ಬೆಂಗಳೂರು: ರಾಜ್ಯದ ಉದ್ದಿಮೆಗಳಿಗೆ ಆವಶ್ಯಕವಾದ ಕೌಶಲವನ್ನು ಯುವಜನರಲ್ಲಿ ಸೃಷ್ಟಿಸಲು ಸರಕಾರ ಪ್ರಯತ್ನಿಸಲಿದೆ. ಈ ನಿಟ್ಟಿನಲ್ಲಿ ನಿರುದ್ಯೋಗಿ ಭತ್ತೆ (ಯುವ ನಿಧಿ) ಜತೆಗೆ ತರಬೇತಿ ನೀಡುವ ಯೋಜನೆ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
“ಶಿಕ್ಷಣಕ್ಕಾಗಿ ಸಿಎಸ್‌ಆರ್’ ಸಮಾವೇಶದಲ್ಲಿ ಅವರು ಮಾತ ನಾಡಿದರು. ಯುವನಿಧಿ ಜತೆಗೆ ಯುವಕರಿಗೆ ಕೌಶಲ ತರಬೇತಿ ನೀಡುತ್ತೇವೆ. ತನ್ಮೂಲಕ ಕೌಶಲ ಭರಿತ ಯುವಕರನ್ನು ಸೃಷ್ಟಿಸಿ ಅವರಿಗೆ ನಮ್ಮಲ್ಲಿರುವ ಸಂಸ್ಥೆಗಳಲ್ಲಿ ಕೆಲಸ ದೊರಕಿಸಿ ಕೊಡುವ ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳ ಜತೆ ಪ್ರತ್ಯೇಕ ಸಭೆ ಆಯೋಜಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ಸಮಾಜವನ್ನು ಆರ್ಥಿಕ ಹಾಗೂ ಸಾಮಾಜಿಕ ವಾಗಿ ಸಶಕ್ತಗೊಳಿಸಲು ಹಾಗೂ ಭವಿಷ್ಯದ ಉತ್ತಮ ವ್ಯಕ್ತಿಗಳನ್ನು ರೂಪಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಇನ್ನೂ ಶೇ. 24ರಷ್ಟು ಅನಕ್ಷರಸ್ಥರಿದ್ದು, ಎಲ್ಲರಿಗೂ ಶಿಕ್ಷಣ ದೊರೆತಾಗ ಮಾತ್ರ ಆಭಿವೃದ್ಧಿ ಸಾಧ್ಯ. ಅಸಮಾನತೆ ಹೋಗಲಾಡಿಸಿ ಸರ್ವರಿಗೂ ಉತ್ತಮ ಶಿಕ್ಷಣ ದೊರೆಯಲು ಸಿಎಸ್‌ಆರ್ ನಿಧಿಯನ್ನು ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿಗೆ ಉಪಯೋಗಿಸುವುದು ಆವಶ್ಯಕ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟಂಬರ್‌ನಿಂದ ಅಕ್ಕಿ ನೀಡಲು ಪ್ರಯತ್ನ
ಅನ್ನಭಾಗ್ಯದಡಿ ಮುಂದಿನ ತಿಂಗಳಿನಿಂದ ಅಕ್ಕಿ ನೀಡಲು ಪ್ರಯತ್ನಿಸುವುದಾಗಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಅನಿವಾರ್ಯ ಕಾರಣಗಳಿಂದ ಈಗ ನಗದು ನೀಡಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ಅಕ್ಕಿ ಪೂರೈಸಲು ಮುಂದೆ ಬಂದಿವೆ. ಜತೆಗೆ ಸ್ಥಳೀಯ ಗಿರಣಿ ಮಾಲಕರೂ ಮುಂದೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದರು.
ಗೃಹಜ್ಯೋತಿ: ಇಂದು ಚಾಲನೆ
ಕಲಬುರಗಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ “ಗೃಹಜ್ಯೋತಿ’ ಯೋಜನೆಗೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿಯಲ್ಲಿ ಕಲಬುರಗಿಯಲ್ಲಿ ಚಾಲನೆ ಸಿಗಲಿದೆ. ಇಲ್ಲಿನ ಎನ್.ವಿ. ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.