ಮಾತನಾಡಲು ಬರುವುದಿಲ್ಲ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು. ನಗರದ ಪ್ರವಾಸಿ ಮಂದಿರಕ್ಕೆ ಅನೇಕ ರೈತರು ಆಗಮಿಸಿ ಮಹದಾಯಿ ವಿಚಾರದಲ್ಲಿ ಮನವಿ ಸಲ್ಲಿಸಿದರು. ಅವರ ಬೇಡಿಕೆ, ಅನಿಸಿಕೆಗಳನ್ನು ಆಲಿಸಿದೆ. ಆದರೆ, ಸಾಂವಿಧಾನಿಕ ಸ್ಥಾನದಲ್ಲಿ ಇರುವುದರಿಂದ ಇದಕ್ಕೆ ಪ್ರತಿಕ್ರಿಯೆ ನೀಡಲು ಹಾಗೆಯೇ ಯೋಜನೆ ಕುರಿತು ಹೇಳಿಕೆ ನೀಡಲು ಆಗದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದೇನೆ. ತಮ್ಮ ಅನಿಸಿಕೆಯಿಂದ ರೈತರು ಸಹ ತೃಪ್ತಿಪಟ್ಟರು ಎಂದು ನಾಯ್ಡು ಅವರು ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next